ಮೇವು ಹಗರಣ: ಲಾಲು ಪ್ರಸಾದ್ ಯಾದವ್ ಗೆ 5 ವರ್ಷ ಜೈಲು ಶಿಕ್ಷೆ, 60 ಲಕ್ಷ ದಂಡ.
ಮೇವು ಹಗರಣಕ್ಕೆ ಸಂಬಂಧಿಸಿದ 5ನೇ ಪ್ರಕರಣದಲ್ಲಿ ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ನಾಯಕ ಲಾಲು ಪ್ರಸಾದ್ ಯಾದವ್‌ಗೆ ರಾಂಚಿಯ ಸಿಬಿಐ ವಿಶೇಷ ನ್ಯಾಯಾಲಯವು ಸೋಮವಾರ ಐದು ವರ್ಷಗಳ ಜೈಲು ಶಿಕ್ಷೆ ಮತ್ತು 60 ಲಕ್ಷ ರೂ ದಂಡ ವಿಧಿಸಿದೆ.
ಫೆಬ್ರವರಿ 15 ರಂದು ಆರ್‌ಜೆಡಿ ಮುಖ್ಯಸ್ಥರನ್ನು ಈ ಪ್ರಕರಣದಲ್ಲಿ ದೋಷಿ ಎಂದು ಘೋಷಿಸಲಾಗಿದ್ದು, ಶಿಕ್ಷೆಯ ಪ್ರಮಾಣವನ್ನು ಇಂದು ಪ್ರಕಟಿಸಲು ನಿರ್ಧರಿಸಲಾಗಿದೆ. ಯಾದವ್ ಅವರು ಡೊರಾಂಡಾ ಖಜಾನೆಯಿಂದ 139.35 ಕೋಟಿ ರೂ ಮೊತ್ತದ ಅಕ್ರಮ ಹಣ ಹಿಂಪಡೆದ ಪ್ರಕರಣದಲ್ಲಿ ಸಿಬಿಐ ನ್ಯಾಯಾಲಯದಿಂದ ತಪ್ಪಿತಸ್ಥರೆಂದು ಸಾಬೀತಾಗಿದೆ.
ಕಳೆದ ವಾರ ದೋಷಾರೋಪಣೆಯ ನಂತರ ಅನಾರೋಗ್ಯದ ಕಾರಣ ನೀಡಿ ಲಾಲು ಪ್ರಸಾದ್ ಹೊತ್ವಾರ್ ಜೈಲಿನಿಂದ ರಾಂಚಿಯ ರಾಜೇಂದ್ರ ವೈದ್ಯಕೀಯ ವಿಜ್ಞಾನ ಸಂಸ್ಥೆಗೆ (RIMS) ದಾಖಲಾಗಿದ್ದರು.
73 ವರ್ಷದ ಹಿರಿಯ ರಾಜಕಾರಣಿ ಲಾಲು ಪ್ರಸಾದ್ ಯಾದವ್ ಮೇವು ಹಗರಣಕ್ಕೆ ಸಂಬಂಧಿಸಿದಂತೆ ನಾಲ್ಕು ಪ್ರಕರಣಗಳಲ್ಲಿ ಈ ಹಿಂದೆ 14 ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿದ್ದರು.
ಡೊರಾಂಡಾ ಖಜಾನೆ ಹಗರಣ ಪ್ರಕರಣದಲ್ಲಿ ಒಟ್ಟು 170 ಜನರನ್ನು ಆರೋಪಿಗಳೆಂದು ಹೆಸರಿಸಲಾಗಿತ್ತು. ಇವರಲ್ಲಿ 55 ಮಂದಿ ಸಾವನ್ನಪ್ಪಿದ್ದಾರೆ, ಏಳು ಮಂದಿ ಸರ್ಕಾರಿ ಸಾಕ್ಷಿಗಳಾಗಿದ್ದಾರೆ, ಆರು ಮಂದಿ ತಲೆಮರೆಸಿಕೊಂಡಿದ್ದಾರೆ ಮತ್ತು ಇಬ್ಬರು ತಮ್ಮ ವಿರುದ್ಧದ ಆರೋಪಗಳನ್ನು ಒಪ್ಪಿಕೊಂಡಿದ್ದಾರೆ. ಯಾದವ್ ಸೇರಿದಂತೆ ಉಳಿದ 99 ಆರೋಪಿಗಳ ಪೈಕಿ ಸಿಬಿಐ ಕೋರ್ಟ್ ಕಳೆದ ವಾರ ತೀರ್ಪು ನೀಡಿತ್ತು.