ಬೆಂಗಳೂರು – ಬಿಡದಿ ಸಮಗ್ರ ಉಪನಗರ ಯೋಜನಾ ಪ್ರದೇಶದಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಪತ್ನಿ ಅನಿತಾ ಕುಮಾರಸ್ವಾಮಿ ಮತ್ತು ಪುತ್ರ ನಿಖಿಲ್ ಕುಮಾರಸ್ವಾಮಿ ಅವರ ಒಡೆತನದ ಜಮೀನಿಗೆ ಸಂಬಂಧಿಸಿದ ದಾಖಲೆಗಳನ್ನು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಜಿಬಿಡಿಎ) ಅಧ್ಯಕ್ಷ ಗಾಣಕಲ್ ನಟರಾಜ್ ಸೋಮವಾರ ಬಿಡುಗಡೆ ಮಾಡಿದ್ದಾರೆ.
ಈ ಬೆಳವಣಿಗೆಯ ಹಿಂದಿನ ಪ್ರಮುಖ ಕಾರಣ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಬಿಡದಿ ಉಪನಗರ ಯೋಜನೆಗೆ ಸಂಬಂಧಿಸಿದಂತೆ ಕುಮಾರಸ್ವಾಮಿ ಕುಟುಂಬದವರು ಭೂ ಪರಿಹಾರ ಕೋರಿ ಅರ್ಜಿ ಸಲ್ಲಿಸಿದ್ದಾರೆ ಎಂದು ಹೇಳಿದ್ದಕ್ಕೆ, ನಿಖಿಲ್ ಕುಮಾರಸ್ವಾಮಿ ಸವಾಲು ಹಾಕಿದ್ದರು. ತಮ್ಮ ತಾಯಿ ಪರಿಹಾರಕ್ಕೆ ಅರ್ಜಿ ಸಲ್ಲಿಸಿದ್ದಾರೆ ಎಂದು ಶಿವಕುಮಾರ್ ಸಾಬೀತುಪಡಿಸಿದರೆ, ತಾಯಿಯ ಹೆಸರಿನಲ್ಲಿರುವ ಎಲ್ಲ ಜಮೀನನ್ನು ಬಡವರಿಗೆ ದಾನ ಮಾಡುವುದಾಗಿ ನಿಖಿಲ್ ಭಾನುವಾರ ನಡೆದ ಜೆಡಿಎಸ್ ಸಮಾವೇಶದಲ್ಲಿ ಹೇಳಿಕೆ ನೀಡಿದ್ದರು.
ಯೋಜನೆ ಪ್ರಕಟವಾದ ಮೂರೇ ದಿನಕ್ಕೆ ಪ್ರಾಧಿಕಾರಕ್ಕೆ ಪತ್ರ
ನಿಖಿಲ್ ಅವರ ಈ ಸವಾಲಿಗೆ ಉತ್ತರವಾಗಿ, ಜಿಬಿಡಿಎ ಅಧ್ಯಕ್ಷ ನಟರಾಜ್ ಅವರು ಕುಮಾರಸ್ವಾಮಿ ಕುಟುಂಬಕ್ಕೆ ಸೇರಿದ ಜಮೀನುಗಳ ದಾಖಲೆಗಳನ್ನು ಬಿಡುಗಡೆ ಮಾಡಿದರು. ಅವರು ಮಾತನಾಡಿ, “ಯೋಜನೆಯ ಪ್ರಾಥಮಿಕ ಅಧಿಸೂಚನೆ ವಿಶೇಷ ರಾಜ್ಯಪತ್ರ ಮಾರ್ಚ್ 14ರಂದು ಪ್ರಕಟವಾಗಿತ್ತು. ನಂತರ ಮಾರ್ಚ್ 26ರಂದು ಕನ್ನಡ ಮತ್ತು ಇಂಗ್ಲಿಷ್ ದಿನಪತ್ರಿಕೆಗಳಲ್ಲಿ ಜಾಹೀರಾತು ನೀಡಲಾಗಿತ್ತು. ಇದಾದ ಕೇವಲ ಮೂರು ದಿನಗಳ ನಂತರ, ಮಾರ್ಚ್ 29ರಂದು ಅನಿತಾ ಮತ್ತು ನಿಖಿಲ್ ಕುಮಾರಸ್ವಾಮಿ ಅವರು ಪ್ರಾಧಿಕಾರದ ಆಯುಕ್ತರಿಗೆ ಪತ್ರ ಬರೆದಿದ್ದಾರೆ” ಎಂದು ತಿಳಿಸಿದರು.
ಯಾವ ಜಮೀನುಗಳ ಕುರಿತು ಪತ್ರ?
ಬಿಡುಗಡೆ ಮಾಡಲಾದ ದಾಖಲೆಗಳ ಪ್ರಕಾರ, ನಿಖಿಲ್ ಕುಮಾರಸ್ವಾಮಿ ಅವರು ಹೊಸೂರಿನ ಸರ್ವೆ ನಂ. 26ರಲ್ಲಿರುವ ನಾಲ್ಕು ಎಕರೆ ಜಮೀನಿಗೆ ಸಂಬಂಧಿಸಿದಂತೆ ಲಕ್ಷ್ಮೀದೇವಮ್ಮ ಅವರಿಂದ ಜಿಪಿಎ (ಜನರಲ್ ಪವರ್ ಆಫ್ ಅಟಾರ್ನಿ) ಮತ್ತು ಕ್ರಯದ ಕರಾರುಪತ್ರ ಮಾಡಿಕೊಂಡಿರುವುದಾಗಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಅದೇ ರೀತಿ, ಅನಿತಾ ಕುಮಾರಸ್ವಾಮಿ ಅವರು ಹೊಸೂರು ಮತ್ತು ಬನ್ನಿಗಿರಿ ಗ್ರಾಮಗಳ ಒಂಬತ್ತು ಸರ್ವೆ ನಂಬರ್‌ಗಳಲ್ಲಿ ಒಟ್ಟು 29 ಎಕರೆ 10 ಗುಂಟೆ ಜಮೀನು ತಮ್ಮ ಹೆಸರಿನಲ್ಲಿ ಖಾತೆ ಮತ್ತು ಪಹಣಿ ದಾಖಲಾಗಿವೆ ಎಂದು ಹೇಳಿದ್ದಾರೆ. ಈ ಜಮೀನಿನ ಜವಾಬ್ದಾರಿಯನ್ನು ವಿನಯ್ ಗೌಡ ಎಂ.ಜಿ. ಎಂಬುವವರಿಗೆ ಎಸ್‌ಪಿಎ (ಸ್ಪೆಷಲ್ ಪವರ್ ಆಫ್ ಅಟಾರ್ನಿ) ಮೂಲಕ ವಹಿಸಿದ್ದು, ಈಗ ಆ ಜಮೀನನ್ನು ತಮ್ಮ ಸ್ವಾಧೀನಕ್ಕೆ ಪಡೆದಿರುವುದಾಗಿ ಪತ್ರದಲ್ಲಿ ವಿವರಿಸಿದ್ದಾರೆ ಎಂದು ನಟರಾಜ್ ಸ್ಪಷ್ಟಪಡಿಸಿದರು. ಈ ವಿವಾದಕ್ಕೆ ಸಂಬಂಧಿಸಿದಂತೆ ಮುಂದಿನ ದಿನಗಳಲ್ಲಿ ಮತ್ತಷ್ಟು ಬೆಳವಣಿಗೆಗಳು ನಡೆಯುವ ಸಾಧ್ಯತೆ ಇದೆ.








