ಭೂ ಸುಧಾರಣಾ ತಿದ್ದುಪಡಿ ಕಾಯ್ದೆ ಜಾರಿ ಹಿಂದೆ 60 ಸಾವಿರ ಕೋಟಿ ಅವ್ಯವಹಾರ : ಸಿದ್ದು ಬಾಂಬ್
ಬೆಂಗಳೂರು ; ರಾಜ್ಯ ಸರ್ಕಾರ ಸುಗ್ರೀವಾಜ್ಞೆ ಮೂಲಕ ವಿವಾದಿತ ಭೂ ಸುಧಾರಣಾ ತಿದ್ದುಪಡಿ ಕಾಯ್ದೆಯನ್ನು ಜಾರಿಗೊಳಿಸಲು ಮುಂದಾಗಿದೆ. ಇದಕ್ಕೆ ವಿಪಕ್ಷಗಳಿಂದ ಭಾರಿ ವಿರೋಧ ವ್ಯಕ್ತವಾಗುತ್ತಿದೆ. ಇದೀಗ ಈ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದು, ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ಇಂದು ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಸುಗ್ರೀವಾಜ್ಞೆ ಮೂಲಕ ಜಾರಿಗೊಳಿಸಿರುವ ಭೂ ಸುಧಾರಣಾ ಕಾಯ್ದೆಯ ಹಿಂದೆ ಸುಮಾರು 60 ಸಾವಿರ ಕೋಟಿ ರೂಪಾಯಿಯ ವ್ಯವಹಾರವಿದೆ. ಇದು ಗಣಿಹಗರಣಕ್ಕಿಂತ ದೊಡ್ಡ ಭ್ರಷ್ಟಚಾರವಾಗಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
1961ರ ಭೂ ಸುಧಾರಣಾ ಕಾಯ್ದೆಯನ್ನು ಆಗಿನ ಮುಖ್ಯಮಂತ್ರಿ ದೇವರಾಜ ಅರಸು ಅವರು 1974ರ ಮಾರ್ಚ್ 1ರಲ್ಲಿ ಜಾರಿಗೆ ತಂದರು. ಅಂದು ಸುವರ್ಣಾಕ್ಷರಗಳಲ್ಲಿ ಬರೆದಿಡಬೇಕಾದ ದಿನ. ಈಗಿನ ಸರ್ಕಾರ ಕಾಯ್ದೆಯಲ್ಲಿದ್ದ ಸೆಕ್ಷನ್ 63, 79ಎ,ಬಿ,ಸಿ ಮತ್ತು 80ನ್ನು ರದ್ದು ಗೊಳಿಸುವ ಸುಗ್ರೀವಾಜ್ಞೆಯನ್ನು ಮಾರ್ಚ್ 13ರಂದು ಜಾರಿಗೆ ತರಲಾಗಿದೆ. ಇದು ಕರಾಳದಿನ ಎಂದು ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಕಾಯ್ದೆಯ ಸೆಕ್ಷನ್ 63ರಲ್ಲಿ ಪ್ರತಿಯೊಬ್ಬರು ಭೂಮಿ ಹೊಂದಲು ಮಿತಿ ನಿಗದಿ ಪಡಿಸಲಾಗಿತ್ತು. ನೆರೆಯ ಕೇರಳದಲ್ಲಿ 20, ತಮಿಳುನಾಡಿನಲ್ಲಿ 30, ಆಂಧ್ರಪ್ರದೇಶದಲ್ಲಿ 54 ಎಕರೆ ಹೊಂದಲು ಅವಕಾಶ ಇದೆ. ಕರ್ನಾಟಕದಲ್ಲಿ 118 ಎಕರೆ ಹೊಂದಲು ಅವಕಾಶ ಇತ್ತು. ಅದನ್ನು ಕಾಯ್ದೆ ತಿದ್ದುಪಡಿ ಮೂಲಕ 436 ಎಕರೆಗೆ ಹೆಚ್ಚಿಸಲಾಗಿದೆ ಎಂದ ಸಿದ್ದರಾಮಯ್ಯ, ಸೆಕ್ಷನ್ 79ಎ ಅಡಿಯಲ್ಲಿ ಕೃಷಿಯೇತರ ಆದಾಯ 25 ಲಕ್ಷ ಮೀರಿದವರು ಕೃಷಿ ಭೂಮಿ ಖರೀದಿಸಬಾರದು ಎಂದಿದೆ. ಸೆಕ್ಷನ್ 79ಬಿ ರೈತರಲ್ಲದವರು ಕೃಷಿ ಭೂಮಿ ಖರೀದಿಸಬಾರದು ಎಂದಿದೆ. 97ಸಿ ಭೂಮಿ ಖರೀದಿಸುವವರು ಸಲ್ಲಿಸುವ ಸುಳ್ಳು ಪ್ರಮಾಣ ಪತ್ರ ಸಲ್ಲಿಸಿದ್ದರೆ ಶಿಕ್ಷೆಗೆ ಗುರಿ ಪಡಿಸಲು ಅವಕಾಶ ಇದೆ. ಸೆಕ್ಷನ್ 80 ಕೃಷಿಕರಲ್ಲದವರು ಭೂಮಿ ಖರೀದಿಸುವಂತಿಲ್ಲ ಎಂದಿತ್ತು. ಆದ್ರೆ, ಈಗ ಎಲ್ಲಾ ಸೆಕ್ಷನ್ ಗಳನ್ನು ಪೂರ್ವಾನ್ವಯವಾಗುವಂತೆ ಸಂಪೂರ್ಣವಾಗಿ ರದ್ದು ಮಾಡಿದ್ದಾರೆ ಎಂದರು.
ಇನ್ನು ರಾಜ್ಯದಾದ್ಯಂತ ಸೆಕ್ಷನ್ 79 ಎ,ಬಿ ಅಡಿ 13814 ಪ್ರಕರಣಗಳು ದಾಖಲಾಗಿ ವಿಚಾರಣೆ ನಡೆಯುತ್ತಿದ್ದವು.
ಬೆಂಗಳೂರು ನಗರದಲ್ಲಿ 1080 ಪ್ರಕರಣಗಳು ಬಾಕಿ ಇವೆ. ಈ ಹಿಂದೆ ಕೃಷಿಯೇತರ ಆದಾಯ ಮಿತಿಯನ್ನು 25 ಲಕ್ಷಕ್ಕೆ ಹೆಚ್ಚಿಸುವ ಮುನ್ನಾ 1129 ಹಳೆ ಕೇಸುಗಲಿದ್ದವು, ಆದಾಯ ಮಿತಿ ಹೆಚ್ಚಿಸಿದ ಬಳಿಕ 12685 ಹೊಸ ಕೇಸುಗಳು ದಾಖಲಾಗಿವೆ. ಈಗ ಎಲ್ಲವೂ ರದ್ದಾಗಿವೆ. ಪ್ರತಿ ಪ್ರಕರಣದಲ್ಲಿ 4 ಎಕರೆ ಎಂದು ಅಂದಾಜಿಸಿದರೂ 52 ಸಾವಿರ ಎಕರೆ ಪ್ರದೇಶಗಳ ಭೂ ತಕರಾರುಗಳು ರದ್ದುಗೊಂಡಿವೆ. ಬೆಂಗಳೂರಿನಲ್ಲಿ ಭೂಮಿ ಬೆಲೆ ಕೋಟ್ಯಂತರ ರೂಪಾಯಿ ಇದೆ.
ಒಟ್ಟು ಭೂಮಿಯ ಮೌಲ್ಯ ಸುಮಾರು 45 ರಿಂದ 50 ಸಾವಿರ ಕೋಟಿಯಷ್ಟಿದೆ. ಇನ್ನೂ ಸಹಕಾರ ಸಂಘಗಳು ಮತ್ತು ಮಧ್ಯವರ್ತಿಗಳ ಮೂಲಕ ಅಕ್ರಮವಾಗಿ ಖರೀದಿಸಿರುವ ಭೂಮಿಯ ಬಗ್ಗೆ ಸರ್ಕಾರವೇ ಸಮೀಕ್ಷೆ ನಡೆಸಿದ್ದು, ಅದರ ಮೌಲ್ಯ ಸುಮಾರು 10 ಸಾವಿರ ಕೋಟಿ ರೂಪಾಯಿಯಾಗಲಿದೆ. ಇದು ಗಣಿಹಗರಣಕ್ಕಿಂತ ದೊಡ್ಡ ಭ್ರಷ್ಟಚಾರ ಎಂದು ಆರೋಪಿಸಿದರು.
ಇನ್ನು ಗಣಿಹಗರಣದಲ್ಲಿ ನಿರ್ದೀಷ್ಟ ಆರೋಪಿಗಳಿದ್ದರು. ಇಲ್ಲಿ ಸರ್ಕಾರವೇ ಶಾಮೀಲಾಗಿದೆ. ಶ್ರೀಮಂತರ, ರಿಯಲ್ ಎಸ್ಟೇಟ್ ಉದ್ಯಮಿಗಳ ಲಾಬಿಗೆ ಮಣಿದಿದೆ. ಭೂಮಿ ಖರೀದಿಸುವ ಶ್ರೀಮಂತರಿಗೆ ಈ ಕಾಯ್ದೆಯಿಂದ ಲಾಭವಾಗಲಿದೆ. ಕೊರೊನಾ ಸಂದರ್ಭದಲ್ಲಿ ಜನ ಹೋರಾಟ ಮಾಡಲಾಗುವುದಿಲ್ಲ ಎಂಬ ಸಂದರ್ಭವನ್ನು ದುರ್ಬಳಕೆ ಮಾಡಿಕೊಂಡು ಕಾಯ್ದೆ ಜಾರಿಗೆ ತರಲಾಗಿದೆ ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.