ಗೌಹಾತಿ, ಜೂನ್ 2 : ಅಸ್ಸಾಂನಲ್ಲಿ ಭೂಕುಸಿತದಿಂದಾಗಿ 20 ಜನರು ಮೃತಪಟ್ಟಿದ್ದಾರೆ. ದಕ್ಷಿಣ ಅಸ್ಸಾಂನ ವಿವಿಧ ಜಿಲ್ಲೆಗಳಲ್ಲಿ ಇಂದು ಭೂಕುಸಿತ ಉಂಟಾಗಿದ್ದು, 20 ಜನರು ಮೃತಪಟ್ಟಿದ್ದಾರೆ. ಇನ್ನೂ ಹಲವಾರು ಮಂದಿ ಮಣ್ಣಿನ ಅಡಿಯಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದ್ದು, ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಇಂದು ಮಧ್ಯಾಹ್ನದ ವೇಳೆ ದಕ್ಷಿಣ ಅಸ್ಸಾಂನ ಮೂರು ಜಿಲ್ಲೆಗಳಲ್ಲಿ ಭೂಕುಸಿತ ಉಂಟಾಗಿದ್ದು, ಹಲವಾರು ಮಂದಿ ಗಾಯಗೊಂಡಿದ್ದಾರೆ. ಕಳೆದ ವಾರದಿಂದ ದಕ್ಷಿಣ ಅಸ್ಸಾಂನ ಹಲವು ಪ್ರದೇಶಗಳಲ್ಲಿ ನಿರಂತರ ಮಳೆಯಾಗುತ್ತಿದ್ದು, ಇದರಿಂದಾಗಿಯೇ ಭೂ ಕುಸಿತ ಸಂಭವಿಸಿದೆ.
ಇಂದು ಸಂಭವಿಸಿದ ಭೂಕುಸಿತದಲ್ಲಿ ದಕ್ಷಿಣ ಅಸ್ಸಾಂನ ಚಾಚರ್ ಜಿಲ್ಲೆಯ 7 ಜನರು ಮತ್ತು ಹೈಲಕಂಡಿ ಜಿಲ್ಲೆಯ 7 ಹಾಗೂ ಕರೀಂಗಂಜ್ ಜಿಲ್ಲೆಯ 6 ಜನರು ಮೃತಪಟ್ಟಿದ್ದಾರೆ ಎಂಬ ವರದಿಗಳು ತಿಳಿಸಿವೆ. ಮಣ್ಣಿನ ಅಡಿಯಲ್ಲಿ ಇನ್ನೂ ಹಲವಾರು ಮಂದಿ ಸಿಲುಕಿದ್ದು, ರಕ್ಷಣಾ ಪಡೆಗಳು ಸ್ಥಳಕ್ಕೆ ಧಾವಿಸಿದ್ದು ಮಣ್ಣನ್ನು ತೆರವುಗೊಳಿಸುವ ಕಾರ್ಯಾಚರಣೆ ಆರಂಭವಾಗಿದೆ. ಅಸ್ಸಾಂನಲ್ಲಿ ಕಳೆದ ವಾರದಿಂದ ಸುರಿಯುತ್ತಿರುವ ಭಾರಿ ಮಳೆ ಮುಂದುವರಿದಿದ್ದು, 9 ಸಾವಿರ ಗ್ರಾಮಸ್ಥರನ್ನು 35 ನಿರಾಶ್ರಿತರ ಶಿಬಿರಗಳಿಗೆ ಕಳುಹಿಸಲಾಗಿದೆ. ಮೇ 26 ಮತ್ತು 27ರಂದು ಸಹ ಕೆಲವು ಪ್ರದೇಶಗಳಲ್ಲಿ ಭೂ ಕುಸಿತವಾಗಿತ್ತು.








