ಪಹಲ್ಲಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯ ಹಿನ್ನೆಲೆಯಲ್ಲಿ ಹಾವೇರಿಯಲ್ಲಿ ಮಾತನಾಡಿದ ಬಿಜೆಪಿ ಉಚ್ಚಾಟಿತ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತೆ ತಮ್ಮ ವಿವಾದಾತ್ಮಕ ಹೇಳಿಕೆಯಿಂದ ಸುದ್ದಿಯಲ್ಲಿ ಇದ್ದಾರೆ. ಭಾರತದಲ್ಲಿರುವ ಕಟ್ಟಕಡೆಯ ಮುಸ್ಲಿಂ ಪಾಕಿಸ್ತಾನಕ್ಕೆ ಹೋಗಬೇಕು. ಅದೇ ರೀತಿ ಪಾಕಿಸ್ತಾನದಲ್ಲಿರುವ ಕೊನೆಯ ಹಿಂದೂ ಭಾರತಕ್ಕೆ ಬರಬೇಕು, ಎಂದು ಅವರು ಘೋಷಣೆ ಮಾಡಿದ್ದಾರೆ.
ಯತ್ನಾಳ್ ತಮ್ಮ ಹೇಳಿಕೆಯಲ್ಲಿ, ಅಂಬೇಡ್ಕರ್ ಅವರು ಆಗಲೇ ಭಾರತ ವಿಭಜನೆಯ ಅಗತ್ಯವಿದೆ ಎಂಬ ಮಾತು ಹೇಳಿದ್ದಾರೆ. ಇಂದು ಮೋದಿ ಪ್ರಧಾನಮಂತ್ರಿ ಆಗಿರುವುದರಿಂದ ಹಿಂದೂಗಳು ಭಾರತದಲ್ಲಿ ಸುರಕ್ಷಿತವಾಗಿದ್ದಾರೆ. ದೇಶದ ಒಳಗಡೆ ಭಯೋತ್ಪಾದನೆ ಮತ್ತು ದೇಶದ್ರೋಹಕ್ಕೆ ಬೆಂಬಲ ನೀಡುವವರನ್ನು ಸಹಿಸಬಾರದು, ಎಂದು ಉಗ್ರ ವಿರೋಧಿ ನಿಲುವು ವ್ಯಕ್ತಪಡಿಸಿದ್ದಾರೆ.
ಇದರ ಜೊತೆಗೆ ಅವರು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹಾಗೂ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧವೂ ಕಿಡಿಕಾರಿದ್ದಾರೆ. ಇವರಂತಹ ನಾಯಕರ ನಿಲುವುಗಳು ರಾಷ್ಟ್ರದ ಭದ್ರತೆಗೆ ಧಕ್ಕೆಯಾಗುತ್ತವೆ. ದೇಶದ ಬದ್ಧತೆಯೇ ಪ್ರಶ್ನೆಯಾಗಿ ಪರಿಣಮಿಸುತ್ತಿದೆ, ಎಂದು ಅವರು ಆರೋಪಿಸಿದ್ದಾರೆ.
ಯತ್ನಾಳ್ ಅವರ ಈ ಹೇಳಿಕೆ ಸಾರ್ವಜನಿಕ ವಲಯದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದ್ದು, ಈ ಹೇಳಿಕೆಗೆ ರಾಜಕೀಯ ವಲಯದಲ್ಲಿಯೂ ನಾನಾ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿರುವಂತೆ, ಮತ್ತೊಮ್ಮೆ ಯತ್ನಾಳ್ ವಿವಾದದ ಕೇಂದ್ರಬಿಂದುವಾಗಿ ಪರಿಣಮಿಸಿದ್ದಾರೆ.








