ಗಾಯನ ಲೋಕದ ಸಾಮ್ರಾಜ್ಞಿಯ ಅದ್ಭುತ 8 ದಶಕಗಳು….
ಗಾನ ಕೋಗಿಲೆ ಲತಾ ಮಂಗೇಶ್ಕರ್ ಅವರನ್ನ ಕಳೆದುಕೊಂಡು ಭಾರತೀಯ ಸಂಗೀತ ಲೊಕ ಬಡವಾಗಿದೆ. ಸುಮಾರು 80 ವರ್ಷಗಳ ಕಾಲ ಸಂಗೀತ ಲೋಕದಲ್ಲಿ ಸಕ್ರಿಯರಾಗಿದ್ದ ಲತಾ ಮಂಗೇಶ್ಕರ್ ಅವರು 28 ಸೆಪ್ಟೆಂಬರ್ 1929 ರಂದು ಮಧ್ಯಪ್ರದೇಶದ ಇಂದೋರ್‌ನಲ್ಲಿ ಜನಿಸಿದರು. 1942 ರಲ್ಲೇ 13 ನೇ ವಯಸ್ಸಿನಲ್ಲಿ ಹಾಡಲು ಪ್ರಾರಂಭಿಸಿದರು. ಲತಾ ಜಿಯವರ ತಂದೆ ಪಂ.ದಿನನಾಥ್ ಮಂಗೇಶ್ಕರ್ ಅವರು ಸಂಗೀತ ಮತ್ತು ಮರಾಠಿ ರಂಗಭೂಮಿಯಲ್ಲಿ ಚಿರಪರಿಚಿತ ಹೆಸರು. ಲತಾ ಜೀ ಅವರಿಗೆ ಸಂಗೀತ ಕಲಿಸಿದವರು ಅವರೇ. ಐದು ಜನ ಒಡಹುಟ್ಟಿದವರಲ್ಲಿ ಹಿರಿಯರಾದ ಲತಾ ಜಿ ಅವರಿಗೆ ಮೂವರು ಸಹೋದರಿದ್ದಾರೆ. ಆಶಾ ಭೋಂಸ್ಲೆ, ಉಷಾ ಮಂಗೇಶ್ಕರ್, ಮೀನಾ ಮಂಗೇಶ್ಕರ್ ಮತ್ತು ಸಹೋದರ ಹೃದಯನಾಥ್ ಮಂಗೇಶ್ಕರ್.
ಲತಾ ಮಂಗೇಶ್ಕರ್ ಅವರು ತಮ್ಮ ಸಹೋದರಿ ಉಷಾ ಮತ್ತು ಸಹೋದರ ಹೃದಯನಾಥ್ ಅವರೊಂದಿಗೆ ಮುಂಬೈನ ಪೆಡ್ಡರ್ ರಸ್ತೆಯ ಪ್ರಭುಕುಂಜ್‌ನಲ್ಲಿ ಮೊದಲ ಮಹಡಿಯಲ್ಲಿ ವಾಸಿಸುತ್ತಿದ್ದರು. ಹಲವು ವರ್ಷಗಳಿಂದ ಇಲ್ಲಿಯೇ ವಾಸವಾಗಿದ್ದರು. ಇಲ್ಲಿಂದ ಸ್ವಲ್ಪ ದೂರದಲ್ಲಿ ಸಹೋದರಿ ಆಶಾ ಭೋಂಸ್ಲೆ ಕೂಡ ವಾಸಿಸುತ್ತಿದ್ದಾರೆ. ಪ್ರಭಾಕುಂಜ್ ಸೊಸೈಟಿಯ ಮುಂಜಾವು ಲತಾ ಮಂಗೇಶ್ಕರ್ ಅವರ ಸಂಗೀತದೊಂದಿಗೆ ಪ್ರಾರಂಭವಾಗುತ್ತಿತ್ತು. ನವೆಂಬರ್ 2019 ರಲ್ಲಿ, ನ್ಯುಮೋನಿಯಾ ಮತ್ತು ಉಸಿರಾಟದ ತೊಂದರೆಯಿಂದಾಗಿ ಲತಾ ಜಿ ಅವರನ್ನು ಬ್ರೀಚ್ ಕ್ಯಾಂಡಿ ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿ ಅವರನ್ನ 28 ದಿನಗಳವರೆಗೆ ಅಡ್ಮಿಟ್ ಮಾಡಲಾಗಿತ್ತು. ನವೆಂಬರ್ 2019 ರಿಂದ, ಅವರು ಮನೆಯಿಂದ ಹೊರಹೋಗುವುದನ್ನೇ ಬಹುತೇಕ ನಿಲ್ಲಿಸಿದ್ದರು.
92 ವರ್ಷದ ಲತಾ ಜಿ 36 ಭಾಷೆಗಳಲ್ಲಿ 50 ಸಾವಿರ ಹಾಡುಗಳನ್ನು ಹಾಡಿದ್ದಾರೆ, ಇದು ಯಾವುದೇ ಗಾಯಕ ಗಾಯಕಿಯ ಹಾಡಿರುವ ದಾಖಲೆಯಾಗಿದೆ. 1000ಕ್ಕೂ ಹೆಚ್ಚು ಚಿತ್ರಗಳಲ್ಲಿ ಧ್ವನಿ ನೀಡಿದ್ದಾರೆ. 1960 ರಿಂದ 2000 ರವರೆಗೆ ಲತಾ ಮಂಗೇಶ್ಕರ್ ಅವರ ಧ್ವನಿಯಿಲ್ಲದ ಚಲನಚಿತ್ರಗಳು ಅಪೂರ್ಣವೆಂದು ಪರಿಗಣಿಸಲ್ಪಡುತ್ತಿತ್ತು. 2000ನೇ ಇಸವಿಯ ನಂತರದಿಂದ ಚಿತ್ರಗಳಲ್ಲಿ ಹಾಡುವುದನ್ನು ಕಡಿಮೆ ಮಾಡಿ ಆಯ್ದ ಕೆಲವು ಚಿತ್ರಗಳಲ್ಲಿ ಮಾತ್ರ ಹಾಡಿದರು. ಅವರ ಕೊನೆಯ ಬಾರಿಗೆ ಹಾಡಿದ್ದು 2015 ರ ಚಲನಚಿತ್ರ ಡನ್ನೋ ವೈ.
ಭಾರತ ರತ್ನ ಪ್ರಶಸ್ತಿಯನ್ನು 2001 ರಲ್ಲಿ ನೀಡಲಾಯಿತು
ಲತಾ ಮಂಗೇಶ್ಕರ್ ಅವರು ಸಂಗೀತ ಪ್ರಪಂಚಕ್ಕೆ ನೀಡಿದ ಕೊಡುಗೆಗಾಗಿ 2001 ರಲ್ಲಿ ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಭಾರತ ರತ್ನವನ್ನು ನೀಡಲಾಯಿತು. ಇದಕ್ಕೂ ಮುನ್ನ ಅವರಿಗೆ ಪದ್ಮವಿಭೂಷಣ, ಪದ್ಮಭೂಷಣ, ದಾದಾಸಾಹೇಬ್ ಫಾಲ್ಕೆ ಸೇರಿದಂತೆ ಹಲವು ಗೌರವಗಳನ್ನು ನೀಡಲಾಗಿತ್ತು. ಲತಾ ಜೀ ಅವರು ಗಾಯಕಿಯಷ್ಟೆ ಅಲ್ಲದೇ ಸಂಗೀತಗಾರರಾಗಿಯೂ ಇದ್ದರು ಮತ್ತು ಅವರು ತಮ್ಮದೇ ಆದ ಚಲನಚಿತ್ರ ನಿರ್ಮಾಣ ಸಂಸ್ಥೆ ಹೊಂದಿದ್ದರು. ಎಂಬುದು ಅನೇಕ ಜನರಿಗೆ ತಿಳಿದಿಲ್ಲ, ಅವರ ಬ್ಯಾನರ್ ಅಡಿಯಲ್ಲಿ “ಲೆಕಿನ್” ಚಲನಚಿತ್ರ ನಿರ್ಮಾಣವಾಗಿತ್ತು. ಈ ಚಿತ್ರಕ್ಕಾಗಿ ಅತ್ಯುತ್ತಮ ಗಾಯಕಿ ರಾಷ್ಟ್ರೀಯ ಪ್ರಶಸ್ತಿಯನ್ನು ಪಡೆದಿದ್ದರು. 61 ವಯಸ್ಸಿನಲ್ಲಿ ಹಾಡುವುದಕ್ಕಾಗಿ ರಾಷ್ಟ್ರೀಯ ಪ್ರಶಸ್ತಿಯನ್ನು ಗೆದ್ದ ಏಕೈಕ ಗಾಯಕಿ ಲತಾ ಮಂಗೇಶ್ಕರ್. ಇದಲ್ಲದೇ “ಲೆಕಿನ್” ಚಿತ್ರಕ್ಕೆ ಇನ್ನೂ 5 ರಾಷ್ಟ್ರೀಯ ಪ್ರಶಸ್ತಿಗಳು ಬಂದಿವೆ.