ಕೊರೊನಾ ಭೀತಿಯಿಂದ 144 ಸೆಕ್ಷನ್ ಜಾರಿ ಮಾಡಲಾಗಿದೆ. ಹಾಗಂತ ಜನರ ಮೇಲೆ ಲಾಠಿ ಬೀಸುವುದ ಸರಿಯಲ್ಲ ಎಂದು ವಿರೋಧ ಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ಈ ವಿಚಾರವಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಬ್ಬವಿದೆ ಅಗತ್ಯ ವಸ್ತುಗಳನ್ನು ಪಡೆಯಲು ಮನೆಯಿಂದ ಹೊರ ಬರುತ್ತಾರೆ. ಅಗತ್ಯ ವಸ್ತುಗಳು ಪಡೆಯಲು ಅವಕಾಶ ಕೊಡದಿದ್ದರೇ ಹೇಗೆ ಎಂದು ಸರ್ಕಾರದ ಕ್ರಮವನ್ನು ಪ್ರಶ್ನಿಸಿದ್ದಾರೆ. ಜೊತೆಗೆ ಕೊರೊನಾ ಹಾವಳಿ ರಾಜ್ಯದಲ್ಲಿ ವೇಗವಾಗಿ ಹರಡುತ್ತಿರುವ ಕಾರಣ ವಿಧಾನಸಭೆ ಮುಂದೂಡಬೇಕು ನಡೆಸುವುದು ಸರಿಯಲ್ಲ ಎಂಬುದು ನಿನ್ನೆ ನಡೆದ ಸದನ ಸಲಹಾ ಸಮಿತಿಯಲ್ಲಿ ತಿಳಿಸಲಾಗಿದೆ. ಆದರೂ ಸಹ ಮಾರ್ಚ್ 28 ರವರೆಗೂ ಸದನ ನಡೆಯಬೇಕೆಂದು ಸರ್ಕಾರ ವಾದಿಸುತ್ತಿದೆ. ನಮ್ಮ ಪಕ್ಷದಿಂದ ಸದನ ನಡೆಯುವುದು ಬೇಡ, ಹಣಕಾಸು ವಿಧೇಯಕಕ್ಕೆ ಒಪ್ಪಿಗೆ ನೀಡುತ್ತೇವೆ ಎಂದು ಹೇಳಿದ್ದೇವೆ. ಆದರೂ ಸಹ ಅಧಿವೇಶನ ಮುಂದುವರೆಸುತ್ತಿದ್ದಾರೆ. ನಿನ್ನೆ ನಡೆದ ಕಲಾಪದಲ್ಲಿ ಕಾನೂನು ಸಚಿವರು ವಿಧೇಯಕಗಳನ್ನು ಮಂಡಿಸಿದ್ದಾರೆ. ಪಂಚಾಯತ್ ರಾಜ್ ವ್ಯವಸ್ಥೆಯನ್ನು ದುರ್ಬಲ ಮಾಡುವ ವಿಧೇಯಕ ಜಾರಿಗೆ ತಂದಿದ್ದಾರೆ. ಹಣಕಾಸು ವಿಧೇಯಕಕ್ಕೆ ಅವಕಾಶ ಮಾಡಿಕೊಡಬೇಕಿತ್ತು ಅದು ಸಹ ಆಗಿಲ್ಲ. ಆ ಕಾರಣಕ್ಕಾಗಿ ಕಲಾಪವನ್ನು ಬಹಿಷ್ಕರಿಸಿದ್ದೇವೆ ಸಿದ್ದರಾಮಯ್ಯ ಹೇಳಿದ್ದಾರೆ.
ಮಾತು ಮುಂದುವರೆಸಿದ ಅವರು ರಾಜ್ಯದಲ್ಲಿ ಇನ್ನೂ ಕ್ವಾರಂಟೈನ್ ಸೆಂಟರ್ ಗಳನ್ನು ಮತ್ತು ಪರೀಕ್ಷಾ ಕೇಂದ್ರಗಳನ್ನು ತೆರದಿಲ್ಲ. ಆರೋಗ್ಯ ಸಚಿವರ ಮತ್ತು ವೈದ್ಯಕೀಯ ಸಚಿವರ ನಡುವೆ ಹೊಂದಾಣಿಕೆ ಇಲ್ಲ. ಕೊರೊನಾ ನಿಯಂತ್ರಣ ಮಾಡುವಲ್ಲಿ ಸರ್ಕಾರ ವಿಫಲವಾಗಿದೆ. ಕ್ವಾರಂಟೈನ್ ಕೆಲಸ ಆರೋಗ್ಯ ಇಲಾಖೆ ಮಾಡಬೇಕು. ಅದು ಬಿಟ್ಟು ಪೊಲೀಸ್ ಇಲಾಖೆ ಕ್ವಾರಂಟೈನ್ ಕೆಲಸ ಮಾಡೋಕೆ ಆಗುತ್ತಾ ? ಎಂದು ಸರ್ಕಾರಕ್ಕೆ ಪ್ರಶ್ನೆ ಹಾಕಿದ್ದಾರೆ. ಮಾಸ್ಸ್ ಮತ್ತು ಸ್ಯಾನಿಟೈಸರ್ ಕೊರತೆ ಬಗ್ಗೆ ಮಾತನಾಡಿದ ಸಿದ್ದರಾಮಯ್ಯ ಆಡಳಿತ ನಡೆಸುತ್ತಿರುವವರು ಉತ್ತರಕುಮಾರರಾಗಿದ್ದಾರಯೇ ಹೊರತು ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎಂದು ಆರೋಪಿಸಿದ್ದಾರೆ








