ಕಾನೂನು ಉಲ್ಲಂಘನೆ - ಚೀನಾಗೆ ಎಚ್ಚರಿಕೆ ನೀಡಿದ ಅಮೆರಿಕ
ಹೊಸದಿಲ್ಲಿ, ಜುಲೈ 15: ಚೀನಾ ಕಾನೂನು ಉಲ್ಲಂಘಿಸಿ ದಕ್ಷಿಣ ಚೀನಾ ಸಮುದ್ರದಾಚೆಗಿನ ಸಂಪನ್ಮೂಲಗಳ ಮೇಲೆ ಹಕ್ಕು
ಸಾಧಿಸಲು ನೋಡುತ್ತಿದೆ ಎಂದು ಅಮೆರಿಕ ಆರೋಪಿಸಿದೆ ಏಷ್ಯಾದ ಕರಾವಳಿ ತೀರ ದೇಶಗಳನ್ನು ಬೆದರಿಸಿ ತನ್ನ ಕಾರ್ಯಸಾಧಿಸಲು ಚೀನಾ ಪ್ರಯತ್ನಿಸುತ್ತಿದ್ದು, ಇದು ಗಡಿ ಕಾನೂನು ಉಲ್ಲಂಘನೆಯಾಗಿದೆ ಎಂದು ಅಮೆರಿಕ ಚೀನಾಕ್ಕೆ ಎಚ್ಚರಿಕೆ ನೀಡಿದೆ.
ಹಲವಾರು ವರ್ಷಗಳಿಂದ ಆಗ್ನೇಯ ಏಷ್ಯಾದ ಕರಾವಳಿ ದೇಶಗಳ ವಿರುದ್ಧ ಬೆದರಿಕೆಯ ಅಸ್ತ್ರ ಪ್ರಯೋಗಿಸುವ ಮೂಲಕ ತನ್ನ ಕಾರ್ಯ ಸಾಧಿಸುತ್ತಿರುವ ಚೀನಾ ಕಾನೂನುಬಾಹಿರವಾಗಿ ದಕ್ಷಿಣ ಚೀನಾ ಸಮುದ್ರದಾಚೆಗೆ ಹಕ್ಕು ಸಾಧಿಸಲು ನೋಡುತ್ತಿದೆ ಎಂದು ಅಮೆರಿಕ ಅಪಾದಿಸಿದೆ.

ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮೈಕ್ ಪೊಂಪಿಯೊ ಅವರು ಚೀನಾ ದಕ್ಷಿಣ ಚೀನಾ ಸಮುದ್ರದಾಚೆ ಸಮರಭ್ಯಾಸ ನಡೆಸುತ್ತಿದ್ದು, ಇದನ್ನು ಅಮೆರಿಕ ಮೊದಲಿನಿಂದಲೂ ವಿರೋಧಿಸಿದೆ. ತನ್ನ ಗಡಿಯೊಳಗೆ ಸಮರಭ್ಯಾಸ ನಡೆಸಿದರೆ ಯಾವುದೇ ಅಭ್ಯಂತರವಿಲ್ಲ. ಆದರೆ ಚೀನಾ ನೌಕಾಪಡೆಯು ಗಡಿ ದಾಟಿ ಯುದ್ದ ನೌಕೆಗಳ ಪ್ರದರ್ಶನ ಹಾಗೂ ಜಲ ಮಾರ್ಗವನ್ನು ಬಳಸಿಕೊಳ್ಳುತ್ತಿದೆ. ಇತರ ದೇಶಗಳ ಮೇಲೆ ಚೀನಾ ಹಕ್ಕು ಸಾಧಿಸುವುದನ್ನು ಅಮೆರಿಕ ಒಪ್ಪುವುದಿಲ್ಲ. ಮತ್ತು ದಕ್ಷಿಣ ಚೀನಾ ಸಮುದ್ರವನ್ನು ತನ್ನ ಸಾಮ್ರಾಜ್ಯವೆಂದು ಬಿಂಬಿಸಲು ನೋಡುತ್ತಿರುವ ಚೀನಾ ಕುತಂತ್ರವನ್ನು ಅಮೆರಿಕ ಒಪ್ಪುವುದಕ್ಕೆ ಸಾಧ್ಯವಿಲ್ಲ ಎಂದು ಪೊಂಪಿಯೋ ಹೇಳಿದ್ದಾರೆ.
ಅಷ್ಟೇ ಅಲ್ಲ ಅಮೆರಿಕ ಆತಂಕದ ವಾತಾವರಣವನ್ನು ಸೃಷ್ಟಿಸಲು ನೋಡುತ್ತಿದೆ ಎಂಬ ಚೀನಾ ಹೇಳಿಕೆಯನ್ನು ಅವರು ನಿರಾಕರಿಸಿದ್ದಾರೆ.








