ಅಂತೂ ಇಂತು ಟ್ರಬಲ್ ಶೂಟರ್ ಡಿ.ಕೆ ಶಿವಕುಮಾರ್ ಅವರಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ದಕ್ಕಿದೆ. ಇದು ಕಾಂಗ್ರೆಸ್ ಗೆ ಹೊಸ ಭರವಸೆ ನೀಡುತ್ತಿದ್ದು, ಪಕ್ಷದ ಕಾರ್ಯಕರ್ತರು ಸಂಭ್ರಮಿಸುತ್ತಿದ್ದಾರೆ. ಡಿಕೆಶಿ ಆಯ್ಕೆ ಎಲ್ಲೋ ಒಂದು ಕಡೆ ಸಿದ್ದರಾಮಯ್ಯ ಅವರಿಗೆ ಹಿನ್ನಡೆಯಾಯ್ತಾ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿವೆ. ಇದರ ಜೊತೆಗೆ ಜೆಡಿಎಸ್ ನ ಒಂದಿಷ್ಟು ನಾಯಕರು ಕಾಂಗ್ರೆಸ್ ಗೆ ಬರ್ತಾರಾ ಎಂಬ ಮಾತುಗಳು ಕೇಳಿ ಬರುತ್ತಿವೆ.
ಹೌದು, ಡಿ.ಕೆ ಶಿವಕುಮಾರ್ ಅವರು ಕೆಪಿಸಿಸಿ ಅಧ್ಯಕ್ಷರಾಗುತ್ತಿದ್ದಂತೆ ಜೆಡಿಎಸ್ ನ ಕೆಲ ನಾಯಕರು ಕಾಂಗ್ರೆಸ್ ಗೆ ಸೇರ್ಪಡೆಯಾಗಲಿದ್ದಾರೆ ಎನ್ನುವ ಮಾತುಗಳು ರಾಜಕೀಯ ವಲಯದಲ್ಲಿ ಹರಿದಾಡುತ್ತಿವೆ. ಜೆಡಿಎಸ್ ನ ಮಧು ಬಂಗಾರಪ್ಪ, ಗುಬ್ಬಿ ಶಾಸಕ ಶ್ರೀನಿವಾಸ್, ವಿಧಾನ ಪರಿಷತ್ ಸದಸ್ಯ ಬೆಮಲ್ ಕಾಂತರಾಜು, ಮಾಜಿ ಶಾಸಕ ಸುರೇಶ್ ಬಾಬು ಸೇರಿದಂತೆ ಹಲವಾರು ಮಂದಿ ಜೆಡಿಎಸ್ ಕಾರ್ಯಕ್ರಮಗಳಿಂದ ದೂರ ಉಳಿದಿದ್ದು, ಇವರೆಲ್ಲಾ ಡಿಕೆಶಿ ಸಂಪರ್ಕದಲ್ಲಿದ್ದಾರಂತೆ. ಇದೀಗ ಶಿವಕುಮಾರ್ ಅವರಿಗೆ ಕೆಪಿಸಿಸಿ ಪಟ್ಟ ಬೇರೆ ಸಿಕ್ಕಿರುವುದರಿಂದ ಜೆಡಿಎಸ್ ಅತೃಪ್ತರು ಡಿಕೆ ಜೊತೆ ಕೈ ಜೋಡಿಸುತ್ತಾರೆ ಎನ್ನಲಾಗಿದೆ.
ಕಾಂಗ್ರೆಸ್ ಗೆ ದಳಪತಿಗಳು: ಕಾರಣಗಳೇನಿರಬಹುದು?
ಒಂದು ವೇಳೆ ಜೆಡಿಎಸ್ ನಾಯಕರು ಕಾಂಗ್ರೆಸ್ ಗೆ ಬರುವುದೇ ಆದ್ರೆ ಇದಕ್ಕೆ ಕಾರಣಗಳೇನಿರಬುದು ಎಂಬುದನ್ನು ನೋಡುವುದಾದರೆ…
- ಜೆಡಿಎಸ್ ನಲ್ಲಿರುವ ಮುಸುಕಿನ ಗುದ್ದಾಟ
ಜೆಡಿಎಸ್ ನಲ್ಲಿ ಎಲ್ಲವೂ ಸರಿ ಇಲ್ಲ ಎಂಬುದು ಹೀಗಾಗಲೇ ಜಗತ್ ಜಾಹೀರಾಗಿದೆ. ಪಕ್ಷದ ವಿರುದ್ಧ ಮಧು ಬಂಗಾರಪ್ಪ ಸೇರಿದಂತೆ ಹಲವು ನಾಯಕರು ಬಹಿರಂಗವಾಗಿಯೇ ಹೇಳಿಕೆ ನೀಡುತ್ತಾ ತಮ್ಮ ಅಸಮಾಧಾನ ಹೊರ ಹಾಕುತ್ತಿದ್ದಾರೆ.
- ರಾಜ್ಯದಲ್ಲಿ ಜೆಡಿಎಸ್ ಅಸ್ತಿತ್ವ ಕಳೆದುಕೊಳ್ಳುತ್ತಿರುವುದು
ಚುನಾವಣೆ ಫಲಿತಾಂಶ ಅತಂತ್ರವಾದಾಗ ಸಿದ್ಧಾಂತಗಳನ್ನು ಬದಿಗೊತ್ತಿ ಜೆಡಿಎಸ್ ಪದೇ ಪದೇ ಮೈತ್ರಿ ಮಾಡಿಕೊಳ್ಳುತ್ತಿದೆ. ಇದು ತಳಮಟ್ಟ ಕಾರ್ಯಕರ್ತರ ಮುಜುಗರಕ್ಕೆ ಕಾರಣವಾಗುತ್ತಿದೆ. ಅದರಲ್ಲೂ ಪಕ್ಷವನ್ನು ಮುನ್ನಡೆಸುವಲ್ಲಿ ಜೆಡಿಎಸ್ ನಲ್ಲಿ ಸಮರ್ಥ ನಾಯಕರಿಲ್ಲದಿರುವುದು. ಕುಮಾರಸ್ವಾಮಿ ಇದ್ದರೂ ಅವರ ಮೇಲೆ ಪಕ್ಷದಲ್ಲಿರುವ ಕೆಲ ನಾಯಕರಿಗೆ ಅವರ ಮೇಲೆ ನಂಬಿಕೆ ಇಲ್ಲ.
- ಟ್ರಬಲ್ ಶೂಟರ್ ಡಿ.ಕೆ ಶಿವಕುಮಾರ್ ಮೇಲೆ ನಂಬಿಕೆ
ದಳಪತಿಗಳು ಕಾಂಗ್ರೆಸ್ ಗೆ ಸೇರಲು ಅತಿ ಮುಖ್ಯವಾದ ಕಾರಣ ಎಂದ್ರೆ ಅದು ಡಿ.ಕೆ ಶಿವಕುಮಾರ್ ಅವರ ಮೇಲೆ ಅವರಿಗಿರುವ ನಂಬಿಕೆ. ಡಿಕೆಶಿ ಪಕ್ಷಕ್ಕಾಗಿ ಏನುಬೇಕಾದರೂ ಮಾಡುತ್ತಾರೆ. ಒಂದಲ್ಲಾ ಒಂದು ದಿನ ಡಿಕೆಶಿ ರಾಜ್ಯದ ಸಿಎಂ ಆಗುವುದು ಖಚಿತ. ಆಗ ಅವರು ನಮ್ಮ ಕೈ ಬಿಡುವುದಿಲ್ಲ ಎಂಬ ನಂಬಿಕೆ ದಳಪತಿಗಳಿಗಿರಬುದು.
ಅದೇನೆ ಇರಲಿ ಡಿ.ಕೆ.ಶಿವಕುಮಾರ್ ಗೆ ಕೆಪಿಸಿಸಿ ಪಟ್ಟ ಸಿಕ್ಕಿರೋದು ಹಲವರಿಗೆ ಖುಷಿ ನೀಡಿದ್ರೆ ಒಂದಿಷ್ಟು ಜನಕ್ಕೆ ಇರಿಸುಮುರಿಸಾಗಿರೋದಂತೂ ಸತ್ಯ.








