ಚಿತ್ರದುರ್ಗ : ಬಿಜೆಪಿಯಲ್ಲಿ ಪ್ರಮುಖ ನಾಯಕರು ಕೂಡ ಕಾರ್ಯಕರ್ತರು. ನಮಗ್ಯಾರಿಗೂ ಕೊಂಬಿಲ್ಲ, ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಯಾವ ನಾಯಕರ ಸೋಲು ಗೆಲುವಿನ ಪ್ರಶ್ನೆಯಿಲ್ಲ ಎಂದು ಸಚಿವ ಕೆ.ಎಸ್ ಈಶ್ವರಪ್ಪ ಹೇಳಿದ್ದಾರೆ.
ವಿಧಾನಪರಿಷತ್ ಚುನಾವಣೆ ಬಗ್ಗೆ ಚಿತ್ರದುರ್ಗದಲ್ಲಿ ಮಾತನಾಡಿದ ಅವರು, ಬಿಜೆಪಿಯಲ್ಲಿ ಯಾವುದೇ ಲಾಬಿಗೆ ಮಣಿದು ಟಿಕೆಟ್ ನೀಡುವ ಪದ್ಧತಿ ಇಲ್ಲ, ಕಾರ್ಯಕರ್ತರ ಅಪೇಕ್ಷೆ ಮೇರೆಗೆ ಅಭ್ಯರ್ಥಿಗಳ ಆಯ್ಕೆ ನಡೆಯುತ್ತೆ. ಕೇಂದ್ರದ ನಾಯಕರು ಪ್ರಮುಖ ಕಾರ್ಯಕರ್ತರನ್ನು ರಾಜ್ಯಸಭೆಗೆ ಆಯ್ಕೆ ಮಾಡಿದ್ದಾರೆ. ಜೂನ್ 15 ರಂದು ವಿಧಾನ ಪರಿಷತ್ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಅಂತಿಮವಾಗಲಿದೆ ಎಂದರು.
ಇನ್ನು ಯಾವುದೇ ಟಿಕೆಟ್ ವಿಚಾರದಲ್ಲಿ ಕೇಂದ್ರದ ಹಿರಿಯ ನಾಯಕರ ತೀರ್ಮಾನವೇ ಅಂತಿಮ. ಬಿಜೆಪಿಗೆ ಬಂದವರೆಲ್ಲಾ ಬಿಜೆಪಿ ಕಾರ್ಯಕರ್ತರು, ಅವರೆಲ್ಲಾ ಕಾಂಗ್ರೆಸ್, ಜೆಡಿಎಸ್ ನವರಲ್ಲ. ಮುನಿರತ್ನ, ಪ್ರತಾಪ್ ಗೌಡ ಪಾಟೀಲ್, ರೋಷನ್ ಬೇಗ್ ಬಿಜೆಪಿಯವರಾಗಿ ಟಿಕೆಟ್ ಕೇಳುವುದು ತಪ್ಪಲ್ಲ. ಕಾಂಗ್ರೆಸ್ ಅಥವಾ ಜೆಡಿಎಸ್ ನಲ್ಲಿದ್ದೆ ಟಿಕೆಟ್ ಕೊಡಿ ಎನ್ನುವುದು ತಪ್ಪು ಎಂದ ಈಶ್ವರಪ್ಪ, ಬಿಜೆಪಿಯಲ್ಲಿರುವ ಎಲ್ಲಾ ಕಾರ್ಯಕರ್ತರಿಗೂ ಎಂಎಲ್ ಸಿ ಟಿಕೆಟ್ ಕೇಳುವ ಅರ್ಹತೆ ಇದೆ. ಬಿಜೆಪಿಯಲ್ಲಿ ಜಾತಿವಾರು ಟಿಕೆಟ್ ಕೊಡುವ ಪ್ರಶ್ನೆಯಿಲ್ಲ ಎಂದರು.
ಇದೇ ವೇಳೆ ರಾಜ್ಯದಲ್ಲು ಬಿಎಸ್ ವೈ ವರ್ಚಸ್ಸು ಕಡಿಮೆಯಾಗುತ್ತಿದೆಯೇ ಎಂಬ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿ, ಅದು ಪತ್ರಕರ್ತರ ಭ್ರಮೆಯಷ್ಟೇ, ರಾಜ್ಯದಲ್ಲಿ ಎಲ್ಲರು ಒಟ್ಟಿಗೆ ಕೆಲಸ ಮಾಡುತ್ತಿದ್ದೇವೆ ಎಂದು ಈಶ್ವರಪ್ಪ ತಿಳಿಸಿದರು.








