ಅಡಕೆ ಬೆಳೆಗಾರರ ನಿದ್ದೆಗೆಡಿಸಿರುವ ಎಲೆಚುಕ್ಕಿ…!
ಅಡಕೆ ಕೃಷಿ ನಮ್ಮ ಜೀವಾಳ..ಇಡೀ ಕರಾವಳಿ, ಮಲೆನಾಡು ಕೃಷಿಕರ ಬದುಕನ್ನು ಹಸನಾಗಿಸಿರೋದು ಇದೇ ಅಡಕೆ ಬೆಳೆ.
ಹೌದು.. ಹಚ್ಚ ಹಸಿರಿನಿಂದ ಕಂಗೊಳಿಸುವ ಅಡಕೆ ಮರದಲ್ಲಿರುವ ಗೊನೆಗಳನ್ನು ನೋಡುವುದೇ ಒಂದು ಖುಷಿ. ಮನಸ್ಸಿಗೆ ಒಂದು ರೀತಿಯ ಸಂತೃಪ್ತಿ. ಅಷ್ಟಕ್ಕೂ, ಅಡಕೆ ಕೃಷಿ ಮಾಡೋದು ಅಷ್ಟು ಸುಲಭದ ಕೆಲಸವಲ್ಲ.
ಪುಟ್ಟ ಮಕ್ಕಳನ್ನು ಬೆಳೆಸುವ ಹಾಗೇ ಅಡಕೆ ಸಸಿ & ಮರವನ್ನು ಜಾಗರೂಕವಾಗಿ ಸಾಕಬೇಕು.
ಜೂನ್-ಅಕ್ಟೋಬರ್ ತಿಂಗಳಲ್ಲಿ ಗೊಬ್ಬರ ಹಾಕಬೇಕು. ಮದ್ದು, ಕ್ರಿಮಿನಾಶಕಗಳನ್ನು ಸಿಂಪಡಿಸಬೇಕು. ಸೂಕ್ತ ಪ್ರಮಾಣದಲ್ಲಿ ನೀರು ಹರಿಸಬೇಕು. ಒಣಗಿಸಬೇಕು. ಸಿಪ್ಪೆ ಸುಲಿಯಬೇಕು. ಪ್ರತಿನಿತ್ಯ ಒಂದಲ್ಲ, ಒಂದು ರೀತಿಯ ಕೆಲಸ ಅಡಕೆ ತೋಟದಲ್ಲಿ ಇದ್ದೆ ಇರುತ್ತದೆ. ಮಕ್ಕಳ ಬಾಲ್ಯ, ಯವ್ವನದ ಜವಾಬ್ದಾರಿಯನ್ನು ನಿಭಾಯಿಸುವ ಹಾಗೇ ಅಡಕೆ ಸಸಿ ಹಾಗೂ ಅಡಕೆ ಮರವನ್ನು ಎಚ್ಚರಿಕೆಯಿಂದ ನೋಡಿಕೊಳ್ಳಬೇಕು.
ಪ್ರತಿಯೊಬ್ಬ ಅಡಿಕೆ ಬೆಳೆಗಾರರು ಸಾಕಷ್ಟು ಪ್ರೀತಿಯಿಂದ, ಶ್ರಮಪಟ್ಟು ಅಡಕೆ ಕೃಷಿಯನ್ನು ಮಾಡ್ತಾರೆ. ಇದು ಅಡಕೆ ಕೃಷಿಕನ ಬದುಕಿನ ಒಂದು ಭಾಗವೇ ಆಗಿರುತ್ತದೆ. ಹಾಗಂತ, ಇದು ಕೇವಲ ಅಡಕೆ ಮಾತ್ರ ಅಲ್ಲ, ಪ್ರತಿಯೊಂದು ರೀತಿಯ ಕೃಷಿಯಲ್ಲೂ ರೈತರು ಬಹಳ ಕಾಳಜಿಯಿಂದ, ಗಿಡ, ಮರಗಳ ಪಾಲನೆ, ಪೆÇೀಷಣೆ ಮಾಡಿ ಶ್ರಮಕ್ಕೆ ತಕ್ಕ ಫಸಲು ಬಂದಾಗ ಅಷ್ಟೇ ಖುಷಿ ಪಡುತ್ತಾರೆ.
ನಮ್ಮ ರಾಜ್ಯದ ಬಗ್ಗೆ ಹೇಳುವುದಾದ್ರೆ, ಈಗಾಗಲೇ ಉತ್ತರ ಕರ್ನಾಟಕದಲ್ಲಿ ನೆರೆ ಪ್ರವಾಹ, ಅಕಾಲಿಕ ಮಳೆ, ಪ್ರಾಕೃತಿಕ ವಿಕೋಪದಿಂದ ರೈತರು ಕಂಗಾಲಾಗಿದ್ದಾರೆ. ಇನ್ನು, ಕರಾವಳಿ ಜಿಲ್ಲೆ & ಬಯಲು ಸೀಮೆಯಲ್ಲಿ ವಿಪರೀತ ಮಳೆಯಿಂದ ರೈತರು ಬೆಳೆ ಇಲ್ಲದೆ ತತ್ತರಿಸಿದ್ದಾರೆ. ಇನ್ನು ಮಲೆನಾಡು ಭಾಗವಾಗಿರುವ ಶಿವಮೊಗ್ಗ, ಉತ್ತರ ಕನ್ನಡ, ಶಿರಸಿ, ಚಿಕ್ಕಮಗಳೂರು ಭಾಗಗಳಲ್ಲಿ ಮಾರಕ ಎಲೆ ಚುಕ್ಕಿ ರೋಗ ಅಡಕೆ ಬೆಳೆಗೆ ಕುತ್ತು ತಂದಿದ್ದು, ರೈತರು ಆಘಾತಕ್ಕೊಳಗಾಗಿದ್ದಾರೆ. ಇತ್ತ, ಕರಾವಳಿ ಜಿಲ್ಲೆಯ ಸುಳ್ಯ ತಾಲೂಕಿನಲ್ಲಿ ಹಳದಿ ರೋಗದ ಜೊತೆ ಎಲೆ ಚುಕ್ಕಿ ರೋಗದ ಕಾಟದಿಂದ ರೈತರು ಅಡಕೆ ಕೃಷಿಯ ಆಸೆಯನ್ನೇ ಕೈಬಿಟ್ಟಿದ್ದಾರೆ.
ಇದೀಗ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು, ಬಂಟ್ವಾಳ, ಕಡಬ, ಉಪ್ಪಿನಂಗಡಿ, ವಿಟ್ಲ, ಬೆಳ್ತಂಗಡಿ ಸೇರಿದಂತೆ ಬಹುತೇಕ ಕಡೆ ಎಲೆ ಚುಕ್ಕಿ ರೋಗ ಅಡಕೆ ತೋಟಗಳನ್ನು ಅವರಿಸಿಬಿಟ್ಟಿದೆ. ಇದ್ರಿಂದ, ಅಡಕೆಯನ್ನೇ ನಂಬಿ ಜೀವನ ಮಾಡುತ್ತಿರೋ ಅಡಕೆ ಬೆಳೆಗಾರರು ಮಹಾ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅಡಕೆಗೆ ಅಂಟಿಕೊಂಡಿರುವ ಎಲೆ ಚುಕ್ಕಿ ರೋಗ ನಿವಾರಣೆಗೆ, ಮಲೆನಾಡಿನಲ್ಲಿ ಸಂಶೋಧನಾ ಕೇಂದ್ರ ಇದ್ರೂ ಅದು ಎಷ್ಟರ ಮಟ್ಟಿಗೆ ಕಾರ್ಯ ನಿರ್ವಹಿಸುತ್ತಿದೆ ಅನ್ನೋದೇ ಗೊತ್ತಿಲ್ಲ. ಇನ್ನು ಅಡಕೆ ಬೆಳೆಗಾರರ ಸಂಘ ನಿರಂತರ ಹೋರಾಟ ಮಾಡಿದ್ರೂ ಈ ಮಾರಕ ರೋಗಕ್ಕೆ ಶಾಶ್ವತ ಪರಿಹಾರ ಪಡೆಯಲು ಆಗಿಲ್ಲ.
ಇನ್ನು ಕರಾವಳಿಯಲ್ಲಿ ಅಡಕೆ ಬೆಳೆಗಾರರ ಹೆಮ್ಮೆಯ ಕ್ಯಾಂಪ್ಕೋ ಸಂಸ್ಥೆಯ ನೂತನ ಪದಾಧಿಕಾರಿಗಳು ಅಡಕೆ ಬೆಳೆಗಾರರ ಕೈ ಹಿಡಿಯುತ್ತಾರಾ ಅನ್ನೋದನ್ನು ಕಾದು ನೋಡಬೇಕು. ಮತ್ತೊಂದೆಡೆ, ತೋಟಗಾರಿಕೆ ಮತ್ತು ಕೃಷಿ ಇಲಾಖೆ ಸಿದ್ದ ಸೂತ್ರಗಳನ್ನು ಬಿಟ್ಟು ಬೇರೇನನ್ನೂ ಮಾಡುವ ನಿರೀಕ್ಷೆ ಇಲ್ಲ.
ಇನ್ನು ನಮ್ಮ ಜಿಲ್ಲೆಯ ಜನಪ್ರತಿನಿಧಿಗಳ ಕಥೆ ಕೇಳೋದೇ ಬೇಡ.. ಜಾತಿ, ಧರ್ಮ, ಓಲೈಕೆ.. ವೋಟ್ ಬ್ಯಾಂಕ್ ರಾಜಕೀಯ.. ಮಾತಿನ ಸಮರ ಬಿಟ್ರೆ ರೈತರ ಪರ ಧ್ವನಿ ಎತ್ತುವ ಮನಸ್ಸೇ ಇವರ್ಯಾರಿಗೂ ಬರ್ತಿಲ್ಲ.. ಇಲ್ಲಿನ ಜನಪ್ರತಿನಿಧಿಗಳು ಇಡೀ ಜಗತ್ತಿನ ಆಗು ಹೋಗುಗಳ ಬಗ್ಗೆ ಪ್ರತಿಕ್ಷಣ ಮಾತನಾಡುತ್ತಾರೆ. ಆದ್ರೆ, ರೈತರ ಸಮಸ್ಯೆ ಬಗ್ಗೆ ಮಾತನಾಡಲು ಪುರುಸೊತ್ತೇ ಇಲ್ಲ. ಜನಪ್ರತಿನಿಧಿಗಳು ತಮ್ಮ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಆ ಕಾರ್ಯಕ್ರಮ, ಈ ಸಮಾರಂಭಗಳಲ್ಲಿ ಭಾಗಿಯಾಗಿದ್ದೆವು ಅಂತಾ ತೋರಿಸಿಕೊಳ್ಳುವುದನ್ನು ಬಿಟ್ಟು, ರೈತರ ತೋಟಕ್ಕೆ ಭೇಟಿ ಕೊಟ್ಟು ಪರಿಹಾರ ನೀಡುವ ಭರವಸೆ ನೀಡಲಾಯಿತು ಅನ್ನೋ ಒಂದೇ ಒಂದು ಪದ ದುರ್ಬಿನ್ ಹಾಕಿಕೊಂಡು ಹುಡುಕಿದ್ರೂ ಸಿಗಲ್ಲ.. ಇದು ಕೇವಲ ಸಂಸದರು, ಶಾಸಕರಿಗೆ ಮಾತ್ರ ಅನ್ವಯವಾಗಲ್ಲ. ಸ್ಥಳೀಯ ಪಂಚಾಯತ್ ಸದಸ್ಯರಿಗೂ ಅನ್ವಯ ಆಗುತ್ತೆ. ರೈತರ ಕಷ್ಟಕ್ಕೆ ಮಾತ್ರ ಯಾವುದೇ ರೀತಿ ಸ್ಪಂದಿಸುತ್ತಿಲ್ಲ. ಇನ್ನೊಂದೆಡೆ ಕರಾವಳಿಯ ಉಸ್ತುವಾರಿ ಸಚಿವರಿಗೆ ಜಿಲ್ಲೆಯ ರೈತರ ಸಮಸ್ಯೆಗಳೇ ಕಾಣುತ್ತಿಲ್ಲ.
ಅಷ್ಟಕ್ಕೂ ಸ್ಥಳೀಯ ಜನಪ್ರತಿನಿಧಿಗಳೇ ಇಲ್ಲಿನ ರೈತರ ಸಮಸ್ಯೆಗಳಿಗೆ ಸ್ಪಂದಿಸದೇ ಇರುವಾಗ, ಗ್ಯಾರಂಟಿ ಗುಂಗಿನಲ್ಲಿರುವ ಸರ್ಕಾರದ ಗಮನಕ್ಕೆ ಬರುವುದಾದ್ರೂ ಹೇಗೆ..? ಅಧಿಕಾರಕ್ಕಾಗಿ ಕಚ್ಚಾಟವಾಡುತ್ತಿರುವ ಸರ್ಕಾರದಿಂದ, ಜಿಲ್ಲೆಯ ಅಡಕೆ ಬೆಳೆಗಾರರಿಗೆ ಪರಿಹಾರ ಸಿಗುತ್ತೆ ಎಂಬ ನಂಬಿಕೆಯಂತೂ ಇಲ್ಲ.
ಮಾನ್ಯ ಡಿಸಿಎಂ ಸಾಹೇಬ್ರೇ, ಕರಾವಳಿಯಲ್ಲಿ 8 ಗಂಟೆಗೆ ಎಲ್ಲರೂ ನಿದ್ದೆ ಮಾಡ್ತಾರೆ ಅಂತಿರಲ್ಲ.. ಹೀಗೇ ಮುಂದುವರಿದರೆ, ನಿದ್ದೆ ಬಿಡಿ ಜಾಗರಣೆ ಮಾಡಿಕೊಂಡು ಜೀವನ ಸಾಗಿಸಬೇಕಾಗುತ್ತದೆ.
ಯಾಕಂದ್ರೆ ಅಡಕೆಯನ್ನೇ ನಂಬಿಕೊಂಡಿರುವ ಬೆಳೆಗಾರರ ಬದುಕಿಗೆ ಕತ್ತಲು ಅವರಿಸಿಕೊಂಡಿದೆ. ಹಚ್ಚ ಹಸಿರಿನಿಂದ ಕಂಗೊಳಿಸುತ್ತಿದ್ದ ತೋಟಗಳು ಎಲೆ ಚುಕ್ಕಿ ರೋಗದಿಂದ ಬಾಡಿ ಹೋಗಿವೆ. ಅಡಕೆಯ ರಾಶಿ ನೋಡಿ ಖುಷಿ ಪಡುತ್ತಿದ್ದ ಬೆಳೆಗಾರನ ಕಣ್ಣಲ್ಲಿ ಕಣ್ಣೀರು ಹರಿಯುತ್ತಿದೆ.. ತಮ್ಮ ಮಕ್ಕಳನ್ನೇ ಕಳೆದುಕೊಂಡಂಥಾ ವೇದನೆಯಲ್ಲಿ ಅಡಕೆ ಬೆಳೆಗಾರರಿದ್ದಾರೆ.
ಹೀಗಾಗಿ, ಜನಪ್ರತಿನಿಧಿಗಳು ಸರ್ಕಾರ ನಮ್ಮ ಸಮಸ್ಯೆಗಳ ಬಗ್ಗೆ ಗಮನ ಹರಿಸುವಂತೆ ಮಾಡಬೇಕು. ನಿಮ್ಮ ರಾಜಕೀಯ, ಗದ್ದುಗೆ ಗುದ್ದಾಟ ಏನೇ ಇರಲಿ. ಅದೆಲ್ಲವನ್ನ ಬದಿಗಿಟ್ಟು, ಅಡಕೆ ಬೆಳೆಗಾರರ ಹಿತವನ್ನು ಕಾಪಾಡಬೇಕಿದೆ. ಮಹಾಮಾರಿ ಕ್ಯಾನ್ಸರ್ ನಂತೆ ಅಡಕೆ ಬೆಳೆಗೆ ಕಾಡುತ್ತಿರುವ ಎಲೆ ಚುಕ್ಕಿ ಹಾಗೂ ಹಳದಿ ರೋಗಕ್ಕೆ ಚಿಕಿತ್ಸೆ ನೀಡಿ ಅಡಕೆ ಬೆಳೆಗಾರರ ಬದುಕು ಮತ್ತು ಭವಿಷ್ಯವನ್ನು ಉಳಿಸಬೇಕಿದೆ.
-ಸನತ್ ರೈ








