ಬೆಂಗಳೂರು: ರಾಜ್ಯದಲ್ಲಿ ಕೊರೊನಾ ವೈರಸ್ ಪ್ರಕರಣಗಳು ಹೆಚ್ಚಾಗುತ್ತಿದ್ದಂತೆ ಸೋಂಕು ಮತ್ತಷ್ಟು ವ್ಯಾಪಕವಾಗಿ ಹರಡದಂತೆ ಮುನ್ನೆಚ್ಚರಿಕಾ ಕ್ರಮವಾಗಿ ರಾಜ್ಯ ಸರ್ಕಾರ ಮಹತ್ತರ ಹೆಜ್ಜೆ ಇಟ್ಟಿದೆ. ನಾಳೆಯಿಂದ ಮುಂದಿನ 15 ದಿನಗಳ ಕಾಲ ಅಂದರೆ ಮಾರ್ಚ್ 28 ರವರೆಗೆ ರಾಜ್ಯದ ಎಲ್ಲಾ ಕಾಲೇಜುಗಳಿಗೆ ಸರ್ಕಾರ ರಜೆ ಘೋಷಣೆ ಮಾಡಿದೆ.
ಈ ಕುರಿತಂತೆ ಸುತ್ತೋಲೆ ಹೊರಡಿಸಿರುವ ಕಾಲೇಜು ಶಿಕ್ಷಣ ಇಲಾಖೆ, ಕೊರೊನಾ ವೈರಸ್ ರೋಗವು ಸಾಂಕ್ರಾಮಿಕವಾಗಿ ಹರಡುತ್ತಿದ್ದು, ಈ ಬಗ್ಗೆ ಕರ್ನಾಟಕ ಸರ್ಕಾರವು ಕೊರೊನಾ ವೈರಸ್ ರೋಗವನ್ನು ಸಾಂಕ್ರಾಮಿಕ ರೋಗವೆಂದು ಘೋಷಿಸಿರುವ ಹಿನ್ನಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಇಲಾಖಾ ವ್ಯಾಪ್ತಿಯ ಎಲ್ಲಾ ಸರ್ಕಾರಿ, ಖಾಸಗಿ ಅನುದಾನಿತ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ದಿನಾಂಕ 14-03-2020ರಿಂದ ದಿನಾಂಕ 28-03-2020ರ ವೆರೆಗೆ 15 ದಿನಗಳಿಗೆ ರಜೆ ಘೋಷಿಸಲಾಗಿದೆ ಎಂದು ತಿಳಿಸಿದೆ.
ಇನ್ನು ಕೊರೊನಾ ಬಗ್ಗೆ ಮುಂಜಾಗ್ರತಾ ಸಭೆ ನಡೆಸಿದ ಸಿಎಂ ಬಿ.ಎಸ್ ಯಡಿಯೂರಪ್ಪ, ಕೊರೊನಾ ಭೀತಿ ನಗರದಲ್ಲಿ ಹೆಚ್ಚಾಗಿದ್ದು, ಒಂದು ವಾರಗಳ ಕಾಲ ಪಬ್ ಗಳು ಸಮ್ಮರ್ ಕ್ಯಾಂಪ್, ಮಾಲ್ಸ್, ಥಿಯೇಟರ್ ಗಳು ಸೇರಿದಂತೆ ಯಾವುದೇ ಸಾಮೂಹಿಕ ಕಾರ್ಯಕ್ರಮಗಳನ್ನ ನಡೆಸದಂತೆ ನಿರ್ಬಂಧ ಹೇರಿದ್ದಾರೆ.









