Belagavi: ಚಿರತೆ ಮತ್ತೆ ಪ್ರತ್ಯಕ್ಷ – 22 ಜಿಲ್ಲೆಗಳಿಗೆ ರಜೆ ಘೋಷಣೆ
ಬೆಳಗಾವಿ ಜಿಲ್ಲೆಯಲ್ಲಿ ಕಳೆದ 18 ದಿನಗಳಿಂದ ನಾಪತ್ತೆಯಾಗಿದ್ದ ಚಿರತೆ ಮತ್ತೆ ಪ್ರತ್ಯಕ್ಷವಾಗಿದೆ. ಮುಂಜಾಗ್ರತಾ ಕ್ರಮವಾಗಿ ಬೆಳಗಾವಿ ನಗರ ಮತ್ತು ಬೆಳಗಾವಿ ಗ್ರಾಮೀಣ ಭಾಗದ ವ್ಯಾಪ್ತಿಯಲ್ಲಿರುವ 22 ಶಾಲೆಗಳಿಗೆ ಜಿಲ್ಲಾಡಳಿತ ರಜೆ ಘೋಷಣೆ ಮಾಡಿದೆ.
ಹಿಂಡಲಗಾ ರಸ್ತೆಯ ವನಿತಾ ವಿದ್ಯಾಲಯ ಬಳಿಯ ಡಬಲ್ ರಸ್ತೆಯಲ್ಲಿ ಇಂದು ಬೆಳಗಿನ ಜಾವ ಚಿರತೆ ಕಾಣಿಸಿಕೊಂಡಿದೆ. ಬಸ್ ಚಾಲಕರೊಬ್ಬರು ಚಿರತೆ ಓಡಾಡುತ್ತಿರುವ ದೃಶ್ಯವನ್ನು ತಮ್ಮ ಮೊಬೈಲ್‍ನಲ್ಲಿ ಸೆರೆ ಹಿಡಿದಿದ್ದಾರೆ.
ನಗರದಲ್ಲಿ ಚಿರತೆ ಕಾಣಿಸಿಕೊಂಡಾಗಿನಿಂದಲೂ ಶಾಲಾ ಮಕ್ಕಳು ಹಾಗೂ ಪೋಷಕರು ಭಯದ ವಾತಾವರಣದಲ್ಲಿ ಕಾಲ ಕಳೆಯುವಂತಾಗಿದೆ. ಇಂದು ಚಿರತೆ ಮತ್ತೆ ಪ್ರತ್ಯಕ್ಷವಾದ ಹಿನ್ನಲೆಯಲ್ಲಿ ಬೆಳಗಾವಿ ನಗರ ಮತ್ತು ಗ್ರಾಮೀಣ ವಲಯ ವ್ಯಾಪ್ತಿಯಲ್ಲಿನ 22 ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ರಜೆಯನ್ನು ಘೋಷಿಸಲಾಗಿದೆ ಎಂದು ಶಿಕ್ಷಣ ಇಲಾಖೆಯ ಉಪನಿರ್ದೇಶಕ ಬಸವರಾಜ ನಾಲತವಾಡ ತಿಳಿಸಿದ್ದಾರೆ.
ಆಗಸ್ಟ್ 5 ರಂದು ಬೆಳಗಾವಿ ನಗರದ ಜಾಧವ್ ನಗರದಲ್ಲಿ ಚಿರತೆ ಪ್ರತ್ಯಕ್ಷವಾಗಿತ್ತು. ಈ ವೇಳೆ ಕಟ್ಟಡ ಕಾರ್ಮಿಕನ ಮೇಲೆ ಚಿರತೆ ದಾಳಿ ಮಾಡಿ ಬೆಳಗಾವಿ ಗಾಲ್ಫ್ ಮೈದಾನದೊಳಗೆ ಹೋಗಿತ್ತು. ಇದಾದ ಬಳಿಕ ಕಳೆದ 18 ದಿನಗಳಿಂದ ಚಿರತೆ ಸೆರೆಗೆ ಅರಣ್ಯ ಇಲಾಖೆ ಮತ್ತು ಪೊಲೀಸ್ ಇಲಾಖೆ ಜಂಟಿಯಾಗಿ ಕಾರ್ಯಾಚರಣೆ ಮಾಡುತ್ತಿದೆ.