ಹುಬ್ಬಳ್ಳಿಯಲ್ಲಿ ನಡೆದ ಗಲಾಟೆಯ ಕುರಿತು ಸಂಪೂರ್ಣ ತನಿಖೆಯಾಗಲಿ : ಬಿಎಸ್ ವೈ
ಶಿವಮೊಗ್ಗ: ಹುಬ್ಬಳ್ಳಿಯ, ಹಳೆ ಹುಬ್ಬಳ್ಳಿಯಲ್ಲಿ ನಡೆದ ಗಾಲಾಟೆ ಯಾವ ಕಾರಣಕ್ಕಾಗಿ ಆಗಿದೆ ಎಂಬುವುದರ ಬಗ್ಗೆ ಸಮಗ್ರ ತನಿಕೆಯಾಗಬೇಕು ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಹೇಳಿದ್ದಾರೆ.
ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಗಲಭೆಯಲ್ಲಿ ಪೊಲೀಸರ ಮೇಲೆ ಹಲ್ಲೆ ಮಾಡಿದ್ದಾರೆ, ಪೊಲೀಸ್ ವಾಹನಗಳ ಜಖಂಗೊಳಿಸಿದ್ದಾರೆ ಅಂದರೆ ಗೂಂಡಾ ಪ್ರವೃತ್ತಿ ಯಾವ ಮಟ್ಟಕ್ಕೆ ಇದೆ ಎನ್ನುವುದು ತಾಜಾ ಉದಾಹರಣೆ. ನಮ್ಮ ರಕ್ಷಣೆ ಮಾಡುವ ಪೊಲೀಸರ ಮೇಲೆ ಕೈ ಮಾಡುವುದು, ಠಾಣೆಗೆ ನುಗ್ಗುವ ಪ್ರಯತ್ನ ಮಾಡುವುದು ಅಕ್ಷಮ್ಯ ಅಪರಾಧ ಎಂದರು.
ಅಲ್ಲದೇ ಕೋಮು ಸೌಹಾರ್ದತೆ ಹಾಳು ಮಾಡಲು ಕೆಲವರು ಪ್ರಯತ್ನ ಮಾಡುತ್ತಿದ್ದಾರೆ. ಈಗಾಗಲೇ ಗಲಭೆಗೆ ಯಾರು, ಯಾರೂ ಕಾರಣರಾಗಿದ್ದಾರೋ, ಬಹುತೇಕ ಎಲ್ಲರ ಬಂಧನವಾಗಿದೆ. ಅಂತಹವರ ಮೇಲೆ ಉಗ್ರವಾದ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸುತ್ತೇನೆ.
ಮುಖ್ಯಮಂತ್ರಿ ಅವರು ಸಹ ಈ ಬಗ್ಗೆ ಬಿಗಿಯಾದ ಕ್ರಮ ಕೈಗೊಳ್ಳುತ್ತೇವೆ ಎಂದಿದ್ದಾರೆ. ಮುಂದೆ ಇಂತಹ ಘಟನೆ ಮರುಕಳಿಸಬಾರದು. ಆ ರೀತಿಯ ಬಿಗಿ ಕ್ರಮ ಕೈಗೊಂಡು, ತಪ್ಪಿತಸ್ಥರಿಗೆ ತಕ್ಕ ಶಿಕ್ಷೆಯಾಗಬೇಕು ಎಂದು ಹೇಳಿದರು.