ಬೆಂಗಳೂರು : ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿ ಗಲಭೆ ವಿಚಾರವಾಗಿ ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಗೆ ಕಂದಾಯ ಸಚಿವ ಆರ್.ಅಶೋಕ್ ‘ಡಿಕೆಶಿ ದಬ್ಬಾಳಿಕೆ ದೌರ್ಜನ್ಯ ಪರಂಪರೆ ಬಿಟ್ಟುಬಿಡಲಿ’ ಎಂದು ಎಚ್ಚರಿಕೆ ನೀಡಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಸರ್ಕಾರ ಸುಭದ್ರವಾಗಿದೆ. ಅವರದೇ ಪಾರ್ಟಿಯಲ್ಲಿ ಅಭದ್ರತೆ ಇದೆ. ಹಿಂದೆ ಅವರದೇ ಸರ್ಕಾರ ಇದ್ದಾಗ ಫೋನ್ ಟ್ಯಾಪ್ ಆಗಿದ್ದು ಗೊತ್ತಿದೆ. ಹಿಂದಿನ ಸರ್ಕಾರದ ಫೋನ್ ಟ್ಯಾಪ್ ತನಿಖೆ ಒಂದು ಹಂತಕ್ಕೆ ಬರುತ್ತಿದೆ. ಯಾರಿಗೆ ಫೋನ್ ಟ್ಯಾಪ್ ಮಾಡಿ ಅನುಭವ ಇದೆಯೋ, ಯಾವ ಸರ್ಕಾರ ಹಿಂದೆ ಫೋನ್ ಟ್ಯಾಪ್ ಮಾಡಿತ್ತೋ ಅವರೇ ಈಗ ಟ್ಯಾಪಿಂಗ್ ಬಗ್ಗೆ ಮಾತಾಡುತ್ತಿರೋದು ಆಶ್ಚರ್ಯವಾಗಿದೆ ಎಂದು ಹೇಳಿದರು.
ಮುಂದುವರಿದು ಡಿಕೆಶಿಗೆ ಸೌಜನ್ಯ, ವಿನಯದಿಂದ ತಿಳುವಳಿಕೆ ಹೇಳುವುದಕ್ಕೆ ಇಷ್ಟಪಡುತ್ತೇನೆ ಎಂದ ಸಾಮ್ರಾಟ್, ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲಪಂಥ್, ದಕ್ಷ ಅಧಿಕಾರಿ. ಗಲಭೆಯಲ್ಲಿ ಭಾಗಿಯಾದವರ ಹೆಡೆಮುರಿ ಕಟ್ಟಿದಾರೆ. ಪೊಲೀಸರನ್ನು ಹೊಡೆದಂತವರು, ಸ್ಟೇಷನ್ ಗೆ ನುಗ್ಗಿ ಬೆಂಕಿ ಹಚ್ಚಿದವರನ್ನು ಬಂಧಿಸಲಾಗಿದೆ. ಆರೋಪಿಗಳನ್ನು ಬಂಧಿಸಿದ ಕಮಿಷನರ್ ಬಿಜೆಪಿ ಏಜೆಂಟ್ ಅಂತ ಹೇಳಿದರೆ ಹೇಗೆ? ಎಂದು ಪ್ರಶ್ನಿಸಿದರು.
ಪೊಲೀಸ್ ಸ್ಟೇಷನ್ ಗೆ ಬೆಂಕಿ ಇಟ್ಟವರು ಧರ್ಮಾತ್ಮರಾ ಎಂದು ಪ್ರಶ್ನಿಸಿದ ಸಚಿವರು, ಈ ದಬ್ಬಾಳಿಕೆ, ಆರೋಪ ನಿಮಗೆ ಬಂದಿರುವ ಬಳುವಳಿ. ಯಾರನ್ನೋ ರಕ್ಷಣೆ ಮಾಡೋದಕ್ಕೆ ಕಮಿಷನರ್ ಗೆ ವಾನಿರ್ಂಗ್ ಕೊಡೋದು ಸರಿಯಲ್ಲ ಎಂದು ಡಿ.ಕೆ ಶಿವಕುಮಾರ್ ಅವರಿಗೆ ಆರ್ ಅಶೋಕ್ ತಿರುಗೇಟು ನೀಡಿದ್ದಾರೆ.









