ನನ್ನ ಪತ್ನಿಗೆ ಹೆಣ್ಣು ಮಗುವಾಗಲಿ | ದೇವರಿಗೆ ಹರಕೆ ಪತ್ರ ಬರೆದು ಹುಂಡಿಯಲ್ಲಿ ಹಾಕಿದ ಭಕ್ತ Saaksha Tv
ಕೊಪ್ಪಳ: ನನ್ನ ಪತ್ನಿಗೆ ಹೆಣ್ಣು ಮಗುವಾಗಲಿ, ಹೆರಿಗೆ ಸೂಸುತ್ರವಾಗಿ ಆಗಲಿ ಎಂದು ಅಂಜನಾದ್ರಿ ಬೆಟ್ಟದಲ್ಲಿನ ಹನುಮನ ದೇವಸ್ಥಾನದ ಹುಂಡಿಯಲ್ಲಿ ಭಕ್ತನೋರ್ವ ಪತ್ರ ಬರೆದು ಹಾಕಿದ್ದಾರೆ.
ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಹನುಮನಹಳ್ಳಿ ಬಳಿರುವ ಅಂಜನಾದ್ರಿ ಬೆಟ್ಟದಲ್ಲಿ ಇಂದು ಬೆಳಗ್ಗೆ ಹುಂಡಿ ಕಾಣಿಕೆ ಎಣಿಕೆ ಕಾರ್ಯ ನಡೆಯುತ್ತಿರುವಾಗ ನನ್ನ ಪತ್ನಿಗೆ ಹೆಣ್ಣು ಮಗುವಾಗಲಿ, ಹೆರಿಗೆ ಸೂಸುತ್ರವಾಗಿ ಆಗಲಿ. ನನ್ನ ಮೇಲೆ ಯಾವುದೇ ಪ್ರಕರಣ ಇಲ್ಲದಂತೆ ಮಾಡು ಭಗವಂತ. ಎಂಬ ಹಲವು ಹರಕೆಯಿರುವ ಭಕ್ತನೊಬ್ಬನ ಪತ್ರ ಹುಂಡಿಯಲ್ಲಿ ಸಿಕ್ಕಿದೆ ಎಂದು ದೇವಸ್ಥಾನ ಆಡಳಿತ ಮಂಡಳಿ ಸಿಬ್ಬಂದಿ ತಿಳಿಸಿದ್ದಾರೆ.
ಗ್ರೇಡ್-2 ತಹಶೀಲ್ದಾರ್ ವಿ.ಹೆಚ್.ಹೊರಪೇಟೆ ಅವರ ನೇತೃತ್ವದಲ್ಲಿ ಎಣಿಕೆ ಕಾರ್ಯ ನಡೆದಿದ್ದು, 10.45 ಲಕ್ಷ ರೂ. ಕಾಣಿಕೆ ಸಂಗ್ರಹವಾಗಿದೆ. 3 ವಿದೇಶಿ ನಾಣ್ಯಗಳು ಕೂಡ ಕಾಣಿಕೆಯಾಗಿ ಬಂದಿವೆ. ಅಮೆರಿಕಾ ಮತ್ತು ಫಿಲಿಫೈನ್ ದೇಶದ ಮೂರು ನಾಣ್ಯಗಳು ಕಾಣಿಕೆ ರೂಪವಾಗಿ ಬಂದಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಓಮಿಕ್ರಾನ್ ಸೋಂಕು ಹೆಚ್ಚಳದಿಂದಾಗಿ ಐತಿಹಾಸಿಕ ಅಂಜನಾದ್ರಿ ಬೆಟ್ಟಕ್ಕೆ ಆಗಮಿಸುವ ಭಕ್ತರ ಸಂಖ್ಯೆ ಕ್ಷೀಣಿಸಿದೆ. ಆದರೂ 31 ದಿನದ ಅವಧಿಯಲ್ಲಿ ಇಷ್ಟೊಂದು ಹಣ ಸಂಗ್ರಹವಾಗಿರುವುದು ಕಂದಾಯ ಮತ್ತು ಸಾರ್ವಜನಿಕರಲ್ಲಿ ಆಶ್ಚರ್ಯ ಮೂಡಿಸಿದೆ.









