ಪಕ್ಷ ಯಾವುದೇ ಇರಲಿ, ಯಾರೂ ಯಾವುದೇ ಪಕ್ಷದಿಂದ ಆಯ್ಕೆಯಾಗಿರಲಿ. ಎಲ್ಲರ ಗುರಿ ರಾಷ್ಟ್ರ ಸೇವೆಯಾಗಿರಲಿ. ರಾಷ್ಟ್ರ ಸೇವೆ ಪ್ರತಿಯೊಬ್ಬ ಸಂಸದನ ಮೊದಲ ಜವಾಬ್ದಾರಿಯಾಗಿರಬೇಕು ಎಂದು ಪ್ರಧಾನಿ ನರೇಂದ್ರ ಮೋದಿ(Narendra Modi) ಹೇಳಿದ್ದಾರೆ.
ಐತಿಹಾಸಿಕವಾಗಿ ಮೂರನೇ ಅವಧಿಗೆ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ ನರೇಂದ್ರ ಮೋದಿ, ಎನ್ ಡಿಎ ಸಂಸದರನ್ನುದ್ದೇಶಿಸಿ ಮಾಡಿದ ಮೊದಲ ಔಪಚಾರಿಕ ಭಾಷಣದಲ್ಲಿ ಈ ರೀತಿ ಕಿವಿ ಮಾತು ಹೇಳಿದ್ದಾರೆ.
ನೂತನ ಸಂಸದರಿಗೆ ಪ್ರಧಾನ ಮಂತ್ರಿಗಳ ವಸ್ತು ಸಂಗ್ರಹಾಲಯಕ್ಕೆ ಭೇಟಿ ನೀಡುವಂತೆ ಸಲಹೆ ನೀಡಿದರು. ಕಲಿಯಲು ಸಂಸತ್ತಿಗಿಂತ ಉತ್ತಮ ಸ್ಥಳವಿಲ್ಲ, ಮಹಾನ್ ಪ್ರಯಾಣದ ಕುರಿತು ತಿಳಿಯಲು ಮತ್ತು ಅವರ ಅನುಭವದಿಂದ ಕಲಿಯಲು ಅವರು ಪ್ರಧಾನ ಮಂತ್ರಿಗಳ ವಸ್ತುಸಂಗ್ರಹಾಲಯಕ್ಕೆ ಭೇಟಿ ನೀಡಬೇಕು ಎಂದು ಹೇಳಿದ್ದಾರೆ.
ಸಂಸದರು ದೇಶ ಸೇವೆ ಮಾಡಲು ಇಲ್ಲಿಗೆ ಬಂದಿದ್ದಾರೆ ಮತ್ತು ರಾಷ್ಟ್ರವನ್ನು ಯಾವಾಗಲೂ ಮೊದಲ ಸ್ಥಾನದಲ್ಲಿರಿಸಲು ಕಾರ್ಯ ನಿರ್ವಹಿಸಬೇಕು. ಸಂಸದರು ನಿಯಮಿತವಾಗಿ ಸಂಸತ್ತಿಗೆ ಹಾಜರಾಗಬೇಕು. ತಮ್ಮ ಕ್ಷೇತ್ರಕ್ಕೆ ಸಂಬಂಧಿಸಿದ ವಿಷಯಗಳನ್ನು ಪರಿಣಾಮಕಾರಿಯಾಗಿ ಪ್ರಸ್ತಾಪಿಸಬೇಕು. ಯಾವುದೇ ವಿಷಯವನ್ನು ಮಾಧ್ಯಮಗಳ ಮುಂದೆ ಪ್ರತಿಕ್ರಿಯಿಸುವ ಮೊದಲು ಅದನ್ನು ಅಧ್ಯಯನ ಮಾಡಬೇಕು. ಎನ್ ಡಿಎ ಸಂಸದರು ಸಾರ್ವಜನಿಕವಾಗಿ ಮಾತನಾಡುವಾಗ ಏಕರೂಪತೆ ಕಾಯ್ದುಕೊಳ್ಳಬೇಕು. ಸಂಸದರು ಕ್ಷೇತ್ರಗಳೊಂದಿಗೆ ಸಂಪರ್ಕದಲ್ಲಿರಲು ಮತ್ತು ಬೆಂಬಲ ನೀಡಿದ ಮತದಾರರಿಗೆ ಕೃತಜ್ಞತೆ ಸಲ್ಲಿಸುವಂತೆ ಸಲಹೆ ನೀಡಿದರು.