ಶಿವಮೊಗ್ಗ: ಸಚಿವ ಪ್ರಿಯಾಂಕ್ ಖರ್ಗೆ ರಾಜೀನಾಮೆ ನೀಡಿ ತನಿಖೆ ಎದುರಿಸಲಿ ಎಂದು ಬಿಜೆಪಿ (BJP) ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ (B.Y Vijayendra) ವಾಗ್ದಾಳಿ ನಡೆಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಚಿನ್ ಪಾಂಚಾಳ ಆತ್ಮಹತ್ಯೆ ಕೇಸ್ ವಿಚಾರವಾಗಿ, ಈಶ್ವರಪ್ಪ ಪ್ರಕರಣದಲ್ಲಿ ಇದೇ ಪ್ರಿಯಾಂಕ್ ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಬೀದಿಗಳಿದಿದ್ದರು. ಈಗ ಅವರು ಅದೇ ರೀತಿ ರಾಜೀನಾಮೆ ನೀಡಿ ತನಿಖೆ ಎದುರಿಸಲಿ ಎಂದಿದ್ದಾರೆ.
ಪ್ರಿಯಾಂಕ್ ಖರ್ಗೆ ಆಪ್ತನಿಂದ ಸಚಿನ್ ಆತ್ಮಹತ್ಯೆಯಾಗಿದೆ. ನಮಗೆ ಪೊಲೀಸರಿಂದ ನ್ಯಾಯ ಸಿಗುವ ವಿಶ್ವಾಸ ಇಲ್ಲ. ಸಚಿನ್ ಸಹೋದರಿ ಅವರ ಕುಟುಂಬ ಸಿಬಿಐ ತನಿಖೆಗೆ ಆಗ್ರಹಿಸಿದ್ದಾರೆ ಎಂದಿದ್ದಾರೆ.
ಮಹಾರಾಷ್ಟ್ರದ ಸುಪಾರಿ ಕಿಲ್ಲರ್ ಬಳಸಿಕೊಂಡು ಶಾಸಕ ಮತ್ತಿಮೋಡ್, ಹಿಂದೂ ಮುಖಂಡರ ಹತ್ಯೆಗೆ ಸಂಚು ಮಾಡಿದ್ದಾರೆ. ವಿಪಕ್ಷ ನಾಯಕರು ಬೆಳೆದರೆ ಗುಲ್ಬರ್ಗಾದಲ್ಲಿ ಇವರ ಬೇಳೆ ಬೇಯಿಸಲು ಸಾಧ್ಯವಿಲ್ಲ ಎಂದು ಹತ್ಯೆ ಮಾಡಲು ಹೊರಟಿದ್ದಾರೆ. ಪ್ರಿಯಾಂಕ್ ಖರ್ಗೆ ನೀವು ಪ್ರಾಮಾಣಿಕರಾಗಿದ್ದರೆ ಸಿಬಿಐ ತನಿಖೆಗೆ ವಹಿಸಿ. ಸಿದ್ದರಾಮಯ್ಯ ಅವರನ್ನು ನಂಬಬೇಡಿ. ನಿಮ್ಮ ಪಕ್ಷದಲ್ಲಿ ಹಲವು ಷಡ್ಯಂತ್ರ ನಡೆಯುತ್ತಿದೆ. ನಿಮಗೆ ಸಿದ್ದರಾಮಯ್ಯ ಅವರಿಂದ ನ್ಯಾಯ ಸಿಗಲ್ಲ. ನಿಮಗೆ ಮುಖ್ಯಮಂತ್ರಿ ಆಗುವ ಆಸೆ ಇದ್ದರೆ ಸಿಬಿಐ ತನಿಖೆಗೆ ವಹಿಸಿ ಎಂದು ಹೇಳಿದ್ದಾರೆ.








