ವಿಜಯಪುರ: ಸಿಎಂ ಸಿದ್ದರಾಮಯ್ಯ (CM Siddaramaiah) ಗೌರವಯುತವಾಗಿ ರಾಜೀನಾಮೆ ನೀಡಲಿ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal) ಆಗ್ರಹಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಕೀಯದಲ್ಲಿ ನೀವು ಸ್ವಚ್ಛವಾಗಿರಿ. ಅವರು ಕಳ್ಳರಿದ್ದಾರೆ ಇವರು ಕಳ್ಳರಿದ್ದಾರೆ ಎಂದು ನೀವು ಹಾಗೇ ಮಾಡಬೇಡಿ. ಮುಡಾ ವಿಚಾರದಲ್ಲಿ (MUDA Scam) ನೀವು ಗೌರವಯುತವಾಗಿ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.
ಬೊಫೋರ್ಸ್ ವಿಚಾರದಲ್ಲಿ ಎಲ್‌ಕೆ ಅಡ್ವಾನಿಯವರ (L. K. Advani) ಹೆಸರು ಕೇಳಿ ಬಂದಿತ್ತು. ಕೇವಲ 50 ಲಕ್ಷ ರೂ. ಆರೋಪ ಬಂದಿತ್ತು. ಎಲ್‌ಕೆಎ ಎಂದು ಜೈನ್ ಡೈರಿಯಲ್ಲಿ ಬರೆಯಲಾಗಿತ್ತು. ಈ ಆರೋಪಕ್ಕೆ ರಾಜ್ಯಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರು. ಆನಂತರ ಪ್ರಕರಣದಿಂದ ಮುಕ್ತರಾಗಿ ಮತ್ತೆ ಸಂಸತ್ ಪ್ರವೇಶಿಸಿದ್ದರು ಎಂದು ಹೇಳಿದ್ದಾರೆ.
ಅಂತಹ ಆದರ್ಶವನ್ನು ನೀವು ಮೆರೆಯಿರಿ. ನೀವು ರಾಜ್ಯಕ್ಕೆ ಆದರ್ಶವಾಗಿ ನಿಲ್ಲಬೇಕು. ಇಲ್ಲವಾದರೆ ಯಡಿಯೂರಪ್ಪ ಅವರ ಹಾಗೇ ಆಗುತ್ತಾರೆ ಎಂದು ವ್ಯಂಗ್ಯವಾಡಿದ್ದಾರೆ.
ಸಿಎಂ ಹಿಂದೆ ಅಹಿಂದ ಸಂಘಟನೆ ಮಾಡಿದ್ದರು. ಆಗ ಅವರಿಗೆ ನಾನು ಬೆಂಬಲ ಕೊಟ್ಟು ಭಾಗಿಯಾಗಿದ್ದೆ. ಈಗಲೇ ಅವರು ಮತ್ತೆ ಅಹಿಂದ ಸಂಘಟನೆ ಮಾಡಿದರೆ ಬೆಂಬಲ ಕೊಡುತ್ತೇನೆ ಎಂದಿದ್ದಾರೆ.
ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ವಿರುದ್ಧ ಕೇಸ್ ದಾಖಲಿಸಲು ಕೋರ್ಟ್ ಆದೇಶ ಹಿನ್ನೆಲೆ ಮಾತನಾಡಿ, ನ್ಯಾಯಾಲಯದ ಆದೇಶ ಪಾಲಿಸಬೇಕು. ಎಲ್ಲರಿಗೂ ಅನ್ವಯವಾಗುತ್ತದೆ. ನನಗೂ ಅಷ್ಟೇ, ಪ್ರಧಾನ ಮಂತ್ರಿಗಳಿಗೂ ಅಷ್ಟೇ ಎಂದಿದ್ದಾರೆ.