ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ |
ಹೊಸ ವರುಷಕೆ, ಹೊಸ ಹರುಷವ ಹೊಸತು ಹೊಸತು ತರುತಿದೆ |
ಯುಗಾದಿ ಎಂದಾಗ ನನ್ನ ಮನಸ್ಸಿಗೆ ಮೊದಲು ಬರುವುದು ಈ ಹಾಡು. ಚಿಕ್ಕಂದಿನಿಂದ ಈ ಹಾಡನ್ನು ಕೇಳುತ್ತಾ ಬೆಳೆದಿದ್ದರೂ, ಪ್ರತಿ ಸಾರಿ ಕೇಳಿದಾಗೆಲ್ಲಾ ಅದೆನೋ ಹೊಸತನ, ಅದೆನೋ ಸಂತೋಷ. ಆದರೆ ಇಂದು ಈ ಹಾಡನ್ನು ಕೇಳುತ್ತಲಿದ್ದರೆ, ಅದರಲ್ಲಿನ ಎಂದಿನ ಸೊಗಸು ಕಣ್ಮರೆಯಾಗಿ ಅಲ್ಲಿ ಭಯ ಮನೆ ಮಾಡಿದಂತೆ ಅನಿಸುತ್ತಿದೆ. ಈ ಬಾರಿಯ ಯುಗಾದಿ ಕಹಿಯನ್ನು ಹೊತ್ತು ತಂದಿದೆ. ಎಲ್ಲೆಲ್ಲೂ ಆತಂಕ ಮನೆ ಮಾಡಿದೆ.
ಯುಗಾದಿಯೂ ಅಷ್ಟೇ, ಪ್ರತಿ ವರುಷ ಪ್ರಕೃತಿ ಹೊಸ ಚಿಗುರಿನೊಂದಿಗೆ ಹಸಿರನ್ನುಟ್ಟು ಹೊಸತನವನ್ನು ಹೊದ್ದು ಕಂಗೊಳಿಸುವ ಕಾಲ. ಮರಗಿಡಗಳು ಹೊಸ ಚಿಗುರಿನೊಂದಿಗೆ ಹಸಿರಾಗಿ ಕಾಣುವಾಗ ಅವುಗಳನ್ನು ನೋಡುವುದೇ ಒಂದು ಸೊಬಗು. ಆದರೆ ಈ ಬಾರಿ ಆ ಸೊಬಗನ್ನು ಆಸ್ವಾದಿಸುವ ಮನಸ್ಸಿಲ್ಲ. ಪ್ರತಿ ವರುಷ ಮಿಡಿ ಮಾವಿನ ಕಾಯಿಯಲ್ಲಿ ಇರುತ್ತಿದ್ದ ಸವಿಯನ್ನು ಈ ಬಾರಿ ಹುಳಿ ತುಂಬಿಕೊಂಡಿದೆ, ಸಿಹಿಯಾದ ಬೆಲ್ಲವನ್ನು ಕಹಿಯಾದ ಬೇವು ಸಂಪೂರ್ಣ ಆಕ್ರಮಿಸಿಕೊಂಡಿದೆ. ಹೊಸ ಬಟ್ಟೆ ತೊಟ್ಟು ದೇವಾಲಯಕ್ಕೆ ಹೋಗುವ ಸಡಗರವಿಲ್ಲ. ಹಬ್ಬದೂಟ ಮಾಡಿ ಸಂಭ್ರಮಿಸುವ ಮನಸ್ಸಿಲ್ಲ.
ಸಂಕ್ರಾಂತಿಯ ನಂತರದ ಮೊದಲ ಅಮಾವಾಸ್ಯೆ ಮುಗಿದು ಹೊಸ ಚಂದ್ರ ಮೂಡಿದಾಗ ಆರಂಭವಾಗುತ್ತದೆ ಹೊಸ ವರ್ಷ. ಅದೇ ಚಾಂದ್ರಮಾನ ಯುಗಾದಿ. ಯುಗಾದಿಯ ಅರ್ಥ ಯುಗದ ಆದಿ ಎಂದರೆ ಹೊಸವರ್ಷದ ಆರಂಭ. ಈ ಬಾರಿಯ ಹೊಸ ವರ್ಷ ಕೊರೋನಾ ಎಂಬ ರಕ್ಕಸಿಯ ಅಟ್ಟಹಾಸದೊಂದಿಗೆ ಪ್ರಾರಂಭವಾಗಿದೆ. ಯುಗಾದಿಯ ಸಂಭ್ರಮವನ್ನು ಕೊರೊನಾ ಭೀತಿ ಈ ಬಾರಿ ಮಂಕು ಮಾಡಿದೆ. ವಿಶ್ವದಾದ್ಯಂತ ಎಲ್ಲೆಡೆಯೂ ಕೊರೊನಾ ಸೋಂಕಿನ ಸಾವು ನೋವು. ಜಗತ್ತೇ ಒಂದು ರೀತಿಯಲ್ಲಿ ಕೊರೋನಾ ಕಾಟಕ್ಕೆ ಕಂಗೆಟ್ಟು, ಸ್ತಬ್ಧಗೊಂಡ ಅನುಭವ. ಇಡೀ ಮನುಕುಲವೇ ಕೊರೋನಾ ಎಂಬ ಸೋಂಕಿಗೆ ತತ್ತರಿಸಿ ಕೂತಿದೆ. ದಿನೇ ದಿನೇ ಸಾವಿನ ಸಂಖ್ಯೆ ಕೂಡ ಏರಿಕೆಯಾಗುತ್ತಿದೆ. ಇದರಿಂದ ಪಾರಾಗುವ ಬಗೆ ಹೇಗೆ ಎಂದು ಪ್ರತಿಯೊಬ್ಬರು ಯೋಚಿಸಿ ನಮ್ಮ ನಮ್ಮ ಆರೋಗ್ಯದ ಬಗ್ಗೆ ನಿಗಾ ವಹಿಸಿಕೊಳ್ಳಬೇಕಾದ ಕಾಲಘಟ್ಟದಲ್ಲಿ ಇಂದು ನಾವು ಇದ್ದೇವೆ.
ಬದುಕಿನಲ್ಲಿ ಬರುವ ಸಿಹಿ ಕಹಿ, ಕಷ್ಟ ಸುಖಗಳನ್ನು ಸಮನಾಗಿ ಸ್ವೀಕರಿಸುತ್ತೇವೆ ಎಂಬ ಸಂಕೇತವಾಗಿ ಯುಗಾದಿಯಂದು ಬೇವು ಬೆಲ್ಲ ಸ್ವೀಕರಿಸುವುದು ವಾಡಿಕೆ.
‘ ಶತಾಯುಃ ವಜ್ರದೇಹಾಯ ಸರ್ವ ಸಂಪತ್ಕರಾಯಚ |
ಸರ್ವಾರಿಷ್ಟ ವಿನಾಶಾಯ ನಿಂಬಕಂದಳ ಭಕ್ಷಣಾಂ |’
ಇದರರ್ಥ ನೂರು ವರುಷಗಳ ಆಯುಷ್ಯ ಸದೃಢ ಆರೋಗ್ಯ, ಸಕಲ ಸಂಪತ್ತುಗಳ ಪ್ರಾಪ್ತಿಗಾಗಿಯೂ, ಸಕಲ ಅರಿಷ್ಟ ನಿವಾರಣೆಗಾಗಿಯೂ ಬೇವು ಬೆಲ್ಲ ಸೇವನೆ ಮಾಡುತ್ತೇವೆ ಎಂದು.
ಈ ಬಾರಿ ನಾವೆಲ್ಲರೂ ಬೇವು ಬೆಲ್ಲ ಸ್ವೀಕರಿಸುವ ಜೊತೆಗೆ ಕೊರೊನಾ ಎಂಬ ಹೆಸರಿನಿಂದ ನಮ್ಮನ್ನು ಕಾಡುತ್ತಿರುವ ಮಹಾಮಾರಿಯನ್ನು ಮೂಲೋತ್ಪಾಟನೆ ಮಾಡುವ ಸಂಕಲ್ಪ ತೊಡೋಣ. ಸರಕಾರದ ಆದೇಶವನ್ನು ಪಾಲಿಸಿ, ಮನೆಯಲ್ಲೇ ಉಳಿದು ನಮ್ಮೆಲ್ಲರ ಆರೋಗ್ಯ ಕಾಪಾಡೋಣ, ಭಾರತವನ್ನು ಕೊರೊನಾದ ಬಿಗಿಮುಷ್ಟಿಯಿಂದ ರಕ್ಷಿಸೋಣ.
ಕಹಿಯ ನಂತರ ಸಿಹಿ, ಕಷ್ಟದ ನಂತರ ಸುಖ ಬರುವಂತೆ ಈ ಸಂವತ್ಸರದ ಪ್ರಾರಂಭ ಕೊರೊನಾ ಎಂಬ ಬೇವಿನಿಂದ ಪ್ರಾರಂಭವಾಗಿದ್ದರೂ ಮುಂದಿನ ದಿನಗಳಲ್ಲಿ ಬೆಲ್ಲದ ಸವಿಯನ್ನು ಈ ಯುಗಾದಿ ಉಣಿಸಲಿ ಎಂದು ಆಶಿಸೋಣ.








