ಒಂದೆಡೆ ಕೊರೊನಾಸುರನ ಆರ್ಭಟ, ಇನ್ನೊಂದೆಡೆ ಲಾಕ್ ಡೌನ್ ಸಂಕಟ, ಇದರ ಮಧ್ಯೆ ಫಸಲು ಬಂದರೂ ಮಾರಾಟ ಮಾಡಲಾಗದ ಸ್ಥಿತಿ. ಇದು ಸದ್ಯ ಅನ್ನದಾತನ ಪರಿಸ್ಥಿತಿ. ಮೊದಲೇ ರೈತರು ಸೂಕ್ತ ಬೆಲೆ ಇಲ್ಲದೆ, ಮಾರುಕಟ್ಟೆ ಇಲ್ಲದೆ ಪರದಾಡುತ್ತಿದ್ದಾರೆ. ಇದರ ಜೊತೆಗೆ ಈ ಹೆಮ್ಮಾರಿ ಕೊರೊನಾ ರೈತರ ಬದುಕನ್ನು ಮತ್ತಷ್ಟು ಸಂಕಷ್ಟಕ್ಕೆ ನೂಕಿದೆ. ಇಂಥ ವಿಷಮ ಸ್ಥಿತಿಯಲ್ಲಿ ಅನ್ನದಾತನ ನೆರವಿಗೆ ಬರುವಂತೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಾಡಿನ ಜನರನ್ನು ಕೋರಿಕೊಂಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, “ದೇಶದಾದ್ಯಂತ ಲಾಕ್ ಡೌನ್ ಘೋಷಿಸಿರುವ ಕಾರಣ, ರಾಜ್ಯದೆಲ್ಲೆಡೆ ಬೇಡಿಕೆಯಿಲ್ಲದೇ ತಾವು ಬೆಳೆದ ತರಕಾರಿಯನ್ನು ನೇರವಾಗಿ ಗ್ರಾಹಕರ ಮನೆ ಬಾಗಿಲಿಗೆ ಯಾವುದೇ ಮಧ್ಯವರ್ತಿಗಳು ಇಲ್ಲದೆ ಮಾರಾಟ ಮಾಡಲು ರೈತರು ಮುಂದಾಗಿದ್ದಾರೆ. ಅವರ ಬಳಿ ತರಕಾರಿ ಖರೀದಿಸುವ ಮೂಲಕ ರೈತರನ್ನು ಉಳಿಸೋಣ. ಅವರಿಗೆ ದಕ್ಕಬೇಕಾದ ಹಣವು ಅವರ ಪಾಲೇ ಆಗಲಿ ಅನ್ನೋದು ನನ್ನ ಆಶಯ” ಎಂದು ಅವರು ಹೇಳಿದ್ದಾರೆ.








