ಬೆಂಗಳೂರು: ಕೊರೊನಾ ವೈರಸ್ ಗೆ ವಿಶ್ವವೇ ತತ್ತರಿಸಿ ಹೋಗುತ್ತಿದ್ದು, ರಾಜ್ಯದಲ್ಲೂ ಈ ಕಿಲ್ಲರ್ ಕೊರೊನಾ ತನ್ನ ಕಬಂದ ಬಾಹುಗಳನ್ನು ಚಾಚುತ್ತಿದೆ. ಇದೀಗ ಕೊರೊನಾ ವೈರಸ್ ಚಿಕಿತ್ಸೆಗೆ ತಮ್ಮ ಕೈಲಾದ ಸಹಾಯ ಮಾಡಲು ಇನ್ಫೋಸಿಸ್ ಅಧ್ಯಕ್ಷೆ ಸುಧಾಮೂರ್ತಿ ಅವರು ಮುಂದಾಗಿದ್ದಾರೆ. ಈ ಹಿಂದೆ ಉತ್ತರ ಕರ್ನಾಟಕದಲ್ಲಿ ಪ್ರವಾಹ ಉಂಟಾಗಿ ಜನರು ತತ್ತರಿಸಿ ಹೋದಾಗ, ಸುಧಾಮೂರ್ತಿ ತಾವೇ ಮುಂದೆ ನಿಂತು ನೆರೆ ಪರಿಹಾರಕ್ಕೆ ಸಹಾಯ ಮಾಡಿದ್ದರು. ಈಗ ಕೊರೊನಾ ನಿಯಂತ್ರಣಕ್ಕೂ ಅವರು ಕೈಜೋಡಿಸಿದ್ದು, ಒಂದು ಸರ್ಕಾರಿ ಆಸ್ಪತ್ರೆಯನ್ನ ತಮಗೆ ವಹಿಸಿದ್ರೆ ಅದನ್ನು ಕೊರೊನಾ ವೈರಸ್ ಚಿಕಿತ್ಸೆಗಾಗಿ ತಮ್ಮ ಸಂಸ್ಥೆಯ ವೆಚ್ಚದಲ್ಲಿ ಸಜ್ಜುಗೊಳಿಸುವುದಾಗಿ ಅವರು ಸಿಎಂ ಬಿ.ಎಸ್ ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದಾರೆ. ಈ ಕುರಿತು ಶಿಕ್ಷಣ ಸಚಿವ ಸುರೇಶ್ ಕುಮಾರ್ ಫೇಸ್ ಬುಕ್ ನಲ್ಲಿ ಮಾಹಿತಿ ನೀಡಿದ್ದು, ಸುಧಾಮೂರ್ತಿ ಅವರ ಮಾತೃಹೃದಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಫೇಸ್ಬುಕ್ ಪೋಸ್ಟ್ ನಲ್ಲಿ ಏನಿದೆ?
ನಿನ್ನೆ ಬೆಳಿಗ್ಗೆ ನನಗೆ ಇನ್ಫೋಸಿಸ್ ಕಚೇರಿಯಿಂದ ಕರೆ ಬಂದಿತ್ತು. ಶ್ರೀಮತಿ ಸುಧಾಮೂರ್ತಿಯವರು ಮಾತನಾಡಿ ದೇಶ-ವಿದೇಶಗಳಲ್ಲಿ ಆತಂಕ ತಂದಿರುವ ಕರೋನಾ ವೈರಸ್ ವ್ಯಾಪಕವಾಗಿ ಹರಡದಂತೆ ನಮ್ಮ ರಾಜ್ಯದಲ್ಲಿ ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು ಚರ್ಚಿಸಿದರು.
ಒಂದು ಆಸ್ಪತ್ರೆಯನ್ನು ತಮಗೆ ವಹಿಸಿದರೆ ಅದನ್ನು ಕೊರೋನಾವೈರಸ್ ಚಿಕಿತ್ಸೆಗಾಗಿ ತಮ್ಮ ಸಂಸ್ಥೆಯ ವೆಚ್ಚದಲ್ಲಿ ಪೂರ್ಣಪ್ರಮಾಣದಲ್ಲಿ ಸಜ್ಜುಗೊಳಿಸುವುದಾಗಿ, ಅಗತ್ಯ ಉಪಕರಣಗಳನ್ನೂ ಒದಗಿಸುವುದಾಗಿ ಹೇಳಿದರು.
ಅಷ್ಟೇ ಅಲ್ಲ, ರಾಜ್ಯದ ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್, ಆರೋಗ್ಯ ಸಚಿವ ಶ್ರೀರಾಮುಲು ರೊಂದಿಗೂ ತಮ್ಮ ಈ ಪಾತ್ರದ ಕುರಿತು ಚರ್ಚಿಸಿದ್ದಾರೆ.
ರಾಜ್ಯದ ಮುಖ್ಯಮಂತ್ರಿಗಳಿಗೂ ಈ ಬಗ್ಗೆ ಪತ್ರ ಬರೆದಿದ್ದಾರೆ.
ಸದ್ಯದಲ್ಲಿಯೇ ಈ ಕುರಿತು ಉನ್ನತಮಟ್ಟದ ಸಭೆ ನಡೆಯಲಿದೆ.
ನಿನ್ನೆ ಸಂಜೆ ಸುಧಾಮೂರ್ತಿ ಯವರಿಗೆ ಫೋನ್ ಮಾಡಿ ನಮ್ಮ ಶಿಕ್ಷಣ ಇಲಾಖೆಯಲ್ಲಿ ಮಕ್ಕಳ ಹಿತವನ್ನು ಗಮನದಲ್ಲಿಟ್ಟುಕೊಂಡು ಶಾಲೆಗಳಿಗೆ ರಜೆ ಘೋಷಿಸಿರುವ ಕ್ರಮ ವಿವರಿಸಿದೆ. ಇಷ್ಟು ಬೇಗ ಕ್ರಮ ತೆಗೆದುಕೊಂಡಿರುವ ಬಗ್ಗೆ ತಮ್ಮ ಸಂತಸ ವ್ಯಕ್ತಪಡಿಸಿದರು.
ಈ ಹೃದಯವಂತಿಕೆ ನನ್ನ ಹೃದಯ ತುಂಬಿತು. ನಿಜವಾದ ಮಾತೃಕಾಳಜಿ ಈ ಮಹಾತಾಯಿಯದು ಎಂದು ಸುರೇಶ್ ಕುಮಾರ್ ಅವರು ಬರೆದುಕೊಂಡಿದ್ದಾರೆ.









