ಹೊಸದಿಲ್ಲಿ, ಮೇ 30: ಇಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಕೇಂದ್ರದಲ್ಲಿ ಎರಡನೇ ಬಾರಿ ಅಧಿಕಾರಕ್ಕೆ ಬಂದು ಒಂದು ವರ್ಷ ಪೂರೈಸಿದ ಹಿನ್ನಲೆಯಲ್ಲಿ ಪ್ರಧಾನಿ ಮೋದಿ ದೇಶದ ಜನರನ್ನು ಉದ್ದೇಶಿಸಿ ಪತ್ರವನ್ನು ಬರೆದಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ, ಎಲ್ಲ ಭಾರತೀಯರನ್ನು ಉದ್ದೇಶಿಸಿ ಬರೆದ ಪತ್ರದಲ್ಲಿ, ಕಳೆದ ವರ್ಷ ತಮ್ಮ ಸರ್ಕಾರ ತೆಗೆದುಕೊಂಡ ದಿಟ್ಟ ನಿರ್ಧಾರಗಳನ್ನು ಉಲ್ಲೇಖಿಸಿದ್ದು ಮಾತ್ರವಲ್ಲದೆ ಕಳೆದ ವರ್ಷದಲ್ಲಿ ವೇಗವಾಗಿ ಪ್ರಗತಿ ಸಾಧಿಸಿದೆವು ಆದರೆ ಈ ಬಾರಿ ಕೊರೋನ ವೈರಸ್ ಸೋಂಕಿನ ಬಿಕ್ಕಟ್ಟಿನಿಂದಾಗಿ ವಲಸೆ ಕಾರ್ಮಿಕರು, ಕಾರ್ಮಿಕರು ಮತ್ತು ಇತರರು ಭಾರಿ ಕಷ್ಟಕ್ಕೆ ಒಳಗಾದರು ಎಂದು ಹೇಳಿದ್ದಾರೆ.
ಕೊರೋನಾ ವೈರಸ್ನಿಂದ ವಲಸಿಗ ಕಾರ್ಮಿಕರು ಬಹಳ ಕಷ್ಟ ಎದುರಿಸುತ್ತಿರುವುದಕ್ಕೆ ಅನುಕಂಪ ವ್ಯಕ್ತಪಡಿಸಿದ ಅವರು ಕಾರ್ಮಿಕರು ಎದುರಿಸುತ್ತಿರುವ ಅನಾನುಕೂಲ ದುರಂತವಾಗಿ ಪರಿವರ್ತನೆಯಾಗದಂತೆ ನೋಡಿಕೊಳ್ಳಬೇಕಿದೆ ಎಂದು ಹೇಳಿದ್ದಾರೆ.
ಕೊರೋನಾ ವಿರುದ್ಧದ ಹೋರಾಟದಲ್ಲಿ ಭಾರತ ವಿಜಯದ ಹಾದಿಯಲ್ಲಿದ್ದು, ಬೇರೆ ದೇಶಗಳಿಗಿಂತ ಭಾರತದ ಪರಿಸ್ಥಿತಿ ಉತ್ತಮವಾಗಿದೆ ಎಂದು ಪ್ರಧಾನಿ ತಿಳಿಸಿದ್ದಾರೆ. ಕೊರೊನಾ ಸೋಂಕು ಸಮರ್ಥವಾಗಿ ತಡೆಗಟ್ಟುವ ನಿಟ್ಟಿನಲ್ಲಿ ಪ್ರತಿಯೊಬ್ಬ ಭಾರತೀಯರು ಲಾಕ್ ಡೌನ್ ನಿಯಮ
ಮಾರ್ಗಸೂಚಿಗಳನ್ನು ಪಾಲಿಸಬೇಕಿದೆ. ಇಲ್ಲಿಯವರೆಗೆ ನಾವು ತಾಳ್ಮೆಯನ್ನು ಪ್ರದರ್ಶಿಸಿದ್ದೇವೆ. ಮುಂದೆ ಕೂಡ ಇದನ್ನು ಮುಂದುವರೆಸೋಣ. ನಿಮ್ಮೆಲ್ಲರ ಸಹಕಾರದಿಂದಲೇ ಭಾರತ ಸುರಕ್ಷಿತವಾಗಿ ಇರುವುದು ಎಂದು ಹೇಳಿದ್ದಾರೆ.








