ಮಾನವ ಮತ್ತು ವನ್ಯಜೀವಿಗಳ ಸಂಘರ್ಷ ತಡೆಗಟ್ಟಲು ಇಲ್ಲೊಂದು ದೇಶ ವನ್ಯಜೀವಿಗಳ ಮಾರಣಹೋಮಕ್ಕೆ ಮುಂದಾಗಿ ಕಾನೂನು ಜಾರಿಗೊಳಿಸಿದೆ. ಹೌದು, ಕಗ್ಗತ್ತಲೆಯ ಕಾಡು ಎಂದೇ ಖ್ಯಾತಿ ಪಡೆದಿರುವ ಆಫ್ರಿಕಾದಲ್ಲಿ ವನ್ಯಜೀವಿಗಳು ಹೇರಳವಾಗಿದೆ. ಅದಕ್ಕೆ ಪ್ರಮುಖ ಕಾರಣ ಅಲ್ಲಿನ ಪರಿಸರ. ಇತ್ತೀಚೆಗೆ ಆಫ್ರಿಕಾದ ಬೋಟ್ಸ್ವಾನಾ ದೇಶದಲ್ಲಿ ಆನೆಗಳು ಹಾಗೂ ಜನರ ನಡುವೆ ಸಂಘರ್ಷ ತಾರಕಕ್ಕೇರಿದ್ದು. ಇದನ್ನ ತಡೆಗಟ್ಟುವ ನಿಟ್ಟಿನಲ್ಲಿ ಅಲ್ಲಿ ಸರ್ಕಾರ ಆನೆಗಳ ಕೊಲ್ಲಲು ಅನುಮತಿ ನೀಡಿದೆ.
ಜಗತ್ತಿನಲ್ಲಿಯೇ ಅತಿ ಹೆಚ್ಚು ಆನೆಗಳನ್ನು ಹೊಂದಿರುವ ದೇಶವಾದ ಬೋಟ್ಸ್ವಾನಾದಲ್ಲಿ ಆನೆ-ಮಾನವ ನಡುವಿನ ಸಂಘರ್ಷ ದೊಡ್ಡ ತಲೆನೋವುವಾಗಿದೆ. ಹೀಗಾಗಿ ಇದರ ನಿವಾರಣೆಗೆ ಮುಂದಾಗಿರುವ ಬೋಟ್ಸ್ವಾನಾ ಸರ್ಕಾರ ಆನೆಗಳ ಹತ್ಯೆಯ ಮೇಲೆ ಹೇರಿದ್ದ ನಿಷೇಧವನ್ನು ತೆರವುಗೊಳಿಸಿ, ಇದೀಗಾ ಆನೆಗಳ ಹತ್ಯೆಗೆ ಪರವಾನಗಿ ನೀಡಲು ಹರಾಜು ಪ್ರಕ್ರಿಯೆ ನಡೆಸಿದೆ.
ಆನೆಗಳ ಉಪಟಳ ತಡೆಯಲು ಸುಮಾರು 70 ಆನೆಗಳ ಹತ್ಯೆಗೆ ಅಲ್ಲಿನ ಸರ್ಕಾರ ಪರವಾನಗಿ ನೀಡಿದೆ. ಆನೆಗಳ ಹತ್ಯೆಯ ಮೇಲೆ ಐದು ವರ್ಷಗಳ ನಿಷೇಧ ಹೇರಲಾಗಿತ್ತು. ಅದನ್ನು ಅಧ್ಯಕ್ಷ ಮೊಕ್‍ಗ್ವೀಟ್ಸಿ ಮಸಿಸಿ ಸರ್ಕಾರ ತೆರವುಗೊಳಿಸಿ, ಇದೀಗಾ ಆನೆಗಳ ಮಾರಣಹೋಮಕ್ಕೆ ಆದೇಶ ನೀಡಿದ್ದಾರೆ.
ಪ್ರಾಣಿ ಮತ್ತು ಮನುಷ್ಯರ ನಡುವಿನ ಸಂಘರ್ಷವನ್ನು ನಿಯಂತ್ರಣಕ್ಕೆ ತರಲು ಆನೆಗಳ ಹತ್ಯೆ ಅತ್ಯಗತ್ಯವಾಗಿದೆ. ಆನೆಗಳಿಂದಾಗಿ ರೈತರು ತಮ್ಮ ಬೆಳೆಗಳನ್ನು ಕಳೆದುಕೊಂಡು ನಷ್ಟ ಅನುಭವಿಸಬೇಕಾಗಿದೆ. ಅಲ್ಲದೆ ಆನೆಗಳ ದಾಳಿಯಿಂದ ಸಾಕಷ್ಟು ಜನರು ಬಲಿಯಾಗಿದ್ದಾರೆ. ಹಾಗೇ ಬೋಟ್ಸ್ವಾನಾದ ಹಳ್ಳಿಗಳಲ್ಲಿ ಆನೆಗಳ ಕಾಟದಿಂದ ಗ್ರಾಮಸ್ಥರು ಸಂಕಷ್ಟ ಅನುಭವಿಸುತ್ತಿದ್ದಾರೆ. ಹೀಗಾಗಿ ಆನೆಗಳು ಹಳ್ಳಿಗಳಿಗೆ ನುಗ್ಗದಂತೆ ತಡೆಯಲು ಅವುಗಳನ್ನು ಕೊಲ್ಲುವುದು ಸೂಕ್ತ ಪರಿಹಾರವಾಗಿದೆ ಎಂದು ಅಲ್ಲಿನ ಅಧಿಕಾರಿಗಳು ತಿಳಿಸಿದ್ದಾರೆ.
ಒಟ್ಟಾರೆ ಆಫ್ರಿಕಾದ ಕೆಲ ದೇಶಗಳಲ್ಲಿ ಆನೆಗಳ ಸಂಖ್ಯೆ ಇಳಿಮುಖವಾಗಿದೆ. ಆದರೆ ಜಿಂಬಾಬ್ವೆ ಮತ್ತು ಬೋಟ್ಸ್ವಾನಾಗಳಲ್ಲಿ ಆನೆಗಳ ಸಂಖ್ಯೆ ಮಿತಿ ಮೀರಿದೆ. ಬೋಟ್ಸ್ವಾನಾದಲ್ಲಿ 1,30,000ಕ್ಕೂ ಅಧಿಕ ಆನೆಗಳಿವೆ. 1990ರ ವೇಳೆ ಇಲ್ಲಿ 80,000 ಆನೆಗಳ ಸಂಖ್ಯೆ ಇತ್ತು. ಇದೀಗಾ ಆನೆಗಳ ಸಂಖ್ಯೆ ಅಧಿಕವಾಗಿದೆ. ಹೀಗಾಗಿ ಬೇಟೆ ನಿಯಂತ್ರಿತ ಪ್ರದೇಶಗಳಲ್ಲಿ ಆನೆಗಳನ್ನು ಕೊಲ್ಲಲು ಪರವಾನಗಿಗಳನ್ನು ನೀಡಲಾಗಿದೆ. ಹೀಗಾಗಿ ಹರಾಜು ಪ್ರಕ್ರಿಯೆಯಲ್ಲಿ ಏಳು ಪರವಾನಗಿಯನ್ನ ನೀಡಲಾಗಿದೆ. ಒಂದೊಂದು ಪರವಾನಗಿ ತಲಾ ಹತ್ತು ಆನೆಗಳ ಹತ್ಯೆಗೆ ಅವಕಾಶ ನೀಡುತ್ತದೆ. ಬೋಟ್ಸ್ವಾನಾದಲ್ಲಿ ನೋಂದಣಿ ಮಾಡಿಕೊಂಡಿರುವ ಕಂಪೆನಿಗಳಿಗೆ ಈಗಾಗಲೇ ಪರವಾನಗಿ ನೀಡಲಾಗಿದ್ದು, 2020ರಲ್ಲಿ 272 ಆನೆಗಳನ್ನು ಕೊಲ್ಲಲು ಸರ್ಕಾರ ನಿರ್ದೇಶಿಸಿದೆ.
ಆಫ್ರಿಕಾದ ಬೋಟ್ಸ್ವಾನಾಕ್ಕೆ ಪ್ರವಾಸೋದ್ಯಮ ಪ್ರಮುಖ ಆದಾಯದ ಮೂಲ. ಆನೆಗಳ ಛಾಯಾಚಿತ್ರ ತೆಗೆಯಲು 2.5 ಮಿಲಿಯನ್ ವಿದೇಶಿ ಪ್ರವಾಸಿಗರು ಬೋಟ್ಸ್ವಾನಾಕ್ಕೆ ಭೇಟಿ ನೀಡಿದ್ದಾರೆ. ದೇಶದ ಶೇ 11.5 ಪ್ರವಾಸೋದ್ಯಮ ಜಿಡಿಪಿಗೆ ಭಾರಿ ಕೊಡುಗೆ ನೀಡಿದೆ. 76,000 ಉದ್ಯೋಗಗಳನ್ನು ಸೃಷ್ಟಿಮಾಡಿದೆ. ಬೋಟ್ಸ್ವಾನಾಕ್ಕೆ ಇಲ್ಲಿನ ಆನೆಗಳು ವಾಣಿಜ್ಯಾತ್ಮಕ ಲಾಭವನ್ನೂ ನೀಡುತ್ತದೆ. ಆದರೆ ಆನೆಗಳ ಹತ್ಯೆ ಪ್ರವಾಸೋದ್ಯಮಕ್ಕೆ ಭಾರಿ ಹೊಡೆತ ನೀಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.








