ಧಾರವಾಡ: ದಲಿತರ ಕೆರೆಗೆ ನುಗ್ಗಿ ಮನೆಗಳಿಗೆ ಬೆಂಕಿ ಹಚ್ಚಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಜೀವಾವಧಿಗೆ ಶಿಕ್ಷೆಯಾಗಿದ್ದ 99 ಜನ ಅಪರಾಧಿಗಳ ಪೈಕಿ 98 ಜನರಿಗೆ ಕೋರ್ಟ್ ಜಾಮೀನು ಮಂಜೂರು ಮಾಡಿದೆ.
ಕೊಪ್ಪಳ (Koppal) ಜಿಲ್ಲೆಯ ಗಂಗಾವತಿ (Gangavati) ತಾಲೂಕಿನ ಮರಕುಂಬಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ವಿಚಾರಣೆ ನಡೆಸಿದ್ದ ಕೊಪ್ಪಳ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿತ್ತು. ಸದ್ಯ ಧಾರವಾಡ (Dharwad) ಹೈಕೋರ್ಟ್ (High Court) ವಿಭಾಗೀಯ ಪೀಠ ಅಪರಾಧಿಗಳಿಗೆ ಜಾಮೀನು ಮಂಜೂರು ಮಾಡಿದೆ.
ಈಗ 99 ಜನ ಅಪರಾಧಿಗಳ ಪೈಕಿ 98 ಜನರಿಗೆ ಧಾರವಾಡದ ಹೈಕೋರ್ಟ್ ಜಾಮೀನು ನೀಡಿದೆ. ಈ ಕುರಿತು ವಿಚಾರಣೆ ನಡೆಸಿದ್ದ ಇಬ್ಬರು ನ್ಯಾಯಮೂರ್ತಿಗಳಿದ್ದ ವಿಭಾಗೀಯ ಪೀಠವು 98 ಜನ ಅಪರಾಧಿಗಳಿಗೆ ಜಾಮೀನು ಮಂಜೂರು ಮಾಡಿದೆ.
ಪ್ರಕರಣದ ಎ1 ಆರೋಪಿ ಮಂಜುನಾಥ ಎಂಬುವವರನ್ನು ಹೊರತುಪಡಿಸಿ, ಉಳಿದ ಎಲ್ಲ ಅಪರಾಧಿಗಳಿಗೆ ಜಾಮೀನು ಸಿಕ್ಕಿದೆ. ಮಂಜುನಾಥ ಜಾಮೀನಿಗೆ ಅರ್ಜಿ ಹಾಕದೇ ಇದ್ದಿದ್ದರಿಂದ ಆತನಿಗೆ ಜಾಮೀನು ದೊರೆತಿಲ್ಲ ಎಂದು ವಕೀಲರು ಹೇಳಿದ್ದಾರೆ.
ಘಟನೆ ಹಾಗೂ ಎಫ್‌ಐಆರ್ ದಾಖಲಾದ ಸಮಯದ ವ್ಯತ್ಯಾಸ ಮತ್ತು ಆರೋಪಿಗಳ ಗುರುತು ಪತ್ತೆ ಮಾಡಿಲ್ಲ ಎಂಬ ಅಂಶಗಳನ್ನು ಹೈಕೋರ್ಟ್ ಪ್ರಮುಖವಾಗಿ ಪರಿಗಣಿಸಿದೆ. ಹೀಗಾಗಿ ಆರೋಪಿಗಳಿಗೆ ಜಾಮೀನು ಸಿಕ್ಕಿದೆ.