ಬೆಂಗಳೂರು: ರಾಜ್ಯದಲ್ಲಿನ ಮದ್ಯ ಪ್ರಿಯರಿಗೆ ಸರ್ಕಾರ ಗುಡ್ ನ್ಯೂಸ್ ನೀಡಿದೆ. ಇಂದಿನಿಂದ ಮದ್ಯ ದರ (Liquor Price) ಇಳಿಕೆಯಾಗಿದೆ.
ಹೆಚ್ಚಿನ ಪ್ರಮಾಣದಲ್ಲಿ ಮಾರಾಟವಾಗುವ ಪ್ರೀಮಿಯಂ ಬ್ರ್ಯಾಂಡ್‌ಗಳ (Premium Brand) ದರದಲ್ಲಿ ಸರ್ಕಾರ ಮಟ್ಟದ ಇಳಿಕೆಯಾಗಿದೆ. ದೇಶದಲ್ಲಿ (India) ತಯಾರಿಸಿರುವ ಮದ್ಯದ ಅಬಕಾರಿ ಸುಂಕದ (Excise Duty) ಸ್ಲ್ಯಾಬ್ ಗಳ ಸಂಖ್ಯೆಯನ್ನು ಇತರೆ ರಾಜ್ಯಗಳ ಮದ್ಯದ ದರಕ್ಕೆ ಅನುಗುಣವಾಗಿ ಪರಿಷ್ಕರಿಸಲು ರಾಜ್ಯ ಸರ್ಕಾರ ಅಂತಿಮ ಅಧಿಸೂಚನೆ ಹೊರಡಿಸಿದೆ. ಇದರಿಂದ ರಾಜ್ಯದಲ್ಲಿ ಮದ್ಯದ ದರದಲ್ಲಿ ಸ್ವಲ್ಪಮಟ್ಟಿನ ವ್ಯತ್ಯಾಸವಾಗಲಿದೆ. ಹೀಗಾಗಿ ಇಂದಿನಿಂದ ದರದಲ್ಲಿ ಇಳಿಕೆಯಾಗಲಿದೆ.
ಒಂದೂವರೆ ತಿಂಗಳಾದರೂ ಅಂತಿಮಗೊಳಿಸದ ಕಾರಣ ಮಾರುಕಟ್ಟೆಯಲ್ಲಿ ಪ್ರೀಮಿಯಂ ಬ್ರಾಂಡ್ ಗಳ ಮದ್ಯಕ್ಕೆ ಭಾರಿ ಕೊರತೆ ಉಂಟಾಗಿತ್ತು. ಅಂತಿಮ ಅಧಿಸೂಚನೆಯಂತೆ ಸ್ಲ್ಯಾಬ್‌ಗಳ (Slab) ಸಂಖ್ಯೆ 18 ರಿಂದ 16ಕ್ಕೆ ಇಳಿಸಲಾಗಿದೆ. ಆದರೆ ಮೊದಲ ಮೂರು ಸ್ಲ್ಯಾಬ್ ಗಳಲ್ಲಿ ದರದ ವ್ಯತ್ಯಾಸ ಆಗುವುದಿಲ್ಲ. ನಾಲ್ಕನೇ ಸ್ಲ್ಯಾಬ್ ನಲ್ಲಿ ಮದ್ಯದ ದರ ಸ್ವಲ್ಪ ಏರಿಕೆಯಾಗಲಿದೆ. ಐದನೇ ಸ್ಲಾಬ್ ಬಳಿಕ 16ನೇ ಸ್ಲ್ಯಾಬ್‌ವರೆಗೆ ದರ ಕಡಿಮೆಯಾಗಲಿದೆ. ಹೀಗಾಗಿ ವಿಸ್ಕಿ, ರಮ್, ಬ್ರಾಂಡಿಗಳ ಬೆಲೆ ಇಳಿಕೆಯಾಗಲಿದೆ.
ಪ್ರತಿ ಬಲ್ಕ್ ಲೀಟರ್‌ನ ಘೋಷಿತ ಉತ್ಪಾದನಾ ದರ 450 ರೂ. ಹೊಂದಿರುವ ಮದ್ಯ ಮೊದಲ ಸ್ಲ್ಯಾಬ್‌ನಲ್ಲಿದ್ದರೆ 20 ಸಾವಿರ ರೂ. ಮತ್ತು ಅದಕ್ಕಿಂತ ಹೆಚ್ಚಿನ ಘೋಷಿತ ಉತ್ಪಾದನಾ ದರ ಹೊಂದಿರುವ ಮದ್ಯವನ್ನು 16ನೇ ಸ್ಲ್ಯಾಬ್ ಗೆ ಸೇರಿಸಿ ಸರ್ಕಾರ ಆದೇಶ ಹೊರಡಿಸಿದೆ.








