ಬಾವಲಿಗಳಿಂದ ಕರೋನಾ ವೈರಸ್ ಹಬ್ಬಿತು ಎನ್ನುವ ಜೀವ ವಿಜ್ಞಾನಿಗಳ ತರ್ಕದ ಆಧಾರದಲ್ಲಿ ಚೀನಾದ ವುಹಾನ್ ಪ್ರಾಂತ್ಯವನ್ನು ಮೊತ್ತಮೊದಲು ಸೀಲ್ ಡೌನ್ ಮಾಡಲಾಯಿತು. ಇದೇ ವುಹಾನ್ ಪ್ರಾಂತ್ಯದ ವೈಲ್ಡ್ ಮೀಟ್ ಮಾರ್ಕೆಟ್ ಅಥವಾ ಸೀ ಮೀಟ್ ಮಾರ್ಕೆಟ್ ಕೋವಿಡ್ 19 ಎಂಬ ಮಾರಣಾಂತಿಕ ವೈರಸ್ ಹುಟ್ಟಿದ ಕಾರಸ್ತಾನ. ಈ ಹುವನ್ ಪಟ್ಟಣದ ಸಮುದ್ರಜೀವಿಗಳ ಸಗಟು ಮಾರಾಟ ಕೇಂದ್ರವನ್ನು ಚೀನಾ ಸರ್ಕಾರ ಜನವರಿ 1ರಂದೇ ಮುಚ್ಚಿದ್ದರೂ ಅಲ್ಲೇ 15 ಕಿಲೋ ಮೀಟರ್ ದೂರದಲ್ಲಿ ಮತ್ತೊಂದು ಮಾರುಕಟ್ಟೆ ಆರಂಭವಾಗಿತ್ತು. ಅಲ್ಲಿ ಎಲ್ಲಾ ತರಹದ ನಡೆಯುವ ಹಾರುವ ತೆವಳುವ ಮತ್ತು ಈಜುವ ಜೀವ ಸಂಕುಲದ ಮಾಂಸಗಳ ಮಾರಾಟ ಎಗ್ಗುಸಿಗ್ಗಿಲ್ಲದೆ ನಡೆಯುತ್ತಿತ್ತು. ಮುಳ್ಳುನಳ್ಳಿ ಅಥವಾ ಕ್ರೇಫಿಶ್, ನರಿ, ಮೊಸಳೆ, ತೋಳಗಳ ಮರಿ, ಸಾಲ್ಮಂಡರ್, ಹಾವು, ಇಲಿ, ನವಿಲು, ಮುಳ್ಳುಹಂದಿ, ಕೋಲಾ ಜೊತೆಗೆ ಬಾವಲಿಯ ಮಾಂಸವೂ ಸೇರಿದಂತೆ ಈ ಪರ್ಯಾಯ ಮಾರುಕಟ್ಟೆಯಲ್ಲಿ ಎಲ್ಲ ಬಗೆಯ ಜೀವಿಗಳು ಮತ್ತವುಗಳ ಮಾಂಸ ಮಾರಾಟ ನಿರ್ಭೀಡೆಯಿಂದ ನಡೆದಿತ್ತು ಎಂಬಲ್ಲಿಗೆ ಪ್ರಪಂಚದ ಜೀವ ವೈವಿಧ್ಯತೆಯ ಪಾಲಿನ ನಿಜವಾದ ಕಂಟಕ ಈ ಚೀನಿಯರು ಎನ್ನುವುದನ್ನು ನಾವು ನಿಸ್ಸಂದೇಹವಾಗಿ ಒಪ್ಪಿಕೊಳ್ಳಬೇಕು. ಈ ನಿಟ್ಟಿನಲ್ಲಿ ವೈಲ್ಡ್ ಟ್ರೇಡ್ ಎನ್ನುವ ಪರಮ ಅನಿಷ್ಟ ದಂದೆಯ ಜಾಗತಿಕ ಬೇರುಗಳನ್ನು ಹುಡುಕಿ ಬರೆಯಲಾದ ವಿಸ್ಕೃತ ಲೇಖನವಿದು. ಇಂತದ್ದೊಂದು ಪ್ರಯತ್ನ ಮಾಡಿರುವ ಜಗತ್ತಿನ ಪ್ರಸಿದ್ಧ ಮಾಧ್ಯಮಗಳಲ್ಲಿ ಒಂದಾದ ಅಲ್ ಜಜೀರಾ ಮತ್ತು ಬಿಬಿಸಿ. ಹಾಂ ಅಂದ ಹಾಗೆ ಈ ವೈಲ್ಡ್ ಟ್ರೇಡ್ ಎಂಬ ಮಹಾ ಅನಿಷ್ಟ ದಂದೆಯ ಹಿಂದಿರುವ ದೊಡ್ಡ ಶಕ್ತಿ ಚೀನಾ. ವಿವರಗಳನ್ನ ನೀವೇ ಓದಿ.
ಜಾಗತಿಕ ಜನಪ್ರಿಯ ಸುದ್ದಿವಾಹಿನಿ ಬಿಬಿಸಿ ಅತ್ಯಂತ ಭಯಾನಕ, ಕರುಣಾಜನಕ ಹಾಗೂ ಆತಂಕಕಾರಿ ಮಾಹಿತಿಯೊಂದನ್ನು ಪ್ರಕಟಿಸಿದೆ. ಅದು ಗ್ಲೋಬಲ್ ವೈಲ್ಡ್ ಲೈಫ್ ಪೋಚಿಂಗ್ ಅಥವಾ ಜಾಗತಿಕ ವನ್ಯಜೀವಿ ಬೇಟೆಗೆ ಸಂಬಂಧಪಟ್ಟಿದ್ದು. ಇಂಟರ್ನ್ಯಾಷನಲ್ ವೈಲ್ಡ್ ಟ್ರೇಡ್ ನ ಕಾಳ ಕರಾಳ ಮುಖವನ್ನು ಅಂಕಿ ಅಂಶಗಳ ಸಹಿತ ವರದಿ ಮಾಡಿದೆ ಬಿಬಿಸಿ ಮತ್ತು ಅಲ್ ಜಜೀರಾ ಸುದ್ದಿ ಸಂಸ್ಥೆ. ಕಾಡು ಪ್ರಾಣಿಗಳ ದೇಹಭಾಗಗಳನ್ನು ಕಳ್ಳ ಸಾಗಾಣಿಕೆ ಮಾಡುವ ಜಾಗತಿಕ ಜಾಲದ ಆಳ-ಅಗಲ, ವ್ಯಾಪ್ತಿ-ವಿಸ್ತಾರ ಹಾಗೂ ಮಿಲಿಯನ್ ಡಾಲರ್ ವಹಿವಾಟಿನ ಇಂಚಿಂಚೂ ಮಾಹಿತಿ ವನ್ಯಜೀವಿ ಪ್ರಿಯರು ಹಾಗೂ ಪರಿಸರವಾದಿಗಳನ್ನು ಬೆಚ್ಚಿ ಬೀಳಿಸುತ್ತಿದೆ.
ವರ್ಲ್ಡ್ ವೈಲ್ಡ್ ಲೈಫ್ ಫಂಡ್, ಸೇವ್ ದ ರೈನೋ, ಪ್ಲಾಸ್ ಒನ್, ನ್ಯಾಷನಲ್ ಜಿಯೋಗ್ರಾಫಿಕ್, 2014ರ ಐಯೂಸಿಎನ್ ರೆಡ್ ಲಿಸ್ಟ್- ಅಪಾಯದಂಚಿನ ಜೀವ ವೈವಿಧ್ಯ, 2016 ಐಶರ್ ಕನ್ಸರ್ವೇಷನ್ ಎಂಡ್ ಸೊಸೈಟಿ, 2017 ಡಿಸೆಂಬರ್ ಟ್ರಾಫಿಕ್ ರಿಪೋರ್ಟ್, 2016 ಸೈಟ್ಸ್, ಪ್ಯಾಂಗೋಲಿನ್ ಡೇಟಾಬೇಸ್, ಇನ್ಗ್ರಾಂ ಅಟ್ ಅಲ್ 2017, ಕನ್ಸರ್ವೇಷನ್ ಲೆಟರ್ಸ್, ಕಾಂಪೀಡಿಯಂ ಆಫ್ ಮಟೀರಿಯಾ ಮೆಡಿಕಾ ಮುಂತಾದ ಮೂಲಗಳಿಂದ ಹೆಕ್ಕಲಾದ ಸಮಗ್ರ ಮಾಹಿತಿಯನ್ನು ಬಿಬಿಸಿ ಬಹಿರಂಗಪಡಿಸಿದೆ.
ಜಾಗತಿಕ ವನ್ಯಜೀವಿ ಕಳ್ಳ ವ್ಯಾಪಾರದ ಕಬಂಧ ಬಾಹುಗಳು:
ಜಾಗತಿಕ ಅಕ್ರಮ ವನ್ಯಜೀವಿ ಕಾಳದಂದೆಯ ಒಟ್ಟು ವಹಿವಾಟು 10.5 ಬಿಲಿಯನ್ ಪೌಂಡ್ ಅಥವಾ 15 ಮಿಲಿಯನ್ ಡಾಲರ್. ಅಂದರೆ 1500 ಕೋಟಿ ಡಾಲರ್ ಅಥವಾ ಭಾರತೀಯ ರೂಪಾಯಿ ಅಂದಾಜಿನಲ್ಲಿ 1 ಲಕ್ಷದ 5 ಸಾವಿರ ಕೋಟಿ ರೂಪಾಯಿ. ಜಾಗತಿಕವಾಗಿ ಬೇಟೆಯಾಡುವ ಹುಲಿಗಳ ಮೂರು ಪಟ್ಟು ಹೆಚ್ಚಿನ ಹುಲಿಗಳನ್ನು ಯುನೈಟೆಡ್ ಸ್ಟೇಟ್ಸ್ ನಲ್ಲಿ ಬೇಟೆಯಾಡಲಾಗಿದೆ. ಅಂದರೆ ಜಾಗತಿಕವಾಗಿ ಅಂದಾಜು 3900 ಹುಲಿಗಳ ಪೋಚಿಂಗ್ ನಡೆದರೆ ಯುಎಸ್ ನಲ್ಲೇ 5 ರಿಂದ 10 ಸಾವಿರ ಹುಲಿಗಳು ಶಿಕಾರಿಯಾಗಿವೆ. ದಕ್ಷಿಣ ಆಫ್ರಿಕಾದಲ್ಲಿ 2007ರಿಂದ 2014ರ ಅವಧಿಯಲ್ಲಿ ಘೇಂಡಾಮೃಗಗಳ ಬೇಟೆ ಪ್ರಮಾಣ ಶೇ. 9250% ಹೆಚ್ಚಾಗಿದೆ. ಅಂದರೆ ಈ ನಡುವಿನ ಅವಧಿಯಲ್ಲಿ 13 ರೈನೋಗಳಿಂದ ಶುರುವಾಗಿ ಬರೋಬ್ಬರಿ 1215 ಅಮಾಯಕ ರೈನೋಗಳ ಹತ್ಯೆಯಾಗಿದೆ. ಇದೇ ಅವಧಿಯಲ್ಲಿ ಶೇ.30% ಏಷ್ಯನ್ ಆನೆಗಳ ಬೇಟೆಗಾರಿಕೆ ಹೆಚ್ಚಳವಾಗಿದೆ.
25 ವರ್ಷಗಳಲ್ಲಿ ಚೀನಾದ ಬ್ಲಾಕ್ ಮಾರ್ಕೆಟ್ ಗಳಲ್ಲಿ ಹೆಚ್ಚಳವಾದ ಆನೆದಂತದ ಮೊತ್ತ 3 ಪೌಂಡ್ ನಿಂದ 1346 ಪೌಂಡ್. ಅಂದರೆ ರೂಪಾಯಿ ಮೌಲ್ಯದಲ್ಲಿ, ಪ್ರತೀ ಕೆಜಿಗೆ 267 ರೂಪಾಯಿಯಿಂದ 12 ಲಕ್ಷದಷ್ಟು ಹೆಚ್ಚಾಗಿದೆ.
ಪ್ರತೀ ವರ್ಷ 73 ಮಿಲಿಯನ್ ದೈತ್ಯ ಶಾರ್ಕ್ ಮೀನುಗಳನ್ನು ಕೇವಲ ಈಜುರೆಕ್ಕೆಗಾಗಿ ಕೊಲ್ಲಲಾಗ್ತಿದೆ. ಕಳೆದ 10 ವರ್ಷಗಳಲ್ಲಿ ಜಗತ್ತಿನ ಕಾಡುಗಳಲ್ಲಿ ಅಕ್ರಮ ಬೇಟೆಗಾರಿಕೆಗೆ ತೊಡಕಾಗಿದ್ದಾರೆನ್ನುವ ಕಾರಣಕ್ಕೆ 10 ಸಾವಿರಕ್ಕೂ ಅಧಿಕ ಕರ್ತವ್ಯನಿರತ ಅರಣ್ಯಾಧಿಕಾರಿಗಳನ್ನು ಹತ್ಯೆ ಮಾಡಲಾಗಿದೆ. 2011ರಲ್ಲಿ ಪ್ರತೀ ದಿನ 68 ಆನೆಗಳ ಸರಾಸರಿಯಂತೆ ಒಟ್ಟು 25 ಸಾವಿರಕ್ಕೂ ಹೆಚ್ಚಿನ ಆಫ್ರಿಕನ್ ಆನೆಗಳನ್ನು ಬೇಟೆಯಾಡಿ ಕೊಲ್ಲಲಾಗಿದೆ.
ಪ್ರತೀ ವರ್ಷ ಹತ್ತಾರು ದಶಲಕ್ಷ ಸಮುದ್ರಕುದುರೆಗಳೆಂಬ ನಿರುಪದ್ರವಿ ಜೀವಿಗಳನ್ನು ಕೊಂದು ಮಾರಾಟ ಮಾಡಲಾಗಿದೆ. ಒಂದು ಮೂಲದ ಪ್ರಕಾರ ಈಗ ನಾಶವಾಗಿರುವ ಇವುಗಳ ಸಂತತಿ ಶೇ.98ರಷ್ಟು; ಈಗ ಉಳಿದಿರುವುದು ಕೇವಲ 2% ಮಾತ್ರ.
ವ್ಯಾಪಕವಾಗಿ ಶಿಕಾರಿಯಾಗುತ್ತಿರುವ ಏಷ್ಯಾದ ಚಿಪ್ಪುಹಂದಿಗಳು:
ಜಗತ್ತಿನಾದ್ಯಂತ ವೈಲ್ಡ್ ಲೈಫ್ ಸ್ಮಗ್ಲಿಂಗ್ ನಲ್ಲಿ ಅತಿ ಹೆಚ್ಚು ಅಪಾಯ ಎದುರಿಸಿರುವುದು ಪ್ಯಾಂಗೋಲಿನ್ ಎಂದು ಕರೆಯಲ್ಪಡುವ ಚಿಪ್ಪುಹಂದಿ. ಏಷ್ಯಾ ಹಾಗೂ ಆಫ್ರಿಕಾ ಎರಡೂ ಖಂಡಗಳಲ್ಲಿ ಕಳೆದ ಕೆಲವು ದಶಕಗಳಿಂದ ಇವುಗಳ ಬೇಟೆ ಹಾಗೂ ಕಳ್ಳ ಸಾಗಾಣಿಕೆ ವ್ಯಾಪಕವಾಗಿ ನಡೆದಿದೆ. ಈ ಚಿಪ್ಪು ಹಂದಿಯನ್ನು ಚೀನಿಯರು ಔಷದದ ನೆಪವೊಡ್ಡಿ ಮಾಂಸಕ್ಕಾಗಿ ಮತ್ತು ಚಿಪ್ಪುಗಳಿಗಾಗಿ ವ್ಯಾಪಕವಾಗಿ ಕೊಂದು ಮುಗಿಸಿದ್ದಾರೆ. ಈ ಕರೋನಾ ಕಾಲದಲ್ಲೂ ಚೀನಿಯರ ವೆಬ್ ಸೈಟುಗಳಲ್ಲಿ ಅತಿ ಹೆಚ್ಚು ಸರ್ಚ್ ಆಗುತ್ತಿರುವುದು ಚಿಪ್ಪು ಹಂದಿಯ ಮಾಂಸ ಎಲ್ಲಿ ಸಿಗುತ್ತದೆ ಎನ್ನುವ ಪ್ರಶ್ನೆಗಳೇ.
ಸುಂಡಾ ಪ್ಯಾಂಗೋಲಿನ್ ಅಥವಾ ಮಲಯನ್ ಚಿಪ್ಪುಹಂದಿ, ಪಲವಾನ್ ಪ್ಯಾಂಗೋಲಿನ್ ಅಥವಾ ಫಿಲಿಪ್ಪೈನ್ಸ್ ಚಿಪ್ಪುಹಂದಿ
ಚೈನೀಸ್ ಚಿಪ್ಪುಹಂದಿ ಹಾಗೂ
ಇಂಡಿಯನ್ ಪ್ಯಾಂಗೋಲಿನ್ ಇವು ಬೇಟೆಯಾಗಿ ನಾಶ ಹೊಂದುತ್ತಿರುವ ಏಷ್ಯಾದ ಚಿಪ್ಪು ಹಂದಿಗಳು. ಅವ್ಯಾಹತವಾಗಿ ಬೇಟೆಯಾಗುತ್ತಿರುವ ಆಫ್ರಿಕಾದ ಚಿಪ್ಪುಹಂದಿಗಳು ಸಹ ಇವೆ. ಜೈಂಟ್ ಪ್ಯಾಂಗೋಲಿನ್ ಅಥವಾ ದೈತ್ಯ ಚಿಪ್ಪುಹಂದಿ
ಕೇಪ್ ಪ್ಯಾಂಗೋಲಿನ್ ಅಥವಾ ಗ್ರೌಂಡ್ ಪ್ಯಾಂಗೋಲಿನ್, ಬ್ಲಾಕ್ ಬೆಲ್ಲೀಡ್ ಪ್ಯಾಂಗೋಲಿನ್ ಅಥವಾ ಉದ್ದ ಬಾಲದ ಚಿಪ್ಪುಹಂದಿ, ವೈಟ್ ಬೆಲ್ಲೀಡ್ ಪ್ಯಾಂಗೋಲಿನ್ ಅಥವಾ ವೃಕ್ಷ ಚಿಪ್ಪುಹಂದಿ, ಈ ಪ್ರಬೇಧಗಳು ಅತಿ ಹೆಚ್ಚು ಶಿಕಾರಿಯಾಗುತ್ತಿರುವ ಆಫ್ರಿಕನ್ ಪ್ಯಾಂಗೋಲಿನ್ ಗಳು.
ಪ್ಯಾಂಗೋಲಿನ್ ಅಥವಾ ಚಿಪ್ಪುಹಂದಿಯ ಟ್ರೇಡ್ ರೂಟ್:
ಏಷ್ಯಾ ಹಾಗೂ ಆಫ್ರಿಕಾದ ಕಾಡುಗಳಲ್ಲಿ ಈ ಅಮಾಯಕ ಚಿಪ್ಪುಹಂದಿಗಳ ಶಿಕಾರಿ ಎಗ್ಗುಸಿಗ್ಗಿಲ್ಲದೆ ನಡೆಯುತ್ತಿದ್ರೂ ಇದರ ಕಾಳದಂಧೆಯ ಬೇರುಗಳು ಯುಎಸ್ಎ ಹಾಗೂ ಯೂರೂಪ್ ಸೇರಿದಂತೆ 67 ರಾಷ್ಟ್ರಗಳಲ್ಲಿ ಹಬ್ಬಿವೆ. ಆದರೆ ಈ ಚಿಪ್ಪುಹಂದಿ ಬೇಟೆಯ ತವರು ಮಾತ್ರ ಕ್ರೂರಿ ಚೀನಾ. ಈ ಜಾಲವನ್ನು ಡೈರೆಕ್ಟ್ ರೂಟ್ಸ್ ಅಥವಾ ನೇರವಾಗಿ ಶಾಮೀಲಾಗಿರುವ ರಾಷ್ಟ್ರಗಳು ಹಾಗೂ ಟ್ರಾನ್ಸಿಟ್ ರೂಟ್ಸ್ ಅಥವಾ ಚಿಪ್ಪುಹಂದಿಯನ್ನು ಕಳ್ಳಸಾಗಾಣಿಕೆ ಮಾಡುವ ಕಳ್ಳಮಾರ್ಗಗಳಿರುವ ರಾಷ್ಟ್ರಗಳೆಂದು ಗುರುತು ಮಾಡಲಾಗಿದೆ.
ಚೀನಾದಿಂದ ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾ, ನೆದರ್ಲ್ಯಾಂಡ್, ಹಾಂಕಾಂಗ್ ಗೆ ನೇರವಾದ ಸಂಪರ್ಕವಿದೆ. ನೇಪಾಳ, ಮಯನ್ಮಾರ, ಲಾವೋಸ್, ವಿಯೇಟ್ನಾಂಗಳಿಂದ ಚೈನಾಗೆ ನೇರವಾದ ರೂಟ್ಸ್ ಇದೆ. ಭಾರತದಿಂದ ಲಾವೋಸ್ ಗೆ, ಲಾವೋಸ್ ನಿಂದ ವಿಯೇಟ್ನಾಂಗೆ, ವಿಯೇಟ್ನಾಂನಿಂದ ಯುನೈಟೆಡ್ ಸ್ಟೇಟ್ಸ್ ವರೆಗೆ ಒಂದು ಜಾಲ ಹಬ್ಬಿದ್ದರೆ, ಥಾಯ್ಲ್ಯಾಂಡ್, ಮಲೇಶಿಯಾ ಹಾಗೂ ಇಂಡೋನೇಷ್ಯಾಗಳ ವನ್ಯಜೀವಿ ಹಂತಕರ ಕೂಳಪಡೆ ನೇರವಾಗಿ ಚಿಪ್ಪುಹಂದಿಗಳ ಬೇಟೆ ಅಕ್ರಮದಲ್ಲಿ ತೊಡಗಿದ್ದಾರೆ.
ಇನ್ನು ಇವೇ ಭಾರತ, ನೇಪಾಳ, ಪಾಕಿಸ್ತಾನ, ಚೀನಾ, ಮಯನ್ಮಾರ್, ಲಾವೋಸ್, ವಿಯೇಟ್ನಾಂ, ಥಾಯ್ಲ್ಯಾಂಡ್, ಮಲೇಶಿಯಾ, ಇಂಡೋನೇಷ್ಯಾ ರಾಷ್ಟ್ರಗಳಿಂದ ಸಗಾಣೆಯಾಗುವ ಚಿಪ್ಪುಹಂದಿಗಳ ಸ್ಮಗಲ್ ಗೂಡ್ಸ್, ಆಫ್ರಿಕಾದ ರಾಷ್ಟ್ರಗಳಾದ ಇಥಿಯೋಪಿಯಾ, ನೈಜೀರಿಯಾ, ಕೆಮರೋನ್, ಜಿನಿಯಾ, ಲೈಬೀರಿಯಾಗಳ ಮೂಲಕ ರವಾನೆಯಾಗುತ್ತವೆ. ಅತ್ತ ಯುರೋಪಿಯನ್ ರಾಷ್ಟ್ರಗಳಾದ ಸ್ವಿಟ್ಝರ್ಲ್ಯಾಂಡ್, ಬೆಲ್ಜಿಯಂ, ಜರ್ಮನಿ ಮೂಲಕ ಇಂಟರ್ಕನೆಕ್ಟ್ ಆಗಿ ಅಂತಿಮವಾಗಿ ಯುನೈಟೆಡ್ ಸ್ಟೇಟ್ಸ್ ಹಾಗೂ ಮೆಕ್ಸಿಕೋ ತಲುಪಿಕೊಳ್ಳುತ್ತವೆ. ನಾಲ್ಕು ಆಫ್ರಿಕನ್ ಆನೆಗಳ ತೂಕಕ್ಕೆ ಸಮನಾದ ಬರೋಬ್ಬರಿ 20 ಟನ್ ನಷ್ಟು ಚಿಪ್ಪುಹಂದಿಗಳ ದೇಹದ ಭಾಗಗಳನ್ನು ಪ್ರತೀ ವರ್ಷ ಕಳ್ಳ ಸಾಗಾಣಿಕೆ ಮಾಡಲಾಗುತ್ತದೆ.
ಚಿಪ್ಪುಹಂದಿಗಳನ್ನು ಮಾಂಸ ಹಾಗೂ ಚಿಪ್ಪುಗಳಿಗಾಗಿ ಪೋಚಿಂಗ್ ಮಾಡಲಾಗುತ್ತೆ. ಇದರ ಮಾಂಸ ಹಾಗೂ ಚಿಪ್ಪುಗಳಿಂದ ಮಾಡುವ ವಸ್ತ್ರ ಹಾಗೂ ಒಡವೆಗಳು ಮುಂದುವರೆದ ರಾಷ್ಟ್ರಗಳ ಶ್ರೀಮಂತರಿಗೆ ಪ್ರತಿಷ್ಟೆ. ಇದನ್ನು ಚೀನಿಯರು ತಮ್ಮ ಪಾರಂಪರಿಕ ಔಷದಿಗಳಿಗಾಗಿಯೂ ಬಳಸಿಕೊಳ್ಳುತ್ತಾರೆ. ಹೀಗಾಗಿ ಪ್ರತೀ ವರ್ಷ ಲೆಕ್ಕವಿಲ್ಲದಷ್ಟು ಚಿಪ್ಪುಹಂದಿಗಳ ಮಾರಣಹೋಮ ಅನಿಯಂತ್ರಿತವಾಗಿ ನಡೆಯುತ್ತಿದೆ.
ಇದೊಂದು ಕಡೆಯಾದ್ರೆ ನವನಾಗರೀಕತೆಯ ಸ್ವಾರ್ಥ ಹಾಗೂ ಮನುಷ್ಯನ ವಸಾಹತು ವಿಸ್ತರಣೆ ಪ್ಯಾಂಗೋಲಿನ್ ಸಂತತಿಯನ್ನು ವಿನಾಶದಂಚಿಗೆ ಕೊಂಡೊಯ್ದಿದೆ. ಕೃಷಿ, ತೋಟಗಾರಿಕೆ, ತಾಳೆ ಎಣ್ಣೆಗಾಗಿ ಕಾಡಿನ ನಾಶ, ಎಲೆಕ್ಟ್ರಿಕ್ ಫೆನ್ಸಿಂಗ್ ಬೇಲಿಗಳಿಂದ ಲೆಕ್ಕಕ್ಕೆ ಸಿಗದಷ್ಟು ಚಿಪ್ಪುಹಂದಿಗಳು ನಾಶವಾಗ್ತಿವೆ.. ಇವುಗಳ ಸ್ವಾಭಾವಿಕ ಆವಾಸತಾಣ ಸರ್ವನಾಶವಾಗ್ತಿದೆ. ಮುಖ್ಯವಾಗಿ ಇತ್ತೀಚೆಗೆ ಆಫ್ರಿಕನ್ ರಾಷ್ಟ್ರಗಳಲ್ಲಿ ಇದು ಹೆಚ್ಚಾಗ್ತಿದೆ. ಒಂದು ಅಂದಾಜಿನ ಪ್ರಕಾರ ಕಳೆದ 12 ತಿಂಗಳಿನಲ್ಲಿ ಬರೋಬ್ಬರಿ 1 ಲಕ್ಷ ಚಿಪ್ಪುಹಂದಿಗಳು ತಮ್ಮ ನೆಲೆಯನ್ನೂ ಕಳೆದುಕೊಂಡು ಪ್ರಾಣವನ್ನೂ ಕಳೆದುಕೊಂಡಿವೆ; ತಮ್ಮದಲ್ಲದ ತಪ್ಪಿಗೆ. ಒಂದು ಮೂಲದ ಮಾಹಿತಿಯನ್ವಯ 2000ನೇ ಇಸವಿಯಿಂದ ಇಲ್ಲಿಯವರೆಗೆ ಅಂದರೆ 18 ವರ್ಷಗಳಲ್ಲಿ 1 ಮಿಲಿಯನ್ ಗೂ ಹೆಚ್ಚು ಪ್ಯಾಂಗೋಲಿನ್ ಗಳು ಸತ್ತು ಕಳ್ಳಸಾಗಾಣಿಕೆಕೋರರ ದಂಧೆಯ ಸರಕಾಗಿವೆ. ಅಂದರೆ ಪ್ರತೀ 5 ನಿಮಿಷಕ್ಕೆ ಒಂದು ಚಿಪ್ಪುಹಂದಿ ಹತ್ಯೆಯಾಗಿದೆ. ಇನ್ನೊಂದು ಮೂಲದ ಮಾಹಿತಿಯ ಪ್ರಕಾರ, ಆಫ್ರಿಕಾದಲ್ಲಿ ಪ್ರತೀ ವರ್ಷ ಹತ್ತಿರ ಹತ್ತಿರ 2.7 ಮಿಲಿಯನ್ ಚಿಪ್ಪುಹಂದಿಗಳ ಹತ್ಯೆಯಾಗುತ್ತಿದೆ.
ಮುಂದೊಂದು ದಿನ ಚಿಪ್ಪು ಹಂದಿಗಳು ಮಾತ್ರವಲ್ಲ ಜೀವಸಂಕುಲದ ಎಲ್ಲಾ ಜೀವಿಗಳನ್ನೂ ಸೃಷ್ಟಿಯಿಂದಲೇ ನಾಶ ಮಾಡುವತನಕ ಈ ಚೀನಿಯರು ಮತ್ತು ವೈಲ್ಡ್ ಟ್ರೇಡ್ ಕರಾಳ ದಂದೆಯ ರಾಕ್ಷಸರು ನೆಮ್ಮದಿಯಾಗಿರಲಾರರೇನೋ! ಹೀಗಾಗೇ ಲೀವ್ ಎಂಡ್ ಲೆಟ್ ಲೀವ್ ಎನ್ನುವ ಸ್ಲೋನ್ ಬರೀ ಬೊಗಳೆ ಎನಿಸಿಕೊಂಡಿರುವುದು. ತಾನು ಬದುಕಲು ಸೃಷ್ಟಿಯನ್ನೇ ನಾಶ ಮಾಡುತ್ತಿರುವ ಮನುಷ್ಯ ಬದುಕಲು ಯೋಗ್ಯವಾ?
-ವಿಭಾ