ಸಾವಿನ ಕೈಗೆ ಬದುಕು ಕೊಡುವುದು ಸಹ್ಯವಲ್ಲ
✍ ಪೇತ್ರಿ ವಿಶ್ವನಾಥ ಶೆಟ್ಟಿ
ಕೊರೊನಾ ಎನ್ನುವ ಮಹಾಮಾರಿಯಿಂದ ಎಷ್ಟು ಜನ ಸಾವಿಗೆ ತುತ್ತಾದರೋ ಗೊತ್ತಿಲ್ಲ. ಆದರೆ ಇತ್ತೀಚೆಗೆ ಹೃದಾಯಾಘಾತದಿಂದ ಅದೆಷ್ಟೋ ಮಂದಿ ತಮ್ಮ ಕೊನೆಯುಸಿರೆಳೆದರು. ಇನ್ನು ಕೆಲವರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ
ಚಿಂತೆ ಮತ್ತು ಚಿತೆ ಗೆ ನಡುವೆ ಇರುವುದು ಒಂದು ಸೊನ್ನೆ ಮಾತ್ರ ಎನ್ನುವುದನ್ನು ಕೇಳಿದ್ದೇವೆ. ಈಗಿನ ಪರಿಸ್ಥಿತಿಯಲ್ಲಿ ನಾವು ಅದನ್ನು ಕಣ್ಣಾರೆ ನೋಡುತ್ತಿದ್ದೇವೆ. ನಮ್ಮ ಜೀವನವೇ ಒಂದು ಪ್ರಶ್ನಾರ್ಥಕ ಚಿಹ್ನೆಯಲ್ಲಿದೆ ಸತ್ಯ. ಮುಂದೇನು ಎನ್ನುವುದು ಎಲ್ಲರನ್ನು ಕಾಡುತ್ತಿರುವ ಪ್ರಶ್ನೆ. ಹಾಗಂತ ಅತಿಯಾಗಿ ಚಿಂತಿಸಿದಾಗ ಆರೋಗ್ಯದಲ್ಲಿ ಏರು ಪೇರಾಗುತ್ತದೆ. ಹೃದಯಾಘಾತವಾಗುತ್ತದೆ. ಅದಕ್ಕಾಗಿ ನಾವು ಸಮಧಾನ ಚಿತ್ತರಾಗಬೇಕಾಗಿದೆ
ಇದು ನಮಗೊಬ್ಬರಿಗೆ ಬಂದ ಸಮಸ್ಯೆಯಲ್ಲ. ಇಡೀ ಜಗತ್ತೇ ತೊಂದರೆಯಲ್ಲಿದೆ ಎನ್ನುವುದನ್ನು ನಾವು ಮರೆಯಬಾರದು.ಸಮಸ್ಯೆಗಳಿಗೆ ಒಂದಲ್ಲ ಒಂದು ರೀತಿಯ ಪರಿಹಾರೋಪಾಯವನ್ನು ಕಂಡುಕೊಳ್ಳಬೇಕೇ ಹೊರತು ಆತ್ಮಹತ್ಯೆ ಪರಿಹಾರವಲ್ಲ.
ನಿನ್ನೆ ದಿನ ಪುಣೆಯ ಹೋಟೆಲ್ ಉದ್ಯಮಿ ಪ್ರೇಮನಾಥ್ ಶೆಟ್ಟಿಯವರು ಆತ್ಮಹತ್ಯೆ ಶರಣಾದರು. ಪುಣೆ ಅಲ್ಲದೆ ಮುಂಬಯಿ ಹೋಟೆಲ್ ಮತ್ತು ಇತರ ಉದ್ಯಮಿಗಳೂ ಸಹ ಈ ಸುದ್ದಿಯಿಂದ ಗರಬಡಿದಂತಾದರು.
ಕೆಲವರಿಗೆ ಇದು ಕೇವಲ ಸುದ್ದಿ ಮಾತ್ರವಾದರೆ,ಹಲವರು ಆದ ಸಾವಿಗೊಂದು ಅನುಕಂಪ ಸಲ್ಲಿಸಿದರು. ಮತ್ತೆ ಕೆಲವರಿಗೆ ಈ ಆತ್ಮಹತ್ಯೆ ನಾಳಿನ ಬದುಕಿನ ಕುರಿತು ಗಾಢವಾಗಿ ಆಲೋಚಿಸುವಂತೆ ಮಾಡಿತು.
ಶೆಟ್ಟಿಯವರ ಆತ್ಮಹತ್ಯೆ ಎಲ್ಲ ಸಾವಿನಂತಲ್ಲ. ಅದೊಂದು ಎಚ್ಚರಿಕೆಯ ಗಂಟೆ
ಸಾಮಾಜಿಕ ಸಂಘಟನೆಗಳು, ಸಂಘ ಸಂಸ್ಥೆಗಳು ಈ ಸಾವಿನ ನಂತರ ಎಚ್ಚೆತ್ತುಕೊಳ್ಳದಿದ್ದರೆ ಮುಂದಾಗುವ ಎಷ್ಟೋ ಆತ್ಮಹತ್ಯೆಗಳಿಗೆ ವಿಷಾದ ಸಲ್ಲಿಸಬೇಕಾದ ದಿನಗಳು ದೂರವಿಲ್ಲ. ಜನರಿಗೆ ನಾಳಿನ ಭರವಸೆಯ ದಿನಗಳ ಕುರಿತು ಭರವಸೆಯ ನುಡಿಗಳನ್ನು ಹೇಳುವ ಅವಶ್ಯಕತೆಯಿದೆ. ಈ ಸಂದರ್ಭದಲ್ಲಿ ಸ್ವಾರ್ಥ ಬಿಟ್ಟು ಜನರ ಕಷ್ಟಗಳಿಗೆ ಇನ್ನಷ್ಟು ಸ್ಪಂದಿಸಬೇಕಾಗಿದೆ
ಇಲ್ಲವಾದಲ್ಲಿ ಲಾಕ್ ಡೌನ್ ಮುಗಿದ ಮೇಲೆ, ಬದುಕು ಕಟ್ಟಿಕೊಳ್ಳಲಾಗದೆ ಸಾವಿನ ಅರಮನೆಯ ಬಾಗಿಲು ಬಡಿಯುವ ಜೀವಗಳು ಸಾವಿರಾರು ಆಗಲೂಬಹುದು.
ಮುಂದಿನ ದಿನಗಳಲ್ಲಿ ಕೊರೊನಾ ದೂರ ಆದರೆ ಆಗಬಹುದು ಯಾ ಅದನ್ನು ಎದುರಿಸಿ, ಅದರೊಂದಿಗೆ ಭಯದಿಂದಲೇ ಬದುಕು ಕಟ್ಟಿಕೊಳ್ಳುವ ಪರಿಸ್ಥಿತಿ ಬಂದರೂ ಬರಬಹುದು. ಎಲ್ಲಾ ಸರಿಯಾದರೂ ದೇಶ ಮತ್ತು ಜಗತ್ತಿನ ಆರ್ಥಿಕತೆ ವ್ಯವಸ್ಥಿತವಾಗಿ ಸುಧಾರಿಸಲು, ನಾವು ಮೊದಲಿನಂತಾಗಲು ಕೆಲವು ವರ್ಷಗಳು ಬೇಕಾಗಬಹುದು. ಮುಂಬರುವ ದಿನಗಳಲ್ಲಿ ಔದ್ಯೋಗಿಕ ಸಂಸ್ಥೆಗಳು ಪ್ರಾರಂಭವಾಗುತ್ತವೆ. ಆದರೆ ಈ ಹಿಂದಿನ ದಿನಗಳಂತೆ ಕಾರ್ಯನಿರ್ವಹಿಸಲಾಗದ ಕಾರಣ ತನ್ನ ಉದ್ಯೋಗಿಗಳನ್ನು ನಾಳೆಯಿಂದ ಕೆಲಸಕ್ಕೆ ಬರಬೇಡಿ ಎಂದು ಯಾವುದೇ ಮುಲಾಜಿಲ್ಲದೆ ಹೇಳಿಬಿಡುತ್ತೆ. ಆಗ ಆತನ ಕಂಗಾಲಾಗುತ್ತಾನೆ. ಅದು ಸಹಜ. ಆತನೆದುರು ಬೆಟ್ಟದಷ್ಟು ತೊಂದರೆಗಳು, ಕಷ್ಟ ಕಾರ್ಪಣ್ಯಗಳು ಕೇಕೆ ಹಾಕಿ ನಲಿಯುತ್ತವೆ. ಆಗ ಆತ ಮಾತ್ರ ಅಸಹಾಯಕನಾಗುತ್ತಾನೆ
ಮನೆ ಬಾಡಿಗೆ,ಮಕ್ಕಳ ಶಾಲಾ ಕಾಲೇಜು ಖರ್ಚು, ಕುಟುಂಬ ನಿರ್ವಹಣೆಯ ಇತರೆ ಖರ್ಚುವೆಚ್ಚಗಳನ್ನು ಬರಿಸಲಾಗದೆ ಆತ ಕಂಗಾಲಾಗುತ್ತಾನೆ
ಮುಂದಿನ ಆತನ ನಿರ್ಧಾರ ಏನಾಗಬಹುದು ಆತ ಎತ್ತ ಮುಖ ಮಾಡುತ್ತಾನೆ ಅದು ಊಹಿಸಲು ಅಸಾಧ್ಯ.
ಇಂತಹ ಸಂದರ್ಭದಲ್ಲಿ ಆತನಿಗೆ ಯೋಗ್ಯ ರೀತಿಯಿಂದ ಬದುಕಿನ ಮಾರ್ಗದರ್ಶನ ಮಾಡುವ ಕೆಲಸ ಆಗಬೇಕು.
ಹಾಗೆಯೇ ಇಲ್ಲಿನ ಹೋಟೆಲ್ ಹಾಗು ಇತರ ಉದ್ಯಮಗಳನ್ನು ಪುನರಪಿ ಪ್ರಾರಂಭಿಸಲು ಮುಂದಾದರೆ, ನಾಲ್ಕು ತಿಂಗಳ ಬಾಕಿ ಕೊಟ್ಟರೆ ಮಾತ್ರ ಮಾಡಬಹುದು ಅಂತ ಜಾಗದ ಮಾಲಿಕ ಹಟಕ್ಕೆ ಬೀಳುತ್ತಾನೆ. ಅಲ್ಲಿ ಸ್ವಲ್ಪ ಹೊಕೈ ಆಗುತ್ತೆ. ಈಗಾಗಲೆ ಆಗಿಯೂ ಇದೆ.ಇಂತಹ ಪರಿಸ್ಥಿತಿಯಲ್ಲಿ ಮಧ್ಯಮ ವರ್ಗದವನ ಬದುಕು ಚಿಂದಿ ಚೂರಾಗುತ್ತೆ. ಆತನ ಕುಟುಂಬ ಬದುಕಿಗಾಗಿ ಅಂಗಾಲಾಚುವ ಪರಿಸ್ಥಿತಿ ಬರುತ್ತೆ. ಕೊನೆಗೆ ಬದುಕು ಅಸಾಧ್ಯ ಅಂತಾದಾಗ ಆತ ಒಂದು ನಿರ್ಧಾರಕ್ಕೆ ಬರುತ್ತಾನೆ. ಅದು ಪ್ರೇಮನಾಥ್ ಶೆಟ್ಟಿಯವರ ನಿರ್ಧಾರವಾಗುತ್ತೆ.
ಇಂತಹ ಸಾವುಗಳನ್ನು ತಪ್ಪಿಸಲು ಸಾಧ್ಯವಿಲ್ಲವಾ?
ಖಂಡಿತವಾಗಿಯೂ ತಪ್ಪಿಸಬಹುದು.
ಅದು ಹೇಗೆ??
ಜಾಗತೀಕರಣದ ಪ್ರವಾಹದ ನಂತರ ಸಂಬಂಧಗಳು ಕೇವಲ ಸಾಮಾಜಿಕ ಜಾಲತಾಣಕ್ಕೆ ಮಾತ್ರ ಸೀಮಿತವಾಗಿವೆ. ಈ ಸತ್ಯ ನಮಗೆಲ್ಲರಿಗೂ ಗೊತ್ತೆ ಇದೆ.
ಪ್ರಸ್ತುತ ವಿಧ್ಯಾಮಾನದಲ್ಲಿ ಪ್ರತಿಯೊಬ್ಬರೂ ಒಂದಲ್ಲ ಒಂದು ರೀತಿಯಿಂದ ಸಮಸ್ಯೆಗಳ ಕೈಗೊಂಬೆಗಳಾಗಿ ನಾಳಿನ ಚಿಂತೆಗಳಲ್ಲಿ ಮುಳುಗಿರುವವರು.
ಇಂತಹ ಸಂಧಿಗ್ಧ ಪರಿಸ್ಥಿತಿಯಲ್ಲಿ ನಾವು ನಮ್ಮ ಆತ್ಮೀಯ ಬಳಗದವರನ್ನು ಜಾಗ್ರತಗೊಳಿಸುವ ಕಾರ್ಯದಲ್ಲಿ ಕ್ರಿಯಾಶೀಲ ರಾಗಬೇಕು.ಇವತ್ತಿನ ದಿನಗಳಲ್ಲಿ ನಮ್ಮಲ್ಲಿ ಒಂದು ಸಾಮಾಜಿಕ ಕಳಕಳಿ ಇದೆ ಎನ್ನುವುದನ್ನು ನಾವು ಮರೆಯಬಾರದು.
ನಮ್ಮ ಆತ್ಮೀಯರೆಸಿಕೊಂಡವರಿಗೆ, ದಿನಕ್ಕೆ ಒಬ್ಬರಿಗೆ ಒಂದು ಕರೆ ಮಾಡಿ ಅವರ ಯೋಗ ಕ್ಷೇಮವನ್ನು ವಿಚಾರಿಸುವ.
ಸಾಧ್ಯವಾದರೆ ಅವರ ಸಮಸ್ಯೆಗಳಿಗೆ ಪರಿಹಾರ ಹುಡುಕಿ ಅವರ ಜೀವನೋತ್ಸಾಹ ಹೆಚ್ಚಿಸುವ.
ಇದು ಕೇವಲ ನಮಗೆ ಬಂದ ಸಂಕಟವಲ್ಲ. ಜಗತ್ತಿನ ಪ್ರತಿಯೊಬ್ಬರಿಗೂ ಬಂದಂತಹ ಕಷ್ಟ ಅನ್ನುವುದನ್ನು ಅವರಿಗೆ ಮನದಟ್ಟು ಮಾಡಿ ನಮಗಿಂತಲೂ ಕಷ್ಟದ ಜನರಿದ್ದಾರೆ ಭಯಪಡುವ ಅಗತ್ಯ ಇಲ್ಲ ಅಂತ ಅವರಿಗೆ ಸಮಾಜದ ಇತರ ಬಡವರ ಬದುಕನ್ನು ತೋರಿಸುವ. ನಾವು ನಮ್ಮ ಶ್ರೀಮಂತಿಕೆ,ಆಡಂಬರದ ಜೀವನಕ್ಕೆ ಕಡಿವಾಣ ಹಾಕುವ ಅನಿವಾರ್ಯತೆಯನ್ನು ಮನೆಮಂದಿಗೆಲ್ಲ ಮನದಟ್ಟು ಮಾಡುವ ಕೆಲಸವಾಗಬೇಕು.
ಮುಂದಿನ ದಿನಗಳು ಖಂಡಿತವಾಗಿಯೂ ಮೊದಲಿನಂತಾಗುತ್ತದೆ ಎಂಬ ಧೈರ್ಯದ ನುಡಿಯನ್ನು ನುಡಿಯಬೇಕಾಗಿದೆ. ಅವರಿಗೆ ಸ್ವಲ್ಪ ಕಷ್ಟವಾದರೂ ನಾವು ಮೊದಲಿನಂತೆ ಬದುಕಬಲ್ಲೆವು ಎಂಬ ನಂಬಿಕೆಯನ್ನು ಮೂಡಿಸಬೇಕಾಗಿದೆ.
ಮಧ್ಯಮ ವರ್ಗದ ಜನ ಮತ್ತೆ ಬದುಕನ್ನು ಹೇಗೆ ಕಟ್ಟಿಕೊಳ್ಳಬೇಕು?
ಬುದ್ದಿಯನ್ನು ಚಿಂತನೆಗರ್ಪಿಸುವ.
ನಮ್ಮ ಕುಟುಂಬದ ಬದುಕಿನ ಬಂಡಿ ಒಡಿಸುವಾಗ ನಿಯತ್ತಾಗಿ ಮಾಡುವ ಕೆಲಸಗಳು ಚಿಕ್ಕದಾದರೂ ಅಂಜಬಾರದು.
ಲಕ್ಷ ದುಡಿಯುತ್ತಿದ್ದ ನಾನು ಸಾವಿರಕ್ಕೆ ದುಡಿಯಲಾರೆ ಅಂದರೆ ಬದುಕು ಮಕಾಡೆ ಮಲಗುತ್ತೆ.
ನನ್ನ ಮನೆತನಕ್ಕೂ ನಾನು ಇವತ್ತು ಮಾಡುವ ಕೆಲಸಕ್ಕೂ ಸಾಮ್ಯತೆ ಇಲ್ಲ. ಸಣ್ಣ ಪುಟ್ಟ ವ್ಯಾಪಾರ ವಹಿವಾಟು ಮಾಡಿದರೆ ಅವಮಾನಕ್ಕೆ ಒಳಗಾಗಬಹುದು ಎನ್ನುವ ಮನೋಧರ್ಮದವರಿಗೆ ತಿಳಿಹೇಳುವ ಅವಶ್ಯಕತೆ ಇದೆ
ಬದಲಾವಣೆ ಅಗತ್ಯ ಇದೆ ಇಲ್ಲವಾದಲ್ಲಿ ಬದುಕು ಚರಂಡಿ ಹಿಡಿಯುತ್ತೆ.
ವ್ಯಾಪಾರದಲ್ಲಿ ಇಷ್ಟೇ ಲಾಭ ಬೇಕು ಎಂಬ ಧೋರಣೆಯನ್ನು ಬಿಟ್ಟು ಪಾಲಿಗೆ ಬಂದದ್ದೆ ಪಂಚಾಮ್ರತ ಅಂದರೆ ಜೀವನ ಸುಗಮ.
ಸದ್ಯದ ಪರಿಸ್ಥಿತಿಯಲ್ಲಿ ಬಾಡಿಗೆ ಪಡೆಯುವ ಮಾಲಿಕರು ಹೃದಯ ವೈಶಾಲ್ಯತೆಯನ್ನು ತೋರಿಸಬೇಕಾಗಿದೆ. ಈ ಹೊತ್ತಲ್ಲಿ ಅದೊಂದು ತರದ ದೇವತಾ ಕಾರ್ಯ ಮತ್ತು ದೇಶ ಸೇವೆಗಿಂತ ಕಡಿಮೆ ಅಲ್ಲ.
ಆಸೆಗಳು ಸೀಮಿತವಾಗಿದ್ದಲ್ಲಿ ಮಾತ್ರ ಬದುಕು ಜಿಂಗಲಾಲ.
ಎಂಟು ಹತ್ತು ಗಂಟೆ ಗಡದ್ದಾದ ನಿದ್ರೆಯನ್ನು ಹೆಚ್ಚೆಂದರೆ ಏಳಕ್ಕಿಳಿಸಿ ಎರಡು ಗಂಟೆ ಆರೋಗ್ಯಕ್ಕೆ ಕೊಟ್ಟರೆ ಬರುವ ಕಷ್ಟದ ದಿನಗಳನ್ನು ಆತ್ಮಬಲದಿಂದ ಎದುರಿಸಬಹುದು.
ಸಿಕ್ಕ ಸಮಯವನ್ನು ಚಿಂತೆಯಲ್ಲಿ ಕಳೆಯುವುದಕ್ಕಿಂತ ಚಿಂತನಾತ್ಮಕ ಕಾರ್ಯಗಳಿಗೆ ಅರ್ಪಿಸುವ.
ಯೋಚನೆ ಮತ್ತು ಯೋಜನೆ ಒಂದಕ್ಕೊಂದು ಸಾಮೀಪ್ಯವಾಗಿರಲಿ
ಎಷ್ಟೋ ಲಕ್ಷ ಜೀವ ಜಂತುಗಳಾಗಿ ಹುಟ್ಟಿ ಬಂದ ನಂತರ ಮನುಷ್ಯ ಜನ್ಮ ಸಿಗುತ್ತದೆ ಎಂದು ಸನಾತನ ಧರ್ಮ ಹೇಳುತ್ತೆ ಇಂತಹ ಪವಿತ್ರವಾದ ಮನುಷ್ಯ ಜನ್ಮವನ್ನು ಆತ್ಮಹತ್ಯೆ ಎಂಬ ಕಾಲನ ಕೈಗರ್ಪಿಸುವಷ್ಟು ನಾವು ಹೇಡಿಗಳಾಗುವುದು ಬೇಡ.
ಇಂದಿಗಿಂತ ನಾಳೆಯ ಜೀವನ ಸುಂದರಾವಾಗಿರುತ್ತೆ ಎಂಬ ಆಶಾಭಾವನೆಯೊಂದಿಗೆ ಬದುಕು ಮತ್ತೆ ಕಟ್ಟಿಕೊಳ್ಳುವ..
🌹🌹🌹🌹🌹🙏