LLC 2022 : ಮತ್ತೆ ಬ್ಯಾಟ್ ಹಿಡಿಯಲಿದ್ದಾರೆ ಗೌತಮ್
ಟೀಂ ಇಂಡಿಯಾ ಮಾಜಿ ಆಟಗಾರ ಗೌತಮ್ ಗಂಭೀರ್ ಲೆಜೆಂಡ್ಸ್ ಲೀಗ್ ಕ್ರಿಕೆಟ್ ಎರಡನೇ ಸೀಸನ್ ನ ಭಾಗವಾಗಲಿದ್ದಾರೆ. ಈ ವಿಷಯವನ್ನು ಸ್ವತಃ ಗಂಭೀರ್ ಅವರೇ ದೃಢೀಕರಿಸಿದ್ದಾರೆ.
ಈ ಹಿನ್ನಲೆಯಲ್ಲಿ ಗೌತಿ ಮಾತನಾಡುತ್ತಾ, ಮತ್ತೆ ಮೈದಾನಕ್ಕೆ ಇಳಿಯಲು ಕಾತರನಾಗಿದ್ದೇನೆ.
ಲೆಜೆಂಡ್ಸ್ ಲೀಗ್ ಕ್ರಿಕೆಟ್ ನಲ್ಲಿ ದಿಗ್ಗಜ ಆಟಗಾರರೊಂದಿಗೆ ಆಡುವ ಅವಕಾಶ ಬಂದಿರುವುದು ನನಗೆ ತುಂಬಾ ಸಂತೋಷವನ್ನುಂಟು ಮಾಡುತ್ತಿದೆ ಎಂದು ಹೇಳಿದ್ದಾರೆ.
ಲೆಜೆಂಡ್ಸ್ ಲೀಗ್ ಕ್ರಿಕೆಟ್ 2022 ಸೆಪ್ಟೆಂಬರ್ 17 ರಿಂದ ಆರಂಭವಾಗಲಿದೆ.
ಈ ಟೂರ್ನಿಯಲ್ಲಿ ಆರು ತಂಡಗಳು ಭಾಗವಹಿಸಲಿವೆ. ಅಂದಹಾಗೆ ಈ ಟೂರ್ನಿ ಒಂದು ಪ್ರತ್ಯೇಕವಾದ ಪಂದ್ಯದೊಂದಿಗೆ ಆರಂಭವಾಗಲಿದೆ.
ಆಜಾದಿ ಕಾ ಅಮೃತ್ ಮಹೋತ್ಸವ ಭಾಗವಾಗಿ ಇಂಡಿಯಾ ಮಹಾರಾಜಸ್ , ವಲ್ರ್ಡ್ ಜೈಂಟ್ಸ್ ನಡುವೆ ಸೆಪ್ಟಂಬರ್ 16 ರಂದು ಈಡನ್ ಗಾರ್ಡನ್ ವೇದಿಕೆಯಾಗಿ ಒಂದು ಪಂದ್ಯ ನಡೆಯಲಿದೆ.
ಇಂಡಿಯಾ ಮಹಾರಾಜಸ್ ಗೆ ಸೌರವ್ ಗಂಗೂಲಿ ನಾಯಕತ್ವವಹಿಸಲಿದ್ದಾರೆ. ವಲ್ರ್ಡ್ ಜೈಂಟ್ಸ್ ತಂಡಕ್ಕೆ ಇಂಗ್ಲೆಂಡ್ ನ ಮಾಜಿ ನಾಯಕ ಇಯಾನ್ ಮಾರ್ಗನ್ ನೇತೃತ್ವ ವಹಿಸಲಿದ್ದಾರೆ.
ಗಂಭೀರ್ 2018 ರಲ್ಲಿ ಎಲ್ಲಾ ರೀತಿಯ ಕ್ರಿಕೆಟ್ ಗೆ ವಿದಾಯ ಘೋಷಣೆ ಮಾಡಿದರು. 2007 ಟಿ 20 ವಿಶ್ವಕಪ್, 2011ರ ಏಕದಿನ ವಿಶ್ವಕಪ್ ತಂಡದಲ್ಲಿ ಗೌತಿ ಸ್ಥಾನ ಪಡೆದಿದ್ದರು.
ಈ ಎರಡು ವಿಶ್ವಕಪ್ ಗೆಲ್ಲುವಲ್ಲಿ ಗೌತಮ್ ಪ್ರಮುಖ ಪಾತ್ರವಹಿಸಿದ್ದರು.
ಟೀಂ ಇಂಡಿಯಾ ಪರ ಗೌತಮ್ 58 ಟೆಸ್ಟ್ ಪಂದ್ಯ, 147 ಏಕದಿನ ಪಂದ್ಯ, 37 ಟಿ20 ಪಂದ್ಯಗಳನ್ನಾಡಿದ್ದಾರೆ.
ಮೂರು ಮಾದರಿಯ ಕ್ರಿಕೆಟ್ ಸೇರಿ ಗೌತಿ 10 ಸಾವಿರಕ್ಕೂ ಹೆಚ್ಚು ರನ್ ಗಳಿಸಿದ್ದಾರೆ.