Bengaluru : ಬೆಂಗಳೂರಿನಲ್ಲಿ ಚೀನಾ ಲೋನ್ ಆ್ಯಪ್ ಗಳ ಮೇಲೆ ಕ್ರಮಕ್ಕೆ ತಯಾರಿ
ಕೇಂದ್ರ ಸರ್ಕಾರ ಸಿಲಿಕಾನ್ ಸಿಟಿಯಲ್ಲಿ ಚೀನಾ ಆ್ಯಪ್ ಗಳಿಗೆ ಬ್ರೇಕ್ ಹಾಕಲು ಮುಂದಾಗಿದೆ. ನಕಲಿ ನಿರ್ದೇಶಕರನ್ನ ನೇಮಿಸಿಕೊಂಡು ಸಾರ್ವಜನಿಕರಿಗೆ ತೊಂದರೆ ಕೊಡುತ್ತಿರುವ ಲೋನ್ ಆ್ಯಪ್ ಗಳ ಮೇಲೆ ಕ್ರಮಕ್ಕೆ ಮುಂದಾಗಿದ್ದು , ಇಂತಹ ಚೀನಾ ಆ್ಯಪ್ ಗಳ ಮೇಲೆ ತನಿಖೆಗೆ ಸೂಚನೆ ನೀಡಲಾಗಿದೆ.
ಕೇಂದ್ರ ಸರ್ಕಾರದ ಮಿನಿಸ್ಟರಿ ಆಫ್ ಕಾರ್ಪೊರೇಟ್ ಅಫೇರ್ಸ್ ನಿಂದ ಸೂಚನೆ ಹೊರಡಿಸಲಾಗಿದೆ. ನಗರ ಪೊಲೀಸ್ ಆಯುಕ್ತರಿಗೆ ಪತ್ರ ಬರೆದು ತನಿಖೆಗೆ ಆದೇಶ ನೀಡಲಾಗಿದೆ.
ನಗರದಲ್ಲಿ ಚೀನಾ ಲೋನ್ ಆ್ಯಪ್ ಗಳು ನಕಲಿ ನಿರ್ದೇಶಕರು, ಚಂದಾದಾರರನ್ನ ನೇಮಿಸಿಕೊಂಡು ವ್ಯವಹಾರ ನಡೆಸುತ್ತಿವೆ, ಚೈನೀಸ್ ವ್ಯಕ್ತಿಗಳು ಮತ್ತು ಕಂಪನಿಗಳ ಪರವಾಗಿ ವ್ಯವಹಾರ ಮಾಡುತ್ತಿರೋ ಆರೋಪ ಕೇಳಿಬಂದಿದೆ.
ಭಾರತದಲ್ಲಿ ಅಪರಾಧಿಕ ವ್ಯವಹಾರ ನಡೆಸುವ ಸಲುವಾಗಿ ಕಂಪನಿ ನೋಂದಣಿ ಮಾಡಿಕೊಂಡಿದ್ದು , ಅಭದ್ರತೆಯ ಅಲ್ಪಾವಧಿ ಸಾಲ ನೀಡುತ್ತಿವೆ ಎನ್ನಲಾಗಿದೆ. ಹಣದ ಅವಶ್ಯಕತೆ ಇರುವವರಿಂದ ಹೆಚ್ಚಿನ ಪ್ರೊಸೆಸಿಂಗ್ ಶುಲ್ಕ ಹಾಗೂ ಬಡ್ಡಿ ವಸೂಲಿ ಮಾಡುತ್ತಾ , ಅನೈತಿಕ ರೀತಿಯಲ್ಲಿ ಸಾಲ ವಸೂಲಿ ಹಾಗೂ ಕಿರುಕುಳ ನೀಡುತ್ತಿದ್ದಾರೆ ಎನ್ನಲಾಗ್ತಿದೆ..
ಕಂಪನಿ ಸಿಬ್ಬಂದಿಯ ಕೆವೈಸಿ ದಾಖಲೆಗಳನ್ನ ಪಡೆದುಕೊಂಡು ಅವರನ್ನೇ ನಿರ್ದೇಶಕರಾಗಿ ಮಾಡುತ್ತಿರೋದಾಗಿ ತಿಳಿದುಬಂದಿದೆ. ಇದರ ಪ್ರಮುಖ ಆರೋಪಿಗಳು ವಿದೇಶಿ ಪ್ರಜೆಗಳಾಗಿದ್ದು ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ದೂರು ನೀಡಲಾಗಿದೆ.
ಮಿನಿಸ್ಟರಿ ಆಫ್ ಕಾರ್ಪೊರೇಟ್ ಅಫೇರ್ಸ್ ನಗರ ಪೊಲೀಸ್ ಆಯುಕ್ತರಿಗೆ ದೂರು ನೀಡಿದೆ. ನಗರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸುಮಾರು 35 ಆ್ಯಪ್ ಗಳ ವಿರುದ್ಧ ದೂರು ನೀಡಲಾಗಿದೆ. ಮಿನಿಸ್ಟರಿ ಆಫ್ ಕಾರ್ಪೊರೇಟ್ ಅಫೇರ್ಸ್, ರಿಜಿಸ್ಟರ್ ಆಫ್ ಕಂಪನೀಸ್ ಅಧಿಕಾರಿಗಳಿಂದ ಸೈಬರ್ ಕ್ರೈಮ್ ಠಾಣೆಗೆ ದೂರು ಸಲ್ಲಿಸಲಾಗಿದೆ..
ಅಧಿಕಾರಿಗಳ ದೂರಿನ ಮೇರೆಗೆ 35 ಆ್ಯಪ್ ಗಳ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. ಸಿಸಿಬಿ ಸೈಬರ್ ಕ್ರೈಮ್ ಠಾಣೆಯಲ್ಲಿ ಪ್ರತ್ಯೇಕ ಏಳು ಎಫ್ಐಆರ್ ದಾಖಲಾಗಿದೆ. ಚೀನಾ ಆ್ಯಪ್ ಗಳ ಬಗ್ಗೆ ತನಿಖೆ ಕೈಗೊಳ್ಳಲಾಗಿದೆ.
ಬೆಂಗಳೂರು ಸೇರಿ ದೇಶಾದ್ಯಂತ ಲೋನ್ ಹೆಸರಲ್ಲಿ ಕಿರುಕುಳ ನೀಡಲಾಗ್ತಿದೆ. ಬಡ್ಡಿ, ಪ್ರೊಸೆಸಿಂಗ್ ಚಾರ್ಜ್ ಹೆಸರಲ್ಲಿ ಅಧಿಕ ಹಣ ವಸೂಲಿ ಮಾಡಲಾಗ್ತಿದ್ದು , ವೈಯಕ್ತಿಕವಾಗಿ ಸಾರ್ವಜನಿಕರಿಗೆ ಕಿರುಕುಳ ನೀಡಿ ಹಣ ವಸೂಲಿ ಆರೋಪವಿದೆ.








