ಸದ್ದಿಲ್ಲದೆ ನಡೆಯುತ್ತಿದೆ ಐಪಿಎಲ್.. ಗದ್ದಲದ ನಡುವೆಯೇ ನಡೆಯುತ್ತಿದೆ ಲೋಕಲ್ ಕ್ರಿಕೆಟ್ ಟೂರ್ನಿ
13ನೇ ಆವೃತ್ತಿಯ ಐಪಿಎಲ್ ಟೂರ್ನಿ. ಜೈವಿಕ ಸುರಕ್ಷತೆಯಡಿಯಲ್ಲಿ ನಡೆಯುತ್ತಿರುವ ದೇಸಿ ಹೈ ಫೈ ಟಿ-ಟ್ವೆಂಟಿ ಟೂರ್ನಿ.
ಆಟಗಾರರು ಚೆಂಡು ಮತ್ತು ಬ್ಯಾಟಿನಿಂದ ಸದ್ದು ಮಾಡುತ್ತಿದ್ದರೂ ಪ್ರೇಕ್ಷಕರ ಗದ್ದಲವಿಲ್ಲ. ಇದನ್ನು ಹೊರತುಪಡಿಸಿ ಐಪಿಎಲ್ ಟೂರ್ನಿ ಯಾವುದೇ ರೀತಿಯಲ್ಲೂ ಕಳೆಗುಂದಿಲ್ಲ.
ಪಂದ್ಯವನ್ನು ಮೈದಾನದಲ್ಲಿ ಕಣ್ತುಂಬಿಕೊಳ್ಳಲು ಆಗುತ್ತಿಲ್ಲ ಅನ್ನೋ ಬೇಸರವಂತೂ ಅಭಿಮಾನಿಗಳಲ್ಲಿ ಇದೆ.
ಆದ್ರೂ ಟಿವಿ ಪರದೆಯಲ್ಲಿ ಪಂದ್ಯವನ್ನು ನೋಡಿಕೊಂಡು ಎಂಜಾಯ್ ಮಾಡುತ್ತಿದ್ದಾರೆ.
ಭಾರತದಲ್ಲಿ ಕೋವಿಡ್-19 ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಈ ಬಾರಿಯ ಐಪಿಎಲ್ ಟೂರ್ನಿಯನ್ನು ದುಬೈಗೆ ಶಿಫ್ಟ್ ಮಾಡಿತ್ತು.
ಆಟಗಾರರ ಸುರಕ್ಷತೆಗಾಗಿಯೇ ಕೋಟಿ ಕೋಟಿ ರೂಪಾಯಿ ವೆಚ್ಚ ಮಾಡುತ್ತಿದೆ ಶ್ರೀಮಂತ ಕ್ರಿಕೆಟ್ ಸಂಸ್ಥೆ ಬಿಸಿಸಿಐ.
ಅತ್ತ ದುಬೈ ನಲ್ಲಿ ಐಪಿಎಲ್ ದಿನದಿಂದ ದಿನಕ್ಕೆ ರಂಗುಪಡೆಯುತ್ತಿದ್ರೆ ಇತ್ತ ಭಾರತದಲ್ಲಿ ಲೋಕಲ್ ಕ್ರಿಕೆಟ್ ಟೂರ್ನಿಗಳು ಶುರುವಾಗುತ್ತಿವೆ.
ಇದಕ್ಕೆ ಪೂರಕವಾಗಿ ನಮ್ಮ ಕರ್ನಾಟಕದ ಚಾಮರಾಜನಗರ ಜಿಲ್ಲೆಯ ಚಂದಕವಾಡಿಯ ಚರ್ಚ್ ಬಳಿಯ ಮೈದಾನದಲ್ಲಿ ಕ್ರಿಕೆಟ್ ಟೂರ್ನಿಯೊಂದು ನಡೆಯುತ್ತಿದೆ.
ಈ ಟೂರ್ನಿಯಲ್ಲಿ ಸುಮಾರು 50 ತಂಡಗಳು ಭಾಗವಹಿಸುತ್ತಿವೆ. ಪ್ರತಿ ದಿನ 4ರಿಂದ ಐದು ಪಂದ್ಯಗಳು ನಡೆಯುತ್ತಿವೆ.
ಒಟ್ಟು ಹತ್ತು ದಿನಗಳ ಕಾಲ ಈ ಟೂರ್ನಿ ನಡೆಯಲಿದೆ. ಈ ಪಂದ್ಯಗಳನ್ನು ಸಾಕಷ್ಟು ಕ್ರಿಕೆಟ್ ಪ್ರೇಮಿಗಳು ಕೂಡ ಕುತೂಹಲದಿಂದ ನೋಡುತ್ತಿದ್ದಾರೆ.
ಅಂದ ಹಾಗೇ ಈ ಟೆನ್ನಿಸ್ ಬಾಲ್ ಟೂರ್ನಿಯ ಹೆಸರು ಮಹಾ ನಾಯಕ ಕಪ್ 2020.
ಅಕ್ಟೋಬರ್ 14ರಂದು ಮಹಾ ಬೋಧಿಸತ್ವ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಬೌದ್ಧ ಧರ್ಮ ಸ್ವೀಕರಿಸಿದ್ದ ಸವಿ ನೆನಪಿಗಾಗಿ ಈ ಟೂರ್ನಿಯನ್ನು ಆಯೋಜನೆ ಮಾಡಲಾಗಿದೆ.
ಚಾಮರಾಜನಗರ ತಾಲೂಕಿನ ಅಂಬೇಡ್ಕರ್ ಸೇನೆಯ ಅಧ್ಯಕ್ಷರಾದ ನಲ್ಲೂರು ಮಹದೇವಸ್ವಾಮಿ ನೇತೃತ್ವದಲ್ಲಿ ಈ ಟೂರ್ನಿಯನ್ನು ಆಯೋಜನೆ ಮಾಡಲಾಗಿದೆ.
ಇನ್ನು ಈ ಟೂರ್ನಿಗೆ ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸಿಕೊಂಡು ನಡೆಸಲಾಗುತ್ತಿದೆ. ಪಂದ್ಯ ವೀಕ್ಷಣೆ ಮಾಡುವ ಪ್ರತಿಯೊಬ್ಬರು ಮಾಸ್ಕ್ ಧರಿಸಬೇಕು.
ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು. ಹಾಗೇ ಜನರಲ್ಲಿ ಕೊರೋನಾ ಬಗ್ಗೆ ಜಾಗೃತಿಯನ್ನು ಕೂಡ ಮೂಡಿಸಲಾಗುತ್ತಿದೆ ಎಂಬುದು ಆಯೋಜಕರಾದ ನಲ್ಲೂರು ಮಹದೇವಸ್ವಾಮಿ ಅವರ ಅಭಿಮತ.
ಒಟ್ಟಿನಲ್ಲಿ ಕೊರೋನಾದಿಂದಾಗಿ ಸಾಕಷ್ಟು ಜನ ಕೆಲಸ ಕಳೆದುಕೊಂಡು ಮನೆಯಲ್ಲೇ ಇದ್ದಾರೆ.
ಹೀಗಾಗಿ ಕ್ರಿಕೆಟ್ ಆಡುವ ಮತ್ತು ನೋಡುವ ಮೂಲಕ ಎಂಜಾಯ್ ಮಾಡುತ್ತಿದ್ದಾರೆ.
ಆದ್ರೆ ಒಂದು ನೆನಪಿರಲಿ.. ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲಿದೆ.








