ಗೋವಾದ ದ್ವೀಪದಲ್ಲಿ ರಾಷ್ಟ್ರ ಧ್ವಜಾರೋಹಣಕ್ಕೆ ಸ್ಥಳೀಯರ ವಿರೋಧ – ಕಾರ್ಯಕ್ರಮ ರದ್ದು…!
ಭಾರತದ ನಂದರ್ 1 ಪ್ರವಾಸಿತಾಣವಾಗಿರುವ ಗೋವಾ ರಾಜ್ಯದಲ್ಲಿನ ದ್ವೀಪದಲ್ಲಿ ಆಗಸ್ಟ್ 15ರೊಳಗೆ ರಾಷ್ಟ್ರೀಯ ಧ್ವಜಾರೋಹಣ ನೆರವೇರಿಸುವ ಯೋಜನೆ ಇತ್ತು.. ಅದೇ ರೀತಿ ಧ್ವಜಾರೋಹಣಕ್ಕೆ ಮುಂದಾದಾಗ ಅಲ್ಲಿನ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದು, ಧ್ವಜಾರೋಹಣ ಕಾರ್ಯಕ್ರಮವೇ ರದ್ದಾಗಿದೆ. ಹೌದು ದಕ್ಷಿಣ ಗೋವಾದ ಸಾವೊ ಜಸಿಂಟೊ ದ್ವೀಪದಲ್ಲಿ ಸ್ವಾತಂತ್ರ್ಯ ದಿನದಂದು ನಿಗದಿಪಡಿಸಿದ್ದ ರಾಷ್ಟ್ರ ಧ್ವಜಾರೋಹಣ ಕಾರ್ಯಕ್ರಮವನ್ನು ರದ್ದುಪಡಿಸಿರುವುದಾಗಿ ನೌಕಾಪಡೆ ತಿಳಿಸಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರು , ನಿಗದಿತ ಕಾರ್ಯಕ್ರಮದಂತೆ ತ್ರಿವರ್ಣ ಧ್ವಜಾರೋಹಣ ನೆರವೇರಿಸುವಂತೆ ನೌಕಾಪಡೆ ಅಧಿಕಾರಿಗಳಿಗೆ ಮನವಿ ಮಾಡಲಾಗಿದೆ. ಈ ಕಾರ್ಯಕ್ರಮಕ್ಕೆ ಗೋವಾ ಪೊಲೀಸರು ಸಂಪೂರ್ಣ ಸಹಕಾರ ನೀಡುತ್ತಾರೆ. ಇಂಥಹ ದೇಶ ವಿರೋಧಿ ಚಟುವಟಿಕೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
75ನೇ ಸ್ವಾತಂತ್ರ್ಯೋತ್ಸವದ ನೆನಪಿಗಾಗಿ ನಡೆಸುತ್ತಿರುವ ‘ಆಜಾದಿ ಕಾ ಅಮೃತ್ ಮಹೋತ್ಸವ’ವದ ಭಾಗವಾಗಿ ಆಗಸ್ಟ್ 13 ಮತ್ತು 15ರ ನಡುವೆ ದ್ವೀಪಗಳಲ್ಲಿ ರಾಷ್ಟ್ರಧ್ವಜಾರೋಹಣ ನೆರವೇರಿಸಲು ರಕ್ಷಣಾ ಸಚಿವಾಲಯ ಯೋಜಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇನ್ನೂ ಸಚಿವಾಲಯದ ಸೂಚನೆ ಹಿನ್ನೆಲೆಯಲ್ಲಿ ಗೋವಾ ನೌಕಾಪಡೆಯ ತಂಡವು ಸಾವೊ ಜಸಿಂಟೊ ಸೇರಿದಂತೆ ಗೋವಾ ಸುತ್ತಲಿನ ವಿವಿಧ ದ್ವೀಪಗಳಿಗೆ ಭೇಟಿ ನೀಡಿತ್ತು.
ಈ ವೇಳೆ ಜಸಿಂಟೊ ದ್ವೀಪದ ನಿವಾಸಿಗಳ ವಿರೋಧದ ಹಿನ್ನೆಲೆಯಲ್ಲಿ, ಅಲ್ಲಿ ನಡೆಸಬೇಕಾಗಿದ್ದ ರಾಷ್ಟ್ರ ಧ್ವಜಾರೋಹಣ ಕಾರ್ಯಕ್ರಮವನ್ನು ರದ್ದುಗೊಳಿಸಲಾಯಿತು ಎಂದು ಗೋವಾದ ನೌಕಾಪಡೆಯ ಐಎನ್ಎಸ್ ಹಂಸ ನೆಲೆಯ ವಕ್ತಾರರು ಶುಕ್ರವಾರ ಹೇಳಿದ್ದರು.