ಬೆಂಗಳೂರು : ರಾಜ್ಯದಲ್ಲಿ ಕೊರೊನಾ ವೈರಸ್ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ನಡುವೆಯೇ ರಾಜ್ಯ ಸರ್ಕಾರ ಲಾಕ್ ಡೌನ್ ಸಡಿಲಿಕೆ ಮಾಡಿರುವುದು ದುರಂತಕ್ಕೆ ಆಹ್ವಾನ ನೀಡಿದಂತೆ, ಲಾಕ್ ಡೌನ್ ಸಡಿಲಿಕೆ ತಕ್ಷಣಕ್ಕೆ ಹಿಂಪಡೆಯಿರಿ ಎಂದು ಮಾಜಿ ಸಚಿವ ಹೆಚ್.ಕೆ.ಪಾಟೀಲ್ ಆಗ್ರಹಿಸಿದ್ದಾರೆ.
ಈ ಕುರಿತು ಸಿಎಂ ಬಿ.ಎಸ್. ಯಡಿಯೂರಪ್ಪಗೆ ಪತ್ರ ಬರೆದಿರುವ ಹೆಚ್.ಕೆ.ಪಾಟೀಲ್, ಲಾಕ್ ಡೌನ್ ಸಡಿಲಿಕೆಯಂತಹ ನಿರ್ಣಯ ಶ್ರೀಮಂತ ವರ್ಗದ ಪರವೇ ಹೊರತು ಆರ್ಥಿಕ ದುಸ್ಥಿತಿಯಿಂದ ಬಳಲಿರುವ ಬಡವನ ಪರವಾಗುವುದೇ ಇಲ್ಲ. ಇಂತಹ ನಿರ್ಣಯಗಳಿಂದ ಕರ್ನಾಟಕಕ್ಕೆ ತಾವು ದುರಂತಮಯ ಸನ್ನಿವೇಶ ತಂದೊಡ್ಡಿದ ಅಪಕೀರ್ತಿಗೆ ಪಾತ್ರರಾಗುತ್ತೀರಿ. ತಕ್ಷಣ ಲಾಕ್ ಡೌನ್ ಸಡಿಲಿಕೆಯಂತಹ ದುರಂತವನ್ನು ಆಹ್ವಾನಿಸುವ ನಿರ್ಣಯವನ್ನು ಕೈಬಿಡಬೇಕೆಂದು ಒತ್ತಾಯಿಸಿದ್ದಾರೆ.
ಇಂದು ಹಳಿ ತಪ್ಪಿರುವ ಅರ್ಥ ವ್ಯವಸ್ಥೆಯನ್ನು ಮರಳಿ ಅಭಿವೃದ್ಧಿ ಪಥದತ್ತ ಚಲಿಸುವಂತೆ ಮಾಡಲು ಕೇವಲ ಲಾಕ್ ಡೌನ್ ಸಡಿಲಿಕೆ ಉಪಾಯವಾಗುವುದಿಲ್ಲ. ಅದಕ್ಕೆ ಸಮಗ್ರವಾದ ಆರ್ಥಿಕ ಚೈತನ್ಯ ತುಂಬುವ ಭ್ರಷ್ಟಾಚಾರ ಮುಕ್ತ, ಪ್ರಾಮಾಣಿಕ, ನೈತಿಕ ಮನಸ್ಥಿತಿಯ ಕಾರ್ಯಕ್ರಮಗಳ ಅವಶ್ಯಕತೆ ಇದೆ. ಜನತೆ ತಮ್ಮ ತಮ್ಮ ಉದ್ಯೋಗಗಳಲ್ಲಿ ಮರಳಿ ತೊಡಗಿ, ಎಂದಿನಂತೆ ತಮ್ಮ ಆದಾಯವನ್ನು ಕ್ರೋಢೀಕರಿಸಿಕೊಳ್ಳುವುದು ಕೇವಲ ಈ ಸಡಿಲಿಕೆಯಿಂದ ಸಾಧ್ಯವಾಗುವುದಿಲ್ಲ ಎಂದು ಎಚ್.ಕೆ.ಪಾಟೀಲ್ ತಮ್ಮ ವಿವರವಾದ ಪತ್ರದಲ್ಲಿ ಕಟುವಾದ ಶಬ್ದಗಳಿಂದ ಟೀಕಿಸಿದ್ದಾರೆ.
ಅಲ್ಲದೆ ತಮ್ಮ ಟ್ವೀಟ್ ನಲ್ಲಿ ಲಾಕ್ ಡೌನ್ ಸಡಿಲಿಕೆ ನಿರ್ಣಯ ದುರಂತಕ್ಕೆ ಆಹ್ವಾನಿಸಿದಂತೆ.ಪ್ರಕರಣ ಕಡಿಮೆ ಇದ್ದಾಗ ಲಾಕ್ ಡೌನ್ ,ಹೆಚ್ಚುತ್ತಿರುವಾಗ ಸಡಿಲಿಕೆ ಅದೆಂಥಾ ವಿಚಿತ್ರ. ಸಡಿಲಿಕೆ ಬೇಡ ತಕ್ಷಣ ವಾಪಸ್ ಪಡೆಯಿರಿ ಎಂದು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.








