ಭುವನೇಶ್ವರ: ದೇಶದೆಲ್ಲೆಡೆ ಜಾರಿಗೊಳಿಸಲಾಗಿರುವ ಲಾಕ್ ಡೌನ್ ಅವಧಿ ಏಪ್ರಿಲ್ 14ಕ್ಕೆ ಮುಕ್ತಾಯವಾಗಲಿದ್ದು, ಅದರ ಬಳಿಕವೂ ಲಾಕ್ ಡೌನ್ ವಿಸ್ತರಣೆಯಾಗುವ ಎಲ್ಲ ಸಾಧ್ಯತೆಗಳಿವೆ. ಈ ನಡುವೆ ಒಡಿಶಾ ಸಿಎಂ ನವೀನ್ ಪಟ್ನಾಯಕ್ ರಾಜ್ಯಾದ್ಯಂತ ಲಾಕ್ ಡೌನ್ ಅನ್ನು ಏಪ್ರಿಲ್ 30ರವರೆಗೆ ವಿಸ್ತರಿಸಿ ಆದೇಶ ಹೊರಡಿಸಿದ್ದಾರೆ. ಜತೆಗೆ, ರಾಜ್ಯದ ಶಾಲಾ-ಕಾಲೇಜುಗಳಿಗೆ ಜೂನ್ 17ರವರೆಗೆ ರಜೆ ಘೋಷಣೆ ಮಾಡಿದ್ದಾರೆ.
ರಾಜ್ಯದ ಜನರ ಪ್ರಾಣ ಕಾಪಾಡುವುದು ಅತಿ ಮುಖ್ಯವಾಗಿದೆ. ಹೀಗಾಗಿ ಲಾಕ್ ಡೌನ್ ವಿಸ್ತರಿಸುವುದಾಗಿ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಘೋಷಿಸಿದ್ದಾರೆ. ಜತೆಗೆ, ರಾಜ್ಯದಲ್ಲಿ ವಿಮಾನ ಹಾಗೂ ರೈಲು ಸಂಚಾರವನ್ನು ಆರಂಭಿಸದಂತೆ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. ಒಡಿಶಾದಲ್ಲಿ 15ರಂದು ಮೊದಲ ಕೊರೊನಾ ಪ್ರಕರಣ ಪತ್ತೆಯಾಗಿತ್ತು. ಈಗ ಸೋಂಕಿತರ ಸಂಖ್ಯೆ 42ಕ್ಕೆ ತಲುಪಿದೆ. ಒಬ್ಬರು ಕೋವಿಡ್-19 ನಿಂದಾಗಿ ಮೃತಪಟ್ಟಿದ್ದಾರೆ.








