ಕೊರೋನಾ ವೈರಸ್ ಸೋಂಕಿನ ಕೇಂದ್ರ ಚೀನಾದ ಹುಬೈ ಪ್ರಾಂತ್ಯದಲ್ಲಿ 9 ವಾರಗಳ ಲಾಕ್ ಡೌನ್ ಸಡಿಲಿಸಿದ್ದು, ಇದರ ಪರಿಣಾಮವಾಗಿ ಸಾವಿರಾರು ಮಂದಿ ಹುಬೈ ಪ್ರಾಂತ್ಯದಿಂದ ವಲಸೆ ಹೋಗಲು ಮುಂದಾಗಿದ್ದರು. ಪೊಲೀಸರು ಜನರನ್ನು ತಡೆದ ಪರಿಣಾಮ ಜನರು ಮತ್ತು ಪೊಲೀಸರ ಮಧ್ಯೆ ಹಿಂಸಾಚಾರ ನಡೆದಿದೆ ಎಂದು ವರದಿಗಳು ತಿಳಿಸಿವೆ.
ಹುಬೈ ಪ್ರಾಂತ್ಯ ತೊರೆಯಲು ಜನ ಮುಂದಾಗಿದ್ದ ಕಾರಣ, ಹಿಂಸಾಚಾರ ಉಂಟಾಗಿದ್ದು, ಅಪಾರ ಜನಸಂದಣಿಯಿಂದ ಟ್ರಾಫಿಕ್ ಜಾಮ್ ಮತ್ತು ರೈಲು ಸಂಚಾರದಲ್ಲಿಯೂ ಜನ ತುಂಬಿರುವುದಾಗಿ ವರದಿಗಳು ತಿಳಿಸಿದೆ. ಚೀನಾದ ಸಾಮಾಜಿಕ ಜಾಲತಾಣಗಳಲ್ಲಿ ಹಿಂಸಾಚಾರದ ಹಲವಾರು ವಿಡಿಯೋಗಳನ್ನು ಪೋಸ್ಟ್ ಮಾಡಲಾಗಿದೆ ಅಲ್ಲದೇ ಹುಬೈ ಪ್ರಾಂತ್ಯ ಮತ್ತು ನೆರೆಯ ಜಿಯಾಂಕ್ಸಿ ಪ್ರಾಂತ್ಯವನ್ನು ಸಂಪರ್ಕಿಸುವ ಸೇತುವೆ ಸ್ಥಳದಲ್ಲಿ ಮಾರಾಮಾರಿ ನಡೆದಿದೆ ಎಂದು ಕೆನಡಾ ಮಾಧ್ಯಮಗಳಾದ ದ ಗ್ಲೋಬ್ ಮತ್ತು ಮೇಲ್ ತಿಳಿಸಿದೆ. ಹುಬೈ ಪ್ರಾಂತ್ಯದಿಂದ ಜಿಯಾಂಕ್ಸಿ ಪ್ರಾಂತ್ಯಕ್ಕೆ ತೆರಳದಂತೆ ಜನರನ್ನು ತಡೆದ ಪರಿಣಾಮ ಗಲಭೆ ಉಂಟಾಯಿತು ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಬ್ಯಾರಿಕೇಡ್ ಗಳನ್ನು ತೆರವುಗೊಳಿಸುವಂತೆ ಜನರು ಕೂಗುತ್ತಿದ್ದು, ಅಪಾರ ಪ್ರಮಾಣದಲ್ಲಿ ಸೇರಿರುವ ಜನರು ಮತ್ತು ಪೊಲೀಸರು ಕೈ ಕೈ ಮಿಲಾಯಿಸಿದ್ದು, ವೀಡಿಯೊದಲ್ಲಿ ಸೆರೆಯಾಗಿದೆ ಎಂದು ವರದಿ ವಿವರಿಸಿದೆ.








