ರಾಜ್ಯದಲ್ಲಿ ಸೋಮವಾರದಿಂದ ಲಾಕ್ ಡೌನ್ ಸಡಿಲಿಕೆ : ಸಿಎಂ ಸುಳಿವು
ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಕಂಟ್ರೋಲ್ ಗೆ ಹೇರಲಾಗಿರುವ ಲಾಕ್ ಡೌನ್ ಅನ್ನು ಸಡಿಲಿಕೆ ಮಾಡುವ ಬಗ್ಗೆ ಸಿಎಂ ಬಿ.ಎಸ್.ಯಡಿಯೂರಪ್ಪ ಸುಳಿವು ನೀಡಿದ್ದಾರೆ.
ನಗರದಲ್ಲಿ ಗೃಹ ಕಚೇರಿ ಕೃಷ್ಣಾದಲ್ಲಿ ಮಾತನಾಡಿದ ಅವರು, ಸೋಮವಾರದಿಂದ ಲಾಕ್‍ಡೌನ್ ಸಡಿಲಿಕೆ ಮಾಡುವ ಕುರಿತು ಚಿಂತನೆ ನಡೆಸುವುದಾಗಿ ತಿಳಿಸಿದ್ದಾರೆ. ಇನ್ನು ಮೂರ್ನಾಲ್ಕು ದಿನ ರಾಜ್ಯದ ಪರಿಸ್ಥಿತಿಯನ್ನು ವಿಶ್ಲೇಷಿಸುತ್ತೇವೆ. ಯಾವ್ಯಾವ ಜಿಲ್ಲೆಗಳಲ್ಲಿ ಪರಿಸ್ಥಿತಿ ಹೇಗಿದೆ ಎಂಬುದನ್ನು ಗಮನಿಸುತ್ತೇವೆ. ನಂತರ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದ್ದಾರೆ.
ಸದ್ಯ ಬೆಂಗಳೂರು ಸೇರಿದಂತೆ ಹಲವು ರಾಜ್ಯದಲ್ಲಿ ಕೊರೊನಾ ಪಾಸಿಟಿವಿಟಿ ದರ ಕಡಿಮೆ ಆಗಿದೆ. ಇದರ ಬೆನ್ನಲ್ಲೆ ಸಿಎಂ ಈ ಹೇಳಿಕೆ ನೀಡಿರುವುದು ತೀವ್ರ ಕುತೂಹಲ ಕೆರಳಿಸಿದೆ.
ಇದೇ ವೇಳೆ ಲಾಕ್‍ಡೌನ್ ಪ್ಯಾಕೇಜ್ ಕುರಿತು ಮಾತನಾಡಿರುವ ಅವರು, ಲಾಕ್‍ಡೌನ್ ಕಾರಣವಾಗಿ ಪ್ಯಾಕೇಜ್ ಘೋಷಣೆ ಮಾಡಿದ್ದೆವು. ಇಂದು ಕಟ್ಟಡ ಕಾರ್ಮಿಕರಿಗೆ ತಲಾ 3 ಸಾವಿರ ರೂ. ಹಣ ಬಿಡುಗಡೆ ಮಾಡಿದ್ದೇವೆ. ಒಟ್ಟು 25 ಲಕ್ಷ ಕಾರ್ಮಿಕರಿಗೆ ಹಣ ಬಿಡುಗಡೆಯಾಗಿದೆ. 4 ಲಕ್ಷ ಜನರಿಗೆ ಇಂದು 10 ಕೋಟಿ ರೂ. ಬಿಡುಗಡೆ ಮಾಡಿದ್ದೇವೆ. ಅಸಂಘಟಿತ ಕಾರ್ಮಿಕರಿಗೆ ಅರ್ಜಿ ಸಲ್ಲಿಸಲು ಆಪ್ ಬಿಡುಗಡೆ ಮಾಡಿದ್ದೇವೆ ಎಂದು ಮಾಹಿತಿ ನೀಡಿದರು.
ಇನ್ನು ಎಸ್ ಎಸ್ ಎಲ್ ಸಿ ಪರೀಕ್ಷೆ ಬಗ್ಗೆ ಮಾತನಾಡಿ, ಪರೀಕ್ಷೆ ನಡೆಸಬೇಕು ಅಂತಾ ಇರೋದು ಜುಲೈ ತಿಂಗಳಿನಲ್ಲಿ, ಅಲ್ಲಿಯವರೆಗೆ ಕೊರೋನಾ ಸ್ಥಿತಿ ಏನಾಗುತ್ತದೆ ಎಂದು ನೋಡೋಣ ಎಂದರು.









