ಲಾಕ್ ಡೌನ್ ವೇಳೆ ರಂಜಾನ್ ಹಬ್ಬಕ್ಕೆ ತೊಂದರೆ ಮಾಡಲ್ಲ : ಈಶ್ವರಪ್ಪ
ಶಿವಮೊಗ್ಗ : ನಾಳೆಯಿಂದ ಶಿವಮೊಗ್ಗ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನಾಲ್ಕು ದಿನಗಳ ಕಾಲ ಸಂಪೂರ್ಣ ಲಾಕ್ ಡೌನ್ ಜಾರಿಗೆ ಬರಲಿದ್ದು, ಈ ಅವಧಿಯಲ್ಲಿ ರಂಜಾನ್ ಹಬ್ಬಕ್ಕೆ ತೊಂದರೆ ಮಾಡುವುದಿಲ್ಲ ಎಂದು ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶಿವಮೊಗ್ಗ ಮಹಾನಗರ ವ್ಯಾಪ್ತಿಯಲ್ಲಿ ನಾಳೆಯಿಂ ನಾಲ್ಕು ದಿನಗಳ ಕಾಲ ಸಂಪೂರ್ಣ ಲಾಕ್ ಡೌನ್ ಇರಲಿದೆ.
ಆದ್ರೂ ರಂಜಾನ್ ಹಬ್ಬಕ್ಕೆ ಬೇಕಾದ ಎಲ್ಲ ವ್ಯವಸ್ಥೆಯನ್ನು ಮಾಡಲಾಗುತ್ತದೆ. ಕೆಲವರು ರಂಜಾನ್ ಹೆಸರಿನಲ್ಲಿ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ ಅದನ್ನು ನಂಬಬೇಡಿ.
ಈ ಕಠಿಣ ಲಾಕ್ ಡೌನ್ ವೇಳೆಯಲ್ಲಿ ರಂಜಾನ್, ಬಸವ ಜಯಂತಿಗೆ ಯಾವುದೇ ತೊಂದರೆ ಆಗದಂತೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.
ಇನ್ನು ಲಾಕ್ ಡೌನ್ ನಲ್ಲಿ ರೈಲ್ವೆ, ಡಿಫೆನ್ಸ್ ಗೆ ಸಂಬಂಧಿಸಿದ ಕೈಗಾರಿಕಾ ಉತ್ಪನ್ನ ತಯಾರಿಸಲು ಅವಕಾಶ ಕಲ್ಪಿಸಲಾಗಿದೆ.
ಲಾಕ್ ಡೌನ್ ಸಮಯದಲ್ಲಿ ತರಕಾರಿ, ಹಾಲು, ದಿನಸಿ ಮಾರಾಟಕ್ಕೆ ಬೆಳಗ್ಗೆ 10ರ ವರೆಗೆ ಅವಕಾಶ ಇರುತ್ತದೆ.
ಬೆಂಗಳೂರು, ತುಮಕೂರು ಮೊದಲಾದ ಕಡೆಗಳಿಂದ ಕೊರೊನಾ ಸೋಂಕಿತರು ಜಿಲ್ಲೆಯನ್ನು ಪ್ರವೇಶಿಸುತ್ತಿದ್ದು, ಕಠಿಣ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ ಎಂದರು.










