ಲಖನೌ : ಮಾರಕ ಕೊರೊನಾ ವೈರಸ್ ನಿಯಂತ್ರಿಸುವ ನಿಟ್ಟಿನಲ್ಲಿ ದೇಶದಲ್ಲಿ ಲಾಕ್ ಡೌನ್ ಮುಂದುವರೆಸಲಾಗಿದೆ. ಜನರ ಒಳಿತಿಗಾಗಿ ಕೊರೊನಾ ವಾರಿಯರ್ಸ್ ಹಗಲು ರಾತ್ರಿ ದುಡಿಯುತ್ತಿದ್ದಾರೆ. ಆದರೆ, ಹಲವೆಡೆ ಲಾಕ್ ಡೌನ್ ನಿಯಮಗಳನ್ನು ಗಾಳಿಗೆ ತೂರಿ ಕಿಡಿಗೇಡಿಗಳು ಪುಂಡಾಟ ನಡೆಸುತ್ತಿರುವ ಘಟನೆ ಮರುಕಳಿಸುತ್ತಲೇ ಇದೆ. ಇಂದು ಉತ್ತರಪ್ರದೇಶದ ಆಲಿಘಡ್ ನ ಭೂಜ್ ಪುರಿ ತರಕಾರಿ ಮಾರುಕಟ್ಟೆಯಲ್ಲಿ ಕಿಡಿಗೇಡಿಗಳು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿ ದುಷ್ಕೃತ್ಯ ಎಸಗಿದ್ದಾರೆ.
ಏನಿದು ಘಟನೆ?
ಇಂದು ಭೂಜ್ ಪುರಿಯ ತರಕಾರಿ ಮಾರುಕಟ್ಟೆಯಲ್ಲಿ ಸಾಮಾಜಿಕ ಅಂತರ ಹಾಗೂ ಲಾಕ್ ಡೌನ್ ನಿಯಮ ಉಲ್ಲಂಘಿಸಿ ತರಕಾರಿ ವ್ಯಾಪಾರ ನಡೆದಿತ್ತು. ಈ ವೇಳೆ, ಪೊಲೀಸರು ಹೆಚ್ಚಿನ ಸಂಖ್ಯೆಯಲ್ಲಿ ಮಾರುಕಟ್ಟೆಗೆ ಧಾವಿಸಿದ್ದಾರೆ. ಈ ವೇಳೆ ಪೊಲೀಸರನ್ನು ಗಮನಿಸಿದ ಅಲ್ಲಿನ ಕೆಲ ಕಿಡಿಗೇಡಿಗಳು ತಮ್ಮತಮ್ಮಲ್ಲೇ ಗಲಾಟೆ ಮಾಡಿಕೊಂಡಿದ್ದಾರೆ. ತರಕಾರಿ ವರ್ತಕರು ಒಬ್ಬರಿಗೊಬ್ಬರು ಜಗಳವಾಡಲು ಆರಂಭಸಿದ್ದಾರೆ. ಈ ವೇಳೆ, ಪೊಲೀಸರು ಮಧ್ಯಪ್ರವೇಶಿಸಿ ಜಗಳ ಬಿಡಲು ಮುಂದಾಗಿದ್ದಾರೆ. ಆದರೆ, ಈ ವೇಳೆ ಕೆಲ ಕಿಡಿಗೇಡಿಗಳ ಪೊಲೀಸರ ಮೇಲೆ ಏಕಾಏಕಿ ಕಲ್ಲು ತೂರಾಟ ನಡೆಸಿದ್ದಾರೆ. ಈ ವೇಳೆ ಹಲವರು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ








