ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಸೋಂಕಿನ ಪ್ರಮಾಣ ಹೆಚ್ಚಾಗುತ್ತಿದೆ. ಹಾಗಾಗಿ ರಾಜ್ಯದಲ್ಲಿ ಮತ್ತೆ ಲಾಕ್ ಡೌನ್ ಮಾಡಲಾಗುವುದು ಎಂಬ ಮುನ್ಸೂಚನೆಯನ್ನು ಆರೋಗ್ಯ ಸಚಿವ ಶ್ರೀ ರಾಮುಲು ನೀಡಿದ್ದಾರೆ.
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾಸುರ ಅಟ್ಟಹಾಸ ಹೆಚ್ಚಾದ ಹಿನ್ನೆಲೆಯಲ್ಲಿ ಕೆಲ ಕಡೆ ಲಾಕ್ ಡೌನ್ ಮಾಡಲಾಗಿದೆ. ಇದೆ ಮಾದರಿಯಲ್ಲಿ ಇಡಿ ರಾಜ್ಯದಲ್ಲೂ ಲಾಕ್ ಡೌನ್ ಆಗುವ ಸಾಧ್ಯತೆಯಿದೆ. ಅಂತಹದೊಂದು ಮನ್ಸೂಚನೆಯನ್ನು ಸಚಿವರು ನೀಡಿದ್ದಾರೆ.
ಇಂದು ನಗರದ ಕೆ.ಸಿ ಜನರಲ್ ಆಸ್ಪತ್ರೆಗೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಆರೋಗ್ಯ ಸಚಿವ ಶ್ರೀರಾಮುಲು, ರಾಜ್ಯದಲ್ಲಿ ಕೊರೊನಾ ನಿಯಂತ್ರಣಕ್ಕೆ ಬರುತ್ತಿಲ್ಲ. ಹಾಗಾಗಿ ರಾಜ್ಯದಲ್ಲಿ ಮತ್ತೊಮ್ಮೆ ಲಾಕ್ ಡೌನ್ ಮಾಡಬೇಕು ಎಂಬ ಸಲಹೆ ಕೇಳಿ ಬಂದಿವೆ. ಲಾಕ್ ಡೌನ್ ವಿಚಾರದ ಬಗ್ಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಜೊತೆ ಚರ್ಚೆ ಮಾಡುತ್ತೇವೆ. ಆ ಬಳಿಕ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತೇವೆ.
ಅಲ್ಲದೆ ಲಾಕ್ ಡೌನ್ ಮಾಡುವ ಬಗ್ಗೆ ಸಾಕಷ್ಟು ಚರ್ಚೆಗಳು ಶುರುವಾಗಿದೆ. ಬೆಂಗಳೂರಿನಲ್ಲಿ ಕೆಲ ಪ್ರದೇಶಗಳನ್ನು ಲಾಕ್ ಡೌನ್ ಮಾಡಲಾಗಿದೆ. ಜೊತೆಗೆ ಕಟ್ಟು ನಿಟ್ಟಿನ ನಿಯಮಗಳನ್ನು ಜಾರಿ ಮಾಡಲಾಗಿದೆ. ರಾಜ್ಯದಲ್ಲಿ ಕೊರೊನಾ ಸೋಂಕು ಹೆಚ್ಚು ಪ್ರದೇಶಗಳನ್ನು ಲಾಕ್ ಡೌನ್ ಮಾಡುವ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ ಎಂದು ಸಚಿವರು ಹೇಳಿದ್ದಾರೆ.








