ಬೆಂಗಳೂರು: ಲೋಕಾಯುಕ್ತ ಅಧಿಕಾರಿಗಳು ಇಂದು ಭ್ರಷ್ಟ ಅಧಿಕಾರಿಗಳಿಗೆ ಶಾಕ್ ನೀಡಿದೆ. 12 ಜನ ಅಧಿಕಾರಿಗಳಿಗೆ ಸಂಬಂಧಿಸಿದ ಸ್ಥಳಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬೆಂಗಳೂರು (Bengaluru) ಸೇರಿದಂತೆ ರಾಜ್ಯದ 56 ಕಡೆ ನೂರಕ್ಕೂ ಅಧಿಕ ಅಧಿಕಾರಿಗಳ ತಂಡ ದಾಳಿ ನಡೆಸಿ (Lokayukta Raid) ಅಪಾರ ಪ್ರಮಾಣ ನಗ-ನಗದು-ಆಸ್ತಿ ಪತ್ರಗಳನ್ನು ಪತ್ತೆ ಹಚ್ಚಿದೆ.
ಕಾನೂನು ಮಾಪನ ಇಲಾಖೆಯ ಉಪ ನಿಯಂತ್ರಕ ಅಥರ್ ಅಲಿಗೆ ಸೇರಿದ ಬೆಂಗಳೂರಿನ ಮನೆ ಮೇಲೆ ಅಧಿಕಾರಿಗಳು ರೇಡ್ ಮಾಡಿದ್ದಾರೆ. ಅಧಿಕಾರಿ ಅಥರ್ ಅಲಿ ಪುತ್ರಿ ಪಕ್ಕದ ಮನೆಗೆ ಕಿಟಕಿ ಮೂಲಕ ಚಿನ್ನದ ಬ್ಯಾಗ್ ಎಸೆದಿದ್ದರು. ನೆರೆಮನೆಯವರು ಲೋಕಾಯುಕ್ತ ಅಧಿಕಾರಿಗಳಿಗೆ ಚಿನ್ನದ ಬ್ಯಾಂಗ್ ನೀಡಿದ್ದು, ಇದರಲ್ಲಿ 2 ಕೆಜಿಗೂ ಹೆಚ್ಚು ಚಿನ್ನ, 2 ಕೆಜಿ ಬೆಳ್ಳಿ, ಡೈಮಂಡ್ ನೆಕ್ಲೇಸ್, ದುಬಾರಿ ವಾಚ್ ಸಿಕ್ಕಿವೆ.
ಮನೆಯಲ್ಲಿ 25 ಲಕ್ಷ ರೂ. ನಗದು ಕೂಡ ಸಿಕ್ಕಿದೆ. ಶಿವಮೊಗ್ಗದಲ್ಲಿ ತೋಟಗಾರಿಕೆ ಇಲಾಖೆ ಉಪನಿರ್ದೇಶಕ ಪ್ರಕಾಶ್, ಚಿಕ್ಕಬಳ್ಳಾಪುರದಲ್ಲಿ ಹಿರಿಯ ಪಶು ವೈದ್ಯಾಧಿಕಾರಿ ಆರ್ ಸಿದ್ದಪ್ಪ, ಯಾದಗಿರಿಯ ಯೋಜನಾಧಿಕಾರಿ ಬಲವಂತ ರಾಠೋಡ್, ಮೈಸೂರಲ್ಲಿ ಲೇಬರ್ ಇನ್ಸ್‌ಪೆಕ್ಟರ್ ಚೇತನ್, ಕೆಐಎಡಿಬಿ ಅಪರ ನಿರ್ದೇಶಕ ಮುದ್ದುಕುಮಾರ್ ಅವರ ತುಮಕೂರು ಮನೆ ಸೇರಿದಂತೆ ಹಲವೆಡೆ ದಾಳಿ ಮಾಡಿರುವ ಅಧಿಕಾರಿಗಳು ಅಪಾರ ಸಂಪತ್ತು ವಶಕ್ಕೆ ಪಡೆದಿದ್ದಾರೆ.
ತುಮಕೂರಿನ ವಾಣಿಜ್ಯ ಇಲಾಖೆ ಹೆಚ್ಚುವರಿ ನಿರ್ದೇಶಕರಾದ ಮುದ್ದುಕುಮಾರ್, ಮನೆಯಲ್ಲಿ ಕೋಟಿ ಕೋಟಿ ಮೌಲ್ಯದ ಆಸ್ತಿ ಪತ್ತೆಯಾಗಿದೆ. ದುಬಾರಿ ಬೆಲೆಯ ಹ್ಯೂಬ್ಲೋಟ್ ವಾಚ್ ಪತ್ತೆಯಾಗಿದೆ. ಅಲ್ಲದೇ 1.6 ಕೋಟಿ ರೂ. ಮೌಲ್ಯದ ಮೂರು ಮನೆ (ಸರ್ಕಾರಿ ಮೌಲ್ಯ) ಮನೆಗಳನ್ನು ಹೊಂದಿದ್ದಾರೆ. ನಾಗರಬಾವಿಯಲ್ಲಿ ಎರಡು ಮನೆ, ತುಮಕೂರರಲ್ಲಿ ಒಂದು ಮನೆ ಹೊಂದಿರುವ ದಾಖಲೆಗಳು ಲಭ್ಯವಾಗಿವೆ.
17 ಲಕ್ಷ ರೂ. ಮೌಲ್ಯದ 6.5 ಎಕರೆ ಕೃಷಿ ಜಮೀನು, 70 ಲಕ್ಷ ರೂ. ಮೌಲ್ಯದ ಫಾರ್ಮ್ ಹೌಸ್, ಮನೆಯಲ್ಲಿ 1.13 ಲಕ್ಷ ರೂ. ನಗದು, 87 ಲಕ್ಷ ಮೌಲ್ಯದ 1.2 ಕೆಜಿ ಚಿನ್ನಾಭರಣ, 1.8 ಲಕ್ಷ ರೂ. ಮೌಲ್ಯದ 2 ಕೆಜಿ ಬೆಳ್ಳಿ, 35 ಲಕ್ಷ ರೂ. ಮೌಲ್ಯದ ವಾಹನ, ತುಮಕೂರು ಕೈಗಾರಿಕ ಪ್ರದೇಶದಲ್ಲಿ 3 ಕೋಟಿ ಬೆಲೆಬಾಳುವ ಎರಡು ಇಂಡಸ್ಟ್ರಿಯಲ್ ಶೆಡ್, ಸಹಕಾರ ಬ್ಯಾಂಕ್‌ನಲ್ಲಿ 55 ಲಕ್ಷ ರೂ. ಠೇವಣಿ, ಎಸ್‌ಬಿಐ ಬ್ಯಾಂಕ್ ಖಾತೆಯಲ್ಲಿ 15 ಲಕ್ಷ ರೂ., 1 ಲಕ್ಷ ರೂ. ಮೌಲ್ಯದ ಪಿಸ್ತೂಲ್ ಮತ್ತು ಏರ್ ಗನ್ ಗಳನ್ನು ಅಧಿಕಾರಿಗಳು ಪತ್ತೆ ಮಾಡಿದ್ದಾರೆ. ಈ ವ್ಯಕ್ತಿಯ ಆಸ್ತಿ ಕಂಡು ಅಧಿಕಾರಿಗಳೇ ಶಾಕ್ ಆಗಿದ್ದಾರೆ.