ಸಚಿವ ಜಮೀರ್ ಅಹ್ಮದ್ ಖಾನ್ ಅವರ ಆಪ್ತ ಕಾರ್ಯದರ್ಶಿಗೆ ಲೋಕಾಯುಕ್ತ ಅಧಿಕಾರಿಗಳು ಶಾಕ್ ನೀಡಿದ್ದಾರೆ. ಅಕ್ರಮ ಆಸ್ತಿ ಗಳಿಕೆ ಆರೋಪದ ಹಿನ್ನೆಲೆಯಲ್ಲಿ ಲೋಕಾಯುಕ್ತ ತಂಡ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಭಾಗಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ನಡೆಸುತ್ತಿದೆ.
ವಸತಿ ಇಲಾಖೆಗೆ ನಿಯೋಜನೆಗೊಂಡಿರುವ ಸಚಿವ ಜಮೀರ್ ಅಹ್ಮದ್ ಖಾನ್ ಅವರ ಆಪ್ತ ಸರ್ಫರಾಜ್ಗೆ ಸಂಬಂಧಿಸಿದ ಆಸ್ತಿಗಳ ಮೇಲೆ ಈ ದಾಳಿ ನಡೆದಿದೆ. ಬೆಂಗಳೂರಿನಲ್ಲಿ ಇರುವ 7 ಮನೆಗಳು, ಕೊಡಗು ಜಿಲ್ಲೆಯಲ್ಲಿ ಇರುವ 2 ಕಾಫಿ ಎಸ್ಟೇಟ್ಗಳು ಹಾಗೂ ಹೆಚ್.ಡಿ.ಕೋಟೆಯಲ್ಲಿರುವ ಒಂದು ರೆಸಾರ್ಟ್ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಒಟ್ಟು 10ಕ್ಕೂ ಹೆಚ್ಚು ಕಡೆಗಳಲ್ಲಿ ಸರ್ಚ್ ನಡೆಯುತ್ತಿದೆ ಎನ್ನಲಾಗಿದೆ.
ದಾಳಿಯ ವೇಳೆ ಆಸ್ತಿ ದಾಖಲೆಗಳು, ಹಣಕಾಸು ವ್ಯವಹಾರಗಳ ದಾಖಲೆಗಳು ಹಾಗೂ ಇತರೆ ಮಹತ್ವದ ದಾಖಲೆಗಳನ್ನು ಪರಿಶೀಲಿಸಲಾಗುತ್ತಿದ್ದು, ಆಸ್ತಿಗಳ ಮೌಲ್ಯ ಮತ್ತು ಆದಾಯ ಮೂಲಗಳ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ದಾಳಿ ಇನ್ನೂ ಮುಂದುವರಿದಿದ್ದು, ಪರಿಶೀಲನೆ ಬಳಿಕವೇ ಅಕ್ರಮ ಆಸ್ತಿ ಪ್ರಕರಣದ ಸಂಪೂರ್ಣ ಚಿತ್ರಣ ಬಯಲಾಗಲಿದೆ ಎಂದು ಲೋಕಾಯುಕ್ತ ಮೂಲಗಳು ತಿಳಿಸಿವೆ.
ಈ ಬೆಳವಣಿಗೆ ರಾಜ್ಯ ರಾಜಕೀಯ ವಲಯದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಗಿದ್ದು, ಮುಂದಿನ ದಿನಗಳಲ್ಲಿ ತನಿಖೆಯ ವರದಿ ಆಧಾರವಾಗಿ ಕಾನೂನು ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.








