ಲೂಸ್ ಮಾದ ಯೋಗಿ “ಒಂಭತ್ತನೇ ದಿಕ್ಕು” ಟ್ರೇಲರ್ ಗೆ ಮೆಚ್ಚುಗೆಯ ಮಹಾಪೂರ
ಲೂಸ್ ಮಾದ ಯೋಗಿ – ಅದಿತಿ ಪ್ರಭುದೇವ ಅಭಿನಯದ ಈ ಚಿತ್ರಕ್ಕೆ ದಯಾಳ್ ಪದ್ಮನಾಭನ್ ನಿರ್ದೇಶನ.
ಕನ್ನಡದಲ್ಲಿ ತಮ್ಮದೇ ಆದ ವಿಶಿಷ್ಟ ರೀತಿಯ ಚಿತ್ರಗಳನ್ನು ನಿರ್ದೇಶಿಸಿ ಹೆಸರಾದವರು ದಯಾಳ್ ಪದ್ಮನಾಭನ್. ಪ್ರಸ್ತುತ ಅವರು ನಿರ್ದೇಶಿಸಿರುವ ಚಿತ್ರ “ಒಂಭತ್ತನೇ ದಿಕ್ಕು”.
ಲೂಸ್ ಮಾದ ಯೋಗಿ ಅವರು ನಾಯಕನಾಗಿ ನಟಿಸಿರುವ ಈ ಚಿತ್ರದ ನಾಯಕಿ ಅದಿತಿ ಪ್ರಭುದೇವ. ಇತ್ತೀಚೆಗೆ ಈ ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭ ನೆರವೇರಿತು.
ಟ್ರೇಲರ್ ಗೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ. ನಿರ್ಮಾಪಕರಾದ ಕೆ.ಮಂಜು ಹಾಗೂ ರಮೇಶ್ ಯಾದವ್ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.
ಟ್ರೇಲರ್ ಬಿಡುಗಡೆ ಸಮಾರಂಭಕ್ಕೆ ಮೊದಲು ಇತ್ತೀಚೆಗೆ ನಿಧನರಾದ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ, ಶ್ರದ್ಧಾಂಜಲಿ ಸಲ್ಲಿಸಲಾಯಿತು.
ನನ್ನ ನಿರ್ದೇಶನದ ಹತ್ತೊಂಭತ್ತನೆಯ ಚಿತ್ರವಿದು. ಕಳೆದ ಕೆಲವು ವರ್ಷಗಳಿಂದ ನಾನು ಹಗ್ಗದ ಕೊನೆ, ಆ ಕರಾಳ ರಾತ್ರಿ, ರಂಗನಾಯಕಿಯಂತಹ ವಿಭಿನ್ನ ಕಥೆಯುಳ್ಳ ಚಿತ್ರಗಳನ್ನು ನಿರ್ದೇಶಿಸುತ್ತಾ ಬಂದಿದ್ದೀನಿ. ಈಗ ಆಕ್ಷನ್ ಥ್ರಿಲ್ಲರ್ ಸಿನಿಮಾವೊಂದನ್ನು ನಿರ್ದೇಶಿಸಿದ್ದೇನೆ. ಅದೇ ” ಒಂಭತ್ತನೇ ದಿಕ್ಕು “.
ಈ ಚಿತ್ರದ ಕಥೆ ಎರಡು ಟೈಮ್ ಲೈನ್ ನಲ್ಲಿ ಸಾಗುತ್ತದೆ.
ನಮಗೆ ಸಿಗುವುದಿಲ್ಲ ಎಂದು ಗೊತ್ತಿದರೂ ನಾವು ಮತ್ತೊಂದು ದಾರಿಯಲ್ಲಿ ಏನನ್ನೋ ಹುಡುಕುತ್ತಾ ಹೋಗುತ್ತೇವೆ. ಅದು ಮತ್ತೊಂದು ಕಡೆ ಸಿಗುತ್ತದೆ. ಹೀಗೆ ಇಲ್ಲದ್ದ ಕಡೆ ಹುಡುಕುತ್ತಾ ಸಾಗುತ್ತೇವೆ. ಅದಕ್ಕೆ ನಾನು ಈ ಶೀರ್ಷಿಕೆ ಆಯ್ಕೆ ಮಾಡಿಕೊಂಡೆ. ಮೂರು ಸಾಹಸ ಸನ್ನಿವೇಶಗಳಿವೆ. ಲೂಸ್ ಮಾದ ಯೋಗಿ ಅವರಂತಹ ಉತ್ತಮ ಕಲಾವಿದರೊಡನೆ ಕೆಲಸ ಮಾಡಿದ್ದು, ಖುಷಿ ತಂದಿದೆ. ಅದಿತಿ ಪ್ರಭುದೇವ, ಸಾಯಿಕುಮಾರ್, ಹಿರಿಯನಟ ಅಶೋಕ್, ಸುಂದರ್, ರಮೇಶ್ ಭಟ್, ಶೃತಿ ನಾಯಕ್,
ಪ್ರಶಾಂತ್ ಸಿದ್ದಿ, ಮುನಿ ಮುಂತಾದವರ ಮನೋಜ್ಞ ಅಭಿನಯ ನಮ್ಮ ಚಿತ್ರವನ್ನು ಮತ್ತಷ್ಟು ಸುಂದರವಾಗಿಸಿದೆ. ಮಣಿಕಾಂತ್ ಕದ್ರಿ ಅವರ ಸಂಗೀತದಲ್ಲಿ ಸುಮಧುರ ಹಾಡುಗಳು ಮೂಡಿಬಂದಿದೆ. ಇದೇ ಹತ್ತೊಂಬತ್ತನೆಯ ತಾರೀಖು ಚಿತ್ರ ತೆರೆಗೆ ಬರುವ ಸಾಧ್ಯತೆ ಇದೆ ಎಂದರು ಚಿತ್ರದ ನಿರ್ಮಾಪಕ ಹಾಗೂ ನಿರ್ದೇಶಕ ದಯಾಳ್ ಪದ್ಮನಾಭನ್.
ನಾನು ಇಲ್ಲಿಯವರೆಗೂ ಮಾಡದ ಪತ್ರವನ್ನು ಈ ಚಿತ್ರದಲ್ಲಿ ಮಾಡಿದ್ದೇನೆ. ದಯಾಳ್ ಅವರು ಹೇಳಿದ ಕಥೆ ತುಂಬಾ ಹಿಡಿಸಿತು. ಕಂಟೆಂಟ್ ಓರೆಯಂಟೆಡ್ ನ ಕಮರ್ಷಿಯಲ್ ಸಿನಿಮಾ ಇದು. ನಮಗೆ ಚಿತ್ರೀಕರಣ ಮುಗಿದ್ದು, ಚಿತ್ರ ನೋಡುವ ತನಕ ಸಿನಿಮಾ ಹೇಗೆ ಬಂದಿರಬಹುದು? ಎಂಬ ಕಾತುರದಲ್ಲಿರುತ್ತೇವೆ. ಇತ್ತೀಚೆಗೆ ಸಿನಿಮಾ ನೋಡಿದೆ. ಸಿನಿಮಾ ತುಂಬಾ ಚೆನ್ನಾಗಿದೆ. ಪ್ರೇಕ್ಷಕರು ನಮ್ಮ ಸಿನಿಮಾ ಇಷ್ಟಪಡುವುದರಲ್ಲಿ ಯಾವುದೇ ಸಂದೇಹವಿಲ್ಲ ಎಂದರು ನಾಯಕ ಲೂಸ್ ಮಾದ ಯೋಗಿ.
ನಾನು ದಯಾಳ್ ಅವರ ಜೊತೆ ಈ ಹಿಂದೆ “ರಂಗನಾಯಕಿ” ಚಿತ್ರದಲ್ಲಿ ಅಭಿನಯಿಸಿದ್ದೇನೆ. ಈ ಚಿತ್ರದಲ್ಲಿ ನನ್ನದು ವಿಭಿನ್ನ ಪಾತ್ರ. ದಯಾಳ್ ಅವರು ನಿಗದಿಯಂತೆ ಸಿನಿಮಾ ಮಾಡುತ್ತಾರೆ. ಹಾಗಾಗಿ ಅವರ ಜೊತೆ ಕೆಲಸ ಮಾಡುವು ಖುಷಿಯ ವಿಚಾರ ಎಂದರು ನಾಯಕಿ ಅದಿತಿ ಪ್ರಭುದೇವ.
ನಾನು ಎಲ್ಲಾ ಪಾತ್ರಗಳನ್ನು ಒಪ್ಪಿಕೊಳ್ಳುವುದಿಲ್ಲ. ಅದರೆ ದಯಾಳ್ ಅವರು ಹೇಳಿದ ಪಾತ್ರ ಇಷ್ಟವಾಯಿತು. ನಾನು ಯೋಗಿ ಅವರ ಅಪ್ಪನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ ಎಂದು ಹಿರಿಯ ನಟ ಅಶೋಕ್ ತಮ್ಮ ಪಾತ್ರದ ಬಗ್ಗೆ ವಿವರಣೆ ನೀಡಿದರು.
ಚಿತ್ರದಲ್ಲಿ ಅಭಿನಯಿಸಿರುವ ಸುಂದರ್, ಶೃತಿ ನಾಯಕ್, ಎಕ್ಸಿಕ್ಯುಟಿವ್ ಪ್ರೊಡ್ಯೂಸರ್ ಅವಿನಾಶ್ ಯು ಶೆಟ್ಟಿ, ಬ್ಯುಸಿನೆಸ್ ಅಸೋಸಿಯೇಟ್ ಗುರು ದೇಶಪಾಂಡೆ ಮುಂತಾದವರು ತಮ್ಮ ಅಭಿಪ್ರಾಯ ಹಂಚಿಕೊಂಡರು.
ಮಣಿಕಾಂತ್ ಕದ್ರಿ ಸಂಗೀತ ನೀಡಿರುವ ಈ ಚಿತ್ರಕ್ಕೆ ರಾಕೇಶ್ ಛಾಯಾಗ್ರಹಣ, ಪ್ರೀತಿ ಮೋಹನ್ ಸಂಕಲನವಿದೆ.
ಲೂಸ್ ಮಾದ ಯೋಗಿ, ಅದಿತಿ ಪ್ರಭುದೇವ, ಸಾಯಿಕುಮಾರ್, ಅಶೋಕ್, ಸುಂದರ್, ಮುನಿ, ರಮೇಶ್ ಭಟ್, ಶೃತಿ ನಾಯಕ್, ಪ್ರಶಾಂತ್ ಸಿದ್ದಿ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.