ಬೆಂಗಳೂರು: ಕೊರೊನಾ ಹಾಗೂ ಲಾಕ್‍ಡೌನ್ ಹೊಡೆತಕ್ಕೆ ತತ್ತರಿಸಿರುವ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ(ಕೆಎಸ್‌ಆರ್‌ಟಿಸಿ) ಸಿಬ್ಬಂದಿ ಮೇಲೆ ಬರೆ ಹಾಕಲು ಹೊರಟಿದೆ.
ಆರ್ಥಿಕ ಸಂಕಷ್ಟ ಸರಿದೂಗಿಸಲು ಒಂದು ವರ್ಷ ವೇತನ ಮತ್ತು ಭತ್ಯೆ ರಹಿತ ರಜೆ ನೀಡಲು ಮುಂದಾಗಿದೆ.
ಈ ಸಂಬಂಧ ಬಿಎಂಟಿಸಿ, ಈಶಾನ್ಯ ಹಾಗೂ ವಾಯುವ್ಯ ಕರ್ನಾಟಕ ಸಾರಿಗೆ ನಿಗಮಗಳ ವ್ಯವಸ್ಥಾಪಕ ನಿರ್ದೇಶಕರು ಅಭಿಪ್ರಾಯ ತಿಳಿಸುವಂತೆ ಕೆಎಸ್‌ಆರ್‌ಟಿಸಿ ಎಂಡಿ ಶಿವಯೋಗಿ ಕಳಸದ್ ಪತ್ರ ಬರೆದಿದ್ದಾರೆ.

ಕೊರೊನಾ ಸೋಂಕು ಹೆಚ್ಚಾದ ಹಿನ್ನೆಲೆಯಲ್ಲಿ ಬಸ್ ಪ್ರಯಾಣ ಮಾಡಲು ಜನರು ಹಿಂದೇಟು ಹಾಕುತ್ತಿದ್ದಾರೆ.
ಸಾರ್ವಜನಿಕರು ಬಸ್ ಪ್ರಯಾಣ ಮಾಡದ ಕಾರಣ ಸಾರಿಗೆ ಇಲಾಖೆ ಭಾರಿ ನಷ್ಟ ಅನುಭವಿಸುತ್ತಿದೆ. ಹೀಗಾಗಿ
ಆರ್ಥಿಕ ಸಂಕಷ್ಟ ಸರಿದೂಗಿಸಲು ಅಧಿಕಾರಿಗಳು ಮತ್ತು ಸಿಬ್ಬಂದಿಗಳ ಅಭಿಪ್ರಾಯ ಸಂಗ್ರಹಿಸಿ ಶೀಘ್ರ ಕಳಿಸುವಂತೆ ಆದೇಶ ಹೊರಡಿಸಿದ್ದಾರೆ.
ರಜೆ ಪಡೆಯಲು ಕಠಿಣ ಷರತ್ತು..!
1. 50 ವರ್ಷ ಮೇಲ್ಪಟ್ಟ ಅಧಿಕಾರಿಗಳು ಹಾಗೂ ಸಿಬ್ಬಂದಿ ಮತ್ತು ಆರೋಗ್ಯ ಸಮಸ್ಯೆ ಇರುವ ಸಿಬ್ಬಂದಿಗೆ ಒಂದು ವರ್ಷ ವೇತನ ಮತ್ತು ಭತ್ಯೆ ರಹಿತ ರಜೆ ನೀಡಲಾಗುವುದು.
2. ಇದು ಸೇವಾವಧಿಯಲ್ಲಿ ಒಂದು ಅವಕಾಶ ಮಾತ್ರ. ಈ ರಜೆಗೆ ಸಿಎಲ್, ಸಿಕ್ ಲೀವ್ ಆಗಲಿ ಯಾವುದನ್ನೂ ಸೇರಿಸುವಂತಿಲ್ಲ.
3. ರಜೆ ಪಡೆಯಲು ಇಚ್ಚಿಸುವವರು ನಿಗಮಕ್ಕೆ ಕೊಡಬೇಕಾಗಿರುವ ಬಾಕಿ ಹಣವನ್ನು ಕಟ್ಟಬೇಕು.
4. ರಜೆ ಪಡೆದ ಮೇಲೆ ಸಂಸ್ಥೆಯ ಹಿತಾಸಕ್ತಿಗೆ ಧಕ್ಕೆ ತರುವಂತಹ ಪರ್ಯಾಯ ಉದ್ಯೋಗ ಮಾಡುವಂತಿಲ್ಲ.
5. ರಜೆ ಮೇಲೆ ತೆರಳಿದ ವೇಳೆ ಯಾವುದೇ ಪ್ರಕರಣಗಳಲ್ಲಿ ಭಾಗಿಯಾದರೆ ಸಂಸ್ಥೆ ಹೊಣೆಯಲ್ಲ, ಹೀಗಂತ ಬಾಂಡ್ ಬರೆದು ಕೊಡಬೇಕು.
6. ಒಂದು ವರ್ಷದ ರಜೆಯ ಅವಧಿಯಲ್ಲಿ ನಿವೃತ್ತಿ ಪಡೆಯಲು ಇಚ್ಛಿಸುವವರು ಸಕ್ಷಮ ಪ್ರಾಧಿಕಾರಗಳಿಗೆ ಅರ್ಜಿ ಸಲ್ಲಿಸಬಹುದು.
7. ಈ ಷರತ್ತುಗಳನ್ನು ಸಿಬ್ಬಂದಿ ಉಲ್ಲಂಘಿಸಿದರೆ ಕೆಲಸದಿಂದಲೇ ವಜಾ ಮಾಡಲಾಗುವುದು ಸೇರಿದಂತೆ 14 ಷರತ್ತುಗಳನ್ನು ಹಾಕಲಾಗಿದೆ.








