ಆದಿ ಅಂತ್ಯ ಇಲ್ಲವಿಲ್ಲದ ಅವಿರತವಾಗಿ ಭಾವನೆಗಳ ಜೊತೆಗಿನ ಆಟವೇ ಪ್ರೀತಿ ಪ್ರೇಮ. ಒಲವಿನ ಹಾದಿಯಲ್ಲಿ ಸಾಗುವ ಉತ್ಸಾಹಿಗಳಿಗೆ ಎಲ್ಲವೂ ಸತ್ಯ ಸುಂದರ, ನಿತ್ಯ ನೂತನ. ತಂಗಾಳಿಯ ಪಿಸುಮಾತಿಗೆ ಮೈಮನ ಪುಳಕ, ಸಂತಸದ ಕ್ಷಣಕ್ಕೆ ಪ್ರೀತಿಯೇ ಪೂರಕ. ಪ್ರೀತಿ ಎಂಬುದು ನಾಟಕವಲ್ಲ ಅದು ನಮ್ಮ ಜೀವನ.
ಹೌದು ಪ್ರೀತಿಗೆ ಆದಿ ಅಂತ್ಯವಿಲ್ಲ. ಪ್ರೇಮಿಗಳು ಸಾಯಬಹುದು ಆದ್ರೆ ಪ್ರೀತಿ ಎಂದಿಗೂ ಸಾಯುವುದಿಲ್ಲ. ಪ್ರೀತಿ, ಪ್ರೇಮ ಸೃಷ್ಠಿಯ ಮೂಲ, ಪ್ರೀತಿ ಇಲ್ಲದೆ ಸೃಷ್ಠಿಯೇ ಇಲ್ಲ. ಆದ್ರೆ ಇತ್ತೀಚಿನ ದಿನಗಳಲ್ಲಿ ಪ್ರೀತಿಯ ನಿಜವಾದ ಅರ್ಥವೇ ಬದಲಾಗುತ್ತಿದಿಯೇನೋ ಎನ್ನುವ ಘಟನೆಗಳು ನಮ್ಮ ಕಣ್ಣ ಮುಂದೆ ಆಗಾಗ ನಡೆಯುತ್ತಲೇ ಇರುತ್ತವೆ. ಅವುಗಳನ್ನು ನೋಡಿದಾಗ ಛೇ!! ಇದೇನಾ ಪ್ರೀತಿ? ಎನಿಸದೇ ಇರದು. ಇಂತಹ ಘಟನೆಗಳ ನಡುವೆ ಅಲ್ಲಿಲ್ಲ ಅಪರೂಪ ಎಂಬ0ತೆ ನಡೆಯುವ ಕೆಲ ಘಟನೆಗಳು ಪ್ರೀತಿಯ ನಿಜವಾದ ಅರ್ಥವನ್ನು, ಪ್ರೀತಿಯ ಮೌಲ್ಯವನ್ನು ಸಾರಿ ಹೇಳುತ್ತಿವೆ. ಅಂತಹ ಘಟನೆವೊಂದು ಕೇರಳದಲ್ಲಿ ನಡೆದಿದೆ.
ಕೇರಳ ಮೂಲದ ಪ್ರೇಮಿಗಳಿಬ್ಬರು ಪ್ರೀತಿಯ ಅರ್ಥವನ್ನು ಸಾರಿದ್ದಾರೆ. ಪ್ರೀತಿ ಎರಡು ದೇಹಗಳ ನಡುವೆ ಅಲ್ಲ ಎರಡು ಮನಸ್ಸುಗಳ ನಡುವೆ ಎಂದು ಅವರು ಸಾಬೀತುಪಡಿಸಿದ್ದಾರೆ. ಪ್ರಣವ್ ಮತ್ತು ಸಹನಾ ಎಂಬುವವರು ಕೆಲ ವರ್ಷಗಳಿಂದ ಒಬ್ಬರನೊಬ್ಬರು ಜೀವಕ್ಕೆ ಜೀವ ಎಂಬಂತೆ ಪ್ರೀತಿಸುತ್ತಿದ್ದರು. ಆದ್ರೆ ಅಪಘಾತವೊಂದರಲ್ಲಿ ಪ್ರಣವ್ ತನ್ನ ಎದೆಯ ಕೆಳಗಿನ ಭಾಗಗಳ ಮೇಲೆ ಸ್ವಾಧೀನವನ್ನೇ ಕಳೆದುಕೊಂಡು ಬಿಟ್ಟಿದ್ದ. ಇದರಿಂದ ಬೇಸರಗೊಂಡಿದ್ದ ಪ್ರಣವ್ ತನ್ನ ಪ್ರೇಯಸಿಯಿಂದ ದೂರ ಉಳಿದಿದ್ದ. ಈ ಮಧ್ಯೆ ಸಹನಾ ಕೂಡ ತನ್ನ ಪ್ರಿಯತಮನ ಸ್ಥಿತಿ ಕಂಡು ಕುಗ್ಗಿ ಹೋಗಿದ್ದಳು. ಅಲ್ಲದೆ ಆತನನ್ನೇ ಮದುವೆ ಆಗಬೇಕೆಂದು ಹಠ ಹಿಡಿದು ಬಿಟ್ಟಿದ್ದಳು. ಇದಕ್ಕೆ ಸಹನಾ ಮನೆಯವರ ವಿರೋಧಿವಿತ್ತು, ಇದು ಸಾಮಾನ್ಯ. ಆದರೂ ಸಹನಾ ಪಟ್ಟು ಸಡಲಿಸದೇ ಇದೀಗ ತನ್ನ ಪ್ರೀತಿಯನ್ನು ಉಳಿಸಿಕೊಂಡಿದ್ದಾಳೆ. ಅಂದರೆ ಈ ಪ್ರೇಮಿಗಳು ತಮ್ಮ ಕುಟುಂಬದ ಸಮ್ಮುಖದಲ್ಲಿ ವಿವಾಹರಾಗಿದ್ದಾರೆ.
ಈ ಮೂಲಕ ಪ್ರೀತಿ ಕೇವಲ ಎರಡು ದೇಹಗಳ ನಡುವೆ ಅಲ್ಲ ಎರಡು ಮನಸ್ಸುಗಳ ನಡುವೆ ಎಂದು ಈ ಪ್ರೇಮಿಗಳು ಸಾಬೀತುಪಡಿಸಿದ್ದಾರೆ. ಕೇರಳದ ಪ್ರಣವ್ ಮತ್ತು ಸಹನಾ ಜೋಡಿಗೆ ನಿಮ್ಮದೊಂದು ಮೆಚ್ಚುಗೆ ಇರಲಿ.
https://www.facebook.com/saakshatv/videos/1165183793818785/
ಮಹೇಶ್ ಎಂ ದಂಡು








