ಕೃಪೆ – ಹಿಂಡವಿ
ರಿಲ್ಯಾಕ್ಸ್ ಮನಸೆ:
ಪ್ರೀತಿ ಪ್ರೇಮಿಯಲ್ಲಿ ಕವಿತ್ವ ಸೃಷ್ಟಿಸುತ್ತದೆ, ಭಗ್ನಪ್ರೇಮ ದಿವ್ಯಜ್ಞಾನ ನೀಡುತ್ತದೆ; ಪ್ರೀತಿಗಿಂತ ಉನ್ನತ ಸೌಂದರ್ಯ ಮತ್ಯಾವುದಿದೆ?
“ಹಮೇಶಾ ಕೆ ಲಿಯೇ ರಕ್ ಲೇನಾ ಪಾಸ್ ಮುಜೆ ಅಪ್ನೆ
ಕೋಯಿ ಪೂಚೇ ತೋ ಬತಾ ದೇನಾ,
ಕಿರಾಯಾದಾರ್ ಹೈ ದಿಲ್ ಕಾ!!”
“ನಿನ್ನ ಜೊತೆಯಲ್ಲಿರುವ ನನ್ನ ಯಾರೆಂದು ಯಾರಾದರೂ ಕೇಳಿದರೆ, ನಿನ್ನ ಹೃದಯದ ಬಾಡಿಗೆದಾರ ಎಂದುಬಿಡು” ಎಷ್ಟು ಚೆಂದದ ಸಾಲಿದು. ಪ್ರೀತಿಯ ಉತ್ಕಟತೆಗೆ ಹಂಬಲಿಸುವ ಒಬ್ಬ ಎಕ್ಸ್ಟ್ರೀಮ್ ಪ್ರೇಮಿ ಹೀಗೆ ಯೋಚಿಸಬಹುದು.
ಜಗತ್ತಿನ ಯಾವುದೇ ಭಾವವನ್ನು, ಯಾವುದೇ ನೋವನ್ನು, ಯಾವುದೇ ಗುಣವನ್ನು ಪದಗಳಲ್ಲಿ ವರ್ಣಿಸಬಹುದು. ಆದರೆ ಮುದಗೊಳಿಸುವ ಸುವಾಸನೆಯನ್ನು, ಮನಸೂರೆಗೊಳ್ಳುವ ಪರಿಮಳವನ್ನು ವಾಕ್ಯಗಳಲ್ಲಿ ವರ್ಣಿಸಿ ಬರೆಯಲು ಸಾಧ್ಯವೇ? ಹಾಗೆಯೇ ಪ್ರೀತಿಯ ಭಾವವನ್ನು ಪೂರ್ತಿಯಾಗಿ ಅಕ್ಷರಗಳಲ್ಲಿ ಹಿಡಿದಿಡುವುದು ಖಂಡಿತಾ ಅಸಾಧ್ಯ. ಪ್ರೀತಿ ಸದಾ ಜೊತೆಗಿರುತ್ತದೆ; ಪ್ರತಿ ಕ್ಷಣ, ನಿರಂತರ.. ಹೃದಯದ ಅಂತಃಪುರದ ಹೆಬ್ಬಾಗಿಲ ದಾಟಿ ಒಳಬಂದ ಪ್ರೀತಿ ಅಲ್ಲೇ ನಿಂತಿರುತ್ತದೆ ಕದಲದೇ, “ಪಲ್ ಪಲ್ ದಿಲ್ ಕೇ ಪಾಸ್ ತುಮ್ ರೆಹತೀ ಹೋ”.
ಪ್ರೀತಿಯ ಮಾಧುರ್ಯವನ್ನು ಬಣ್ಣಿಸಿ ಪದ್ಯ ಬರೆದುಬಿಡಬಹುದು, ಅದಕ್ಕೊಂದು ರಾಗ ಸಂಯೋಜಿಸಿ ಹಾಡಿಯೂ ಬಿಡಬಹುದು, ಆ ಹಾಡಿನೊಳಗಿನ ಭಾವದ ತಲ್ಲೀನತೆಯಲ್ಲಿ ಕಳೆದುಹೋಗಿಬಿಡಬಹುದು. ಹೀಗೆ ಮೈಮರೆಸುವ ಪ್ರೀತಿಯ ಮಾಯೆಯೆಂಬ ಮತ್ತಿನ ತಾಕತ್ತಿನ ಮುಂದೆ ಜಗತ್ತಿನ ಯಾವುದೇ ಬ್ರಹ್ಮಾಂಡ ಶಕ್ತಿಯೂ ನಿಲ್ಲದು. ಪ್ರೀತಿ ಎಲ್ಲಿಂದಾದರೂ ಉದ್ಭವಿಸಿ ಆಗಸದೆತ್ತರಕ್ಕೆ ಬೆಳೆದು ನಿಲ್ಲಬಲ್ಲ ಅನಂತ ವಿಸ್ತಾರಕ್ಕೆ ಚಾಚಿಕೊಳ್ಳಬಹುದಾದ ದಿವ್ಯ ಶಕ್ತಿ; ʻಕಿಸಿ ರಾಹ್ ಮೆ ಕಿಸಿ ಮೋಡ್ ಪರ್ʼ ಪ್ರೀತಿ ಅಚಲ, ನಿಶ್ಚಲ, ವಿಶಾಲ ಮತ್ತು ನಿರ್ಮಲ..
ಪ್ರೀತಿಯಲ್ಲಿ ಬಂಧಿಯಾದವನಿಗೆ ಜಗತ್ತಿನ ಕುರೂಪ ಕಾಣಿಸುವುದೇ ಇಲ್ಲ. ಅದರಷ್ಟು ಮಧುರ ಅನುಭೂತಿ ಮತ್ಯಾವುದೂ ಇಲ್ಲ. ಗಮನಿಸಿ ನೋಡಿ, ನೀವು ಪ್ರೀತಿಯಲ್ಲ ಬಿದ್ದ ಸಮಯದಲ್ಲಿ ಆಘ್ರಾಣಿಸಿದ ಮೊದಲ ಮಳೆಯ ಮಣ್ಣಿನ ಘಮದ ಆಹ್ಲಾದ ಅದೆಷ್ಟು ಮಧುರ ನೆನಪು. ಅವತ್ತಿಗೆ ನೀವು ಕಾಣುವ ಪ್ರತಿಯೊಂದು ವಸ್ತುವೂ ಅಪರಿಮಿತ ಸೌಂದರ್ಯ ಹೊತ್ತದ್ದಾಗಿರುತ್ತದೆ.
ಅಂದು ತಿಂದ ಬಂಡಿ ಮಹಾಕಾಳಿ ದೇವಾಲಯದ ಹಳಸಿದ ಪ್ರಸಾದವೂ ಅದೆಷ್ಟು ರುಚಿ. ಮುಸುಡಿಗೆ ಸೆರಗು ಹಾಕಿಕೊಂಡ ಮಾರವಾಡಿ ಹೆಂಗಸಿನ ವಯ್ಯಾರ ಯಾಕೋ ವಿನಾಕಾರಣ ಇಷ್ಟವಾಗುತ್ತದೆ.. ಬಡೇ ಅಚ್ಚೇ ಲಗತೇ ಹೋ.
ಲವ್ ಬರ್ಡ್ಸ್ ಮಾತ್ರವಲ್ಲ ಕಾಗೆ, ಗೂಬೆ, ಹದ್ದೂ ಸಹ ನಿಮಗೆ ಮುದ್ದಾಗಿ ಕಾಣುವ ಕಾಲವದು. ಮುಂದಿನ ಮೂರೂ ಹಲ್ಲುಗಳುದುರಿದ ವೃದ್ಧನ ನಿಷ್ಕಳಂಕ ನಗುವಿನಲ್ಲಿ ನಿಮಗೆ ಪ್ರೀತಿಯ ಛಾಯೆ ಕಾಣಿಸಿರುತ್ತದೆ. ಗಾಂಧಿ ಬಜಾರಿನಲ್ಲಿ ಕಡಲೆಕಾಯಿ ಮಾರುವ ಮುದುಕಿಯ ಬಣ್ಣ ಮಾಸಿದ ಸೀರೆಯೂ ಸುಂದರವಾಗಿ ಕಂಡಿರುತ್ತದೆ. ಮೇಕ್ರಿ ಸರ್ಕಲ್ಲಿನಲ್ಲಿ ಚಪ್ಪಾಳೆ ತಟ್ಟುವ ಮಂಗಳಮುಖಿಯ ನಟಿಕೆ ಮುರಿದ ಹರಸುವಿಕೆಯಲ್ಲಿ ಪ್ರೀತಿಯ ದಿವ್ಯತೆ ಕಂಡಿರುತ್ತೀರಿ. ಪ್ರೀತಿ ಎಲ್ಲೆಡೆ ನರ್ತಿಸುತ್ತಿರುತ್ತದೆ ಇಶಾರೋ ಇಶಾರೋ ಮೇ.
ಗಣಪತಿ ವಿಸರ್ಜನೆ ಮೆರವಣಿಗೆಯಲ್ಲಿ ಎಗ್ಗಾದಿಗ್ಗಿ ಕುಣಿವ ಕುಡುಕನ ಟಪಾಂಗುಚಿ ಸ್ಟೆಪ್ ನಿಮಗೆ ಭರತನಾಟ್ಯದ ಲಯಬದ್ಧ ನೃತ್ಯದಂತೆ ತೋರುತ್ತದೆ. ಮುಂಗಾರಿನ ಮೊದಲ ಮಳೆ ಪ್ರೇಮಿಗಳಿಗೆ ಸ್ವರ್ಗ ಸದೃಶ್ಯ ಭಾವ ಬಿಡಿ, ಆದರೆ ನೀಲಾಗಸವನ್ನು ಮುಸುಕಿಕೊಂಡ ಕರಿಮೋಡಗಳೂ ಅನನ್ಯ ಲಾವಣ್ಯ ಹೊತ್ತು ನಿಲ್ಲುವುದಿದೆಯಲ್ಲ ಅದು ಪ್ರೀತಿಯ ನಿಜವಾದ ಮ್ಯಾಜಿಕ್.. ದಿವಾನಾ ಹುವಾ ಬಾದಲ್.. ಇನ್ನೇನು ಮಳೆ ಬರುತ್ತದೆ, ಒಂದು ಕಪ್ ಬಿಸಿಯಾದ ಕಾಫಿ, ಮಾಡಿನಿಂದ ಹನಿಹನಿಯಾಗಿ ಇಳಿಯುವ ಹನಿಗಳನ್ನು ಬೊಗಸೆಯಲ್ಲಿ ಹಿಡಿಯುವ ಆನಂದಕ್ಕೆ ಸಖಿ ಜೊತೆಗಿದ್ದರೆ ಅದೇನು ಸುಖ. ಅದು ಸಂಜೆಯಾಗಿದ್ದರಂತೂ ವಾಹ್! ಯೆ ಶಾಮ್ ಮಸ್ತಾನಿ.
ಪ್ರತಿಯೊಬ್ಬ ಆಶಿಕ್ನ ಪಾಲಿಗೂ ಪ್ರೀತಿ ಎನ್ನುವುದು ಅನುಭವಿಸಲು ಚಡಪಡಿಸುವ ಒಂದು ಹೇಳಿಕೊಳ್ಳಲಾಗದ ತಹತಹಿಕೆ. ಪ್ರತಿ ಪ್ರೇಮಿಯೂ ತನ್ನ ಪ್ರೀತಿಗೆ ಹೇಳಿಕೊಳ್ಳುವ ಮೊದಲ ಮಾತು.. “ಚಾಹತ್ ಬನ್ ಗಯ್ ಹೋ ತುಮ್”. ಪ್ರೀತಿ ಹುಟ್ಟಿದಾಗ ಕಜ್ಜಿನಾಯಿ, ಕುಂಟು ಕತ್ತೆ, ಗಲೀಜು ಹಂದಿಯೂ ಸುಂದರವಾಗಿ ಕಾಣುತ್ತದೆ. ಯಾಕಂದರೆ ಪ್ಯಾರ್ ದಿವಾನಾ ಹೋತಾ ಹೈ.. ಪ್ರೀತಿಯಲ್ಲಿ ಮುಳುಗಿ ತೇಲುವ ಪ್ರೇಮಿ ಕವಿಯಾಗುತ್ತಾನೆ, ಶಾಯರ್ ಆಗುತ್ತಾನೆ. ಒಂದೊಂದಾಗಿ ಶಾಯರಿಗಳು ತನ್ನಿಂತಾನೆ ಉರುಳಿ ಬೀಳುತ್ತವೆ, ಬಹೂತ್ ಕೂಬ್.. ಪ್ರೀತಿಯೆಂಬ ದೃಶ್ಯಕಾವ್ಯದ ಲಾಲಿತ್ಯವಿದೆಯಲ್ಲ ಅದರ ಸುಖದ ಅಮಲೇ ಅದ್ಭುತ, ಅದು ಕೊಡುವ ಪ್ರಾಣ ಹಿಂಡುವ ಸಂಕಟವೂ ಅದ್ಭುತವೇ. ಅನುಭವಿಸಿದವನಿಗೇ ಗೊತ್ತು ಅದರ ನೋವಿನ ಸುಖ. ಪ್ರೀತಿ ಕವಿನ್ನಾಗಿಸುತ್ತದೆ, ಭಗ್ನ ಪ್ರೇಮ ದಿವ್ಯಜ್ಞಾನಿಯನ್ನಾಗಿಸುತ್ತದೆ. ಇಂತಹ ತಾಕತ್ತು ಜಗತ್ತಿನ ಮತ್ಯಾವುದಾದರೂ ಭಾವಕ್ಕಿದೆಯೇ?
“ಕಿ ಆದತ್ ಬನ್ ಗಯ್ ಹೋ ತುಮ್
ಹರ್ ಸಾಸ್ ಮೆ ಯೂ ಆತೆ ಜಾತೆ ಹೋ
ಜೈಸೆ ಮೇರಿ ಇಬಾದತ್ ಬನ್ ಗಯ್ ಹೋ ತುಮ್”
-ವಿ.ಬಿ