ಕರುನಾಡಿನ ಪ್ರೇಕ್ಷಕರ ನಾಡಿಮಿಡಿತ ಅರಿತ ಕ್ಯೂಟ್ ಕಪಲ್ ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ಕಾಂಬಿನೇಷನ್ ಅಂದರೆ ಅಲ್ಲಿ ಮ್ಯಾಜಿಕ್ ಗ್ಯಾರಂಟಿ. ಲವ್ ಮಾಕ್ಟೇಲ್ ಸರಣಿಯ ಮೂಲಕ ಕನ್ನಡಿಗರ ಹೃದಯ ಕದ್ದಿದ್ದ ಈ ಜೋಡಿ ಈಗ ಲವ್ ಮಾಕ್ಟೇಲ್ 3 ಮೂಲಕ ಮತ್ತೊಮ್ಮೆ ಪ್ರೇಮಲೋಕ ಸೃಷ್ಟಿಸಿದೆ. ಚಿತ್ರಮಂದಿರಗಳಲ್ಲಿ ಆದಿಯ ಹೊಸ ಪಯಣಕ್ಕೆ ಸಿನಿರಸಿಕರು ಫಿದಾ ಆಗಿದ್ದು ಬಾಕ್ಸ್ ಆಫೀಸ್ ಕಲೆಕ್ಷನ್ ನಲ್ಲಿ ಹೊಸ ಇತಿಹಾಸ ಬರೆಯುವತ್ತ ಸಿನಿಮಾ ಮುನ್ನುಗ್ಗುತ್ತಿದೆ.
ಯಾವುದೇ ಸಿನಿಮಾದ ಅಸಲಿ ತಾಕತ್ತು ಗೊತ್ತಾಗುವುದೇ ವೀಕೆಂಡ್ ನಲ್ಲಿ. ಮೊದಲ ಎರಡು ದಿನ ಕೊಂಚ ಸೈಲೆಂಟ್ ಆಗಿದ್ದ ಆದಿ ಮೂರನೇ ದಿನ ಅಂದರೆ ಶನಿವಾರ ಬಾಕ್ಸ್ ಆಫೀಸ್ ನಲ್ಲಿ ಬಿರುಗಾಳಿ ಎಬ್ಬಿಸಿದ್ದಾನೆ. ಶುಕ್ರವಾರದವರೆಗೆ ಒಂದೂವರೆ ಕೋಟಿ ಆಸುಪಾಸಿನಲ್ಲಿದ್ದ ಕಲೆಕ್ಷನ್ ಶನಿವಾರದ ರಜೆಯ ಮಜಾದಲ್ಲಿ ಬರೋಬ್ಬರಿ ಎರಡು ಕೋಟಿ ರೂಪಾಯಿಗಳನ್ನು ಕಲೆಹಾಕಿದೆ. ಕೇವಲ ಮೂರು ದಿನಗಳಲ್ಲಿ ನಾಲ್ಕುವರೆ ಕೋಟಿ ರೂಪಾಯಿ ಬಾಚಿಕೊಂಡಿರುವ ಲವ್ ಮಾಕ್ಟೇಲ್ 3 ಗಾಂಧಿನಗರದ ಮುಖದಲ್ಲಿ ಮಂದಹಾಸ ಮೂಡಿಸಿ ಸ್ಯಾಂಡಲ್ ವುಡ್ ಗೆ ಹೊಸ ಚೈತನ್ಯ ತುಂಬಿದೆ.
ಈ ಗೆಲುವು ಸಾಮಾನ್ಯದ್ದಲ್ಲ. ಮಾರ್ಚ್ 19ರಂದು ಬಾಲಿವುಡ್ ಅಂಗಳದಿಂದ ಬಿಗ್ ಬಜೆಟ್ ನ ಧುರಂಧರ್ 2 ಹಾಗೂ ಟಾಲಿವುಡ್ ನಿಂದ ಪವರ್ ಸ್ಟಾರ್ ಅಭಿನಯದ ಉಸ್ತಾದ್ ಭಗತ್ ಸಿಂಗ್ ಸಿನಿಮಾಗಳು ಅಬ್ಬರದಿಂದ ತೆರೆಕಂಡಿದ್ದವು. ಈ ಪರಭಾಷಾ ದೈತ್ಯ ಸಿನಿಮಾಗಳಬ್ಬರದ ನಡುವೆ ನಮ್ಮ ಕನ್ನಡದ ಕೃಷ್ಣನ ಪ್ರೇಮಕಥೆ ಏನಾಗುತ್ತದೆಯೋ ಎಂಬ ಆತಂಕ ಸಿನಿಪಂಡಿತರದ್ದಾಗಿತ್ತು. ಆದರೆ ಕಂಟೆಂಟ್ ಇಸ್ ಕಿಂಗ್ ಎಂಬುದನ್ನು ಕನ್ನಡಿಗರು ಮತ್ತೆ ಸಾಬೀತು ಮಾಡಿದ್ದಾರೆ. ಪರಭಾಷಾ ಸಿನಿಮಾಗಳಿಗೆ ಸೆಡ್ಡು ಹೊಡೆದಿರುವ ಈ ಚಿತ್ರ ಬೆಂಗಳೂರಿನಾದ್ಯಂತ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಬೇಡಿಕೆ ಎಷ್ಟಿದೆ ಅಂದರೆ ಬೇರೆ ಭಾಷೆಯ ಶೋಗಳನ್ನು ಕ್ಯಾನ್ಸಲ್ ಮಾಡಿ ಲವ್ ಮಾಕ್ಟೇಲ್ 3 ಪ್ರದರ್ಶನವನ್ನು ಹೆಚ್ಚಿಸಲಾಗುತ್ತಿದೆ. ಇದು ಅಪ್ಪಟ ಕನ್ನಡದ ಕಂಟೆಂಟ್ ಗೆ ಸಿಕ್ಕ ದೊಡ್ಡ ಗೆಲುವು.
ಕೃಷ್ಣ ಮತ್ತು ಮಿಲನಾ ನಾಗರಾಜ್ ನಿರ್ಮಾಣದ ಈ ಅದ್ಭುತ ಪ್ರೇಮಕಾವ್ಯದಲ್ಲಿ ಬೃಹತ್ ತಾರಾಗಣವೇ ಇದೆ. ಅಮೃತಾ ಅಯ್ಯಂಗಾರ್ ಅವರ ಕ್ಯೂಟ್ ನಟನೆ ಸಂವೃತಾ ಶ್ವೇತಾ ಪ್ರಸಾದ್ ಹಾಗೂ ದಿಲೀಪ್ ರಾಜ್ ಅವರ ಪರಿಪಕ್ವ ಅಭಿನಯ ಸಿನಿಮಾಗೆ ದೊಡ್ಡ ಪ್ಲಸ್ ಪಾಯಿಂಟ್. ಇದರ ಜೊತೆಗೆ ನಕುಲ್ ಅಭ್ಯಂಕರ್ ಅವರ ಸಂಗೀತ ಮೋಡಿ ಮಾಡಿದೆ. ಕಿವಿಗೆ ಇಂಪಾಗುವ ಮಧುರವಾದ ಹಾಡುಗಳು ಪ್ರೇಕ್ಷಕರನ್ನು ಮತ್ತೆ ಮತ್ತೆ ಥಿಯೇಟರ್ ಕಡೆ ಹೆಜ್ಜೆ ಹಾಕುವಂತೆ ಮಾಡುತ್ತಿವೆ. ಶ್ರೀ ಕ್ರೇಜಿ ಮೈಂಡ್ಸ್ ಅವರ ಕ್ಯಾಮೆರಾ ಕೈಚಳಕ ಮತ್ತು ಕತ್ತರಿ ಪ್ರಯೋಗ ಸಿನಿಮಾಕ್ಕೊಂದು ರಿಚ್ ಲುಕ್ ಕೊಟ್ಟಿದೆ.
ಆ್ಯಕ್ಷನ್ ಮಾಸ್ ಸಿನಿಮಾಗಳ ಭರಾಟೆಯ ನಡುವೆಯೂ ಫೀಲ್ ಗುಡ್ ಪ್ರೇಮಕಥೆಗಳಿಗೆ ಕರುನಾಡಿನಲ್ಲಿ ಎಂದಿಗೂ ಸಾವಿಲ್ಲ ಎಂಬುದನ್ನು ಡಾರ್ಲಿಂಗ್ ಕೃಷ್ಣ ಮತ್ತೊಮ್ಮೆ ನಿರೂಪಿಸಿದ್ದಾರೆ. ಯುವಜನತೆ ಮಾತ್ರವಲ್ಲದೆ ಫ್ಯಾಮಿಲಿ ಆಡಿಯನ್ಸ್ ಕೂಡ ಚಿತ್ರಮಂದಿರದತ್ತ ಹರಿದು ಬರುತ್ತಿದ್ದಾರೆ. ಇದೇ ರೀತಿ ಕಲೆಕ್ಷನ್ ಅಬ್ಬರ ಮುಂದುವರಿದರೆ ಮುಂದಿನ ಕೆಲವೇ ದಿನಗಳಲ್ಲಿ ಲವ್ ಮಾಕ್ಟೇಲ್ 3 ಹತ್ತು ಕೋಟಿ ಕ್ಲಬ್ ಸೇರುವುದರಲ್ಲಿ ಯಾವುದೇ ಅನುಮಾನವಿಲ್ಲ. ಭರ್ಜರಿ ಮನರಂಜನೆ ನೀಡುತ್ತಿರುವ ಈ ಚಿತ್ರಕ್ಕೆ ಕರುನಾಡು ಜೈ ಎಂದಿದೆ.








