ತೆಲುಗಿನ `ಲವ್ ಮಾಕ್ಟೇಲ್ ನಲ್ಲಿ ಮಿಲ್ಕಿ ಬ್ಯೂಟಿ ತಮನ್ನಾ’
ಈ ವರ್ಷದಾರಂಭದಲ್ಲಿ ತೆರೆಕಂಡ ಕನ್ನಡ ಲವ್ ಮಾಕ್ಟೇಲ್ ಸಿನಿ ರಸಿಕರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ನಾಗರಾಜ್ ಜೋಡಿಯಾಗಿ ಅಭಿನಯಿಸಿದ್ದ ಈ ಸಿನಿಮಾ ಬಾಕ್ಸಾಫಿಸ್‌ನಲ್ಲಿ ಸಾಕಷ್ಟು ಸದ್ದು ಮಾಡಿ ಸುದ್ದಿಯಾಗಿತ್ತು. ಲವ್ ಮಾಕ್ಟೇಲ್ ಗೆ ಆನ್ ಲೈನ್ ಮತ್ತು ಸೋಶಿಯಲ್ ಮೀಡಿಯಾಗಳಲ್ಲೂ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿತ್ತು. ಚಿತ್ರದ ಬಗ್ಗೆ ಪರಭಾಷೆಯ ಕಲಾವಿದರು, ನಿರ್ದೇಶಕರು ಕೂಡ ಮೆಚ್ಚುಗೆಯ ಮಾತುಗಳನ್ನಾಡಿದ್ದರು. ಇದರ ಮಧ್ಯೆ ಈ ಸಿನಿಮಾ ತೆಲುಗಿನಲ್ಲಿ ರಿಮೇಕ್ ಆಗಲಿದೆ ಎಂದು ಸುದ್ದಿ ಹರಿದಾಡಿತ್ತು.
ಅದರಂತೆ ಇದೀಗ ‘ಲವ್ ಮಾಕ್ಟೇಲ್’ ತೆಲುಗಿನಲ್ಲಿ ರಿಮೇಕ್ ಆಗುತ್ತಿದ್ದು, ಚಿತ್ರದ ರಿಮೇಕ್ ಹಕ್ಕುಗಳು ಈಗಾಗಲೇ ಮಾರಾಟವಾಗಿವೆ. ತೆಲುಗಿನಲ್ಲೂ ಈ ಚಿತ್ರ ‘ಲವ್ ಮಾಕ್ಟೇಲ್’ ಎನ್ನುವ ಹೆಸರಿನಲ್ಲಿ ತೆರೆಗೆ ಬರುತ್ತಿದ್ದು, ಚಿತ್ರವನ್ನು ನಾಗಶೇಖರ್ ನಿರ್ದೇಶನ ಮಾಡುತ್ತಿದ್ದಾರೆ.
ನಿಧಿಮಾ ಪಾತ್ರದಲ್ಲಿ ತಮನ್ನಾ ಭಾಟಿಯಾ
ಲವ್ ಮಾಕ್ಟೇಲ್ ಸಿನಿಮಾದಲ್ಲಿ ನೋಡುಗರನ್ನು ಮೋಡಿ ಮಾಡಿದ್ದ ಆದಿ ಮತ್ತು ನಿಧಿಮಾ ಪಾತ್ರಗಳನ್ನು ತೆಲುಗಿನಲ್ಲಿ ಯಾರು ಮಾಡ್ತಾರೆ ಎಂದು ಈಗ ರಿವೀಲ್ ಆಗಿದ್ದು, ನಿಧಿಮಾ ಪಾತ್ರವನ್ನು ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ನಾಯಕಿಯಾಗಿ ಅಭಿನಯಿಸಲಿದ್ದಾರೆ ಎನ್ನುವ ಸುದ್ದಿ ಜೋರಾಗಿ ಹರಿದಾಡುತ್ತಿದೆ. ಹಾಗೇ ಚಿತ್ರದಲ್ಲಿ ಬರುವ ಕೃಷ್ಣನ ಪಾತ್ರದಲ್ಲಿ ಸತ್ಯದೇವ್ ನಟಿಸುತ್ತಿದ್ದಾರೆ ಎನ್ನುವ ಸುದ್ದಿ ಹರಿದಾ ಡುತ್ತಿದೆ. ಈ ಚಿತ್ರಕ್ಕೆ ಸತ್ಯ ಹೆಗಡೆ ಕ್ಯಾಮೆರಾ ಕೆಲಸ ನಿರ್ವಹಿಸುತ್ತಿದ್ದು, ತೆಲುಗಿನಲ್ಲಿ ಭಾವನಾ ರವಿ ಮತ್ತು ನಾಗಶೇಖರ್ ಜಂಟಿಯಾಗಿ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.