ವಿಜಯಪುರ: ಒಬ್ಬರನ್ನು ಒಬ್ಬರು ತಬ್ಬಿಕೊಂಡು ಬಾವಿಗೆ ಹಾರಿ ಪ್ರೇಮಿಗಳಿಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ವಿಜಯಪುರದ ಇಂಡಿ ತಾಲೂಕಿನ ತಾಂಬಾ ಗ್ರಾಮದಲ್ಲಿ ನಡೆದಿದೆ. 21 ವರ್ಷದ ಗಂಗಾಧರ ನಡಗಡ್ಡಿ ಮತ್ತು ರಕ್ಷಿತಾ ಶಿಂಗೆ ಆತ್ಮಹತ್ಯೆಗೆ ಶರಣಾದ ಪ್ರೇಮಿಗಳಾಗಿದ್ದಾರೆ.
ಗಂಗಾಧರ ಮತ್ತು ರಕ್ಷಿತಾ ಮೂರು ವರ್ಷಗಳಿಂದ ಪರಸ್ಪರ ಪ್ರೀತಿ ಮಾಡುತ್ತಿದ್ದರು. ಇವರಿಬ್ಬರ ಮದುವೆಗೆ ಮನೆಯಲ್ಲಿ ವಿರೋಧ ವ್ಯಕ್ತಪಡಿಸಿದ್ದು, ರಕ್ಷಿತಾಗೆ ಎರಡು ತಿಂಗಳು ಹಿಂದೆಯಷ್ಟೆ ಬೇರೆ ಹುಡುಗನ ಜೊತೆ ಪೋಷಕರು ಮದುವೆ ಮಾಡಿಸಿದ್ದರು. ಆದ್ರೆ ರಕ್ಷಿತಾಗೆ ವಿವಾಹವಾಗಿ ಪತಿಯೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಲು ಸಾಧ್ಯವಾಗಿಲ್ಲ. ಕೊನೆಗೆ ಎರಡು ದಿನಗಳ ಹಿಂದೆ ರಕ್ಷಿತಾ ತನ್ನ ಪ್ರಿಯಕರ ಗಂಗಾಧರನ ಜೊತೆ ತನ್ನ ತಂದೆಯ ಹೊಲದಲ್ಲಿದ್ದ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಇಂದು ಬಾವಿಯಿಂದ ಕೆಟ್ಟ ವಾಸನೆ ಬರುತ್ತಿದ್ದ ಕಾರಣ, ಅಲ್ಲಿಗೆ ಹೋಗಿ ಪರಿಶೀಲಿಸಿದ್ದಾಗ ಘಟನೆ ಬೆಳಕಿಗೆ ಬಂದಿದೆ.
ನಂತರ ಈ ಬಗ್ಗೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ. ಮಾಹಿತಿ ತಿಳಿದ ಇಂಡಿ ಗ್ರಾಮೀಣ ಪೊಲೀಸರು ಸ್ಥಳಕ್ಕೆ ಬಂದು ಮೃತದೇಹಗಳನ್ನು ಬಾವಿಯಿಂದ ಮೇಲಕ್ಕೆತ್ತಿದ್ದಾರೆ.








