ಜಮ್ಮುಕಾಶ್ಮೀರದಲ್ಲಿ ಗುಂಡಿನ ಚಕಮಕಿ : ಇಬ್ಬರು ಉಗ್ರರು ಸಾವು
ಶ್ರೀನಗರ : ಜಮ್ಮು ಕಾಶ್ಮೀರದ ಪರಿಂಪೋರಾ ಪ್ರದೇಶದಲ್ಲಿ ನಡೆದ ಎನ್ ಕೌಂಟರ್ ನಲ್ಲಿ ಪಾಕಿಸ್ತಾನದ ಇಬ್ಬರು ಭಯೋತ್ಪಾದಕರು ಮತ್ತು ಲಷ್ಕತ್-ಎ-ತೈಬಾ ಕಮಾಂಡರ್ ನದೀಮ್ ಅಬ್ರಾರ್ ಸಾವನ್ನಪಿದ್ದಾರೆ.
ನದೀಮ್ ಅಬ್ರಾರ್, ಭದ್ರತಾ ಪಡೆಗಳ ಹಾಗೂ ಹಲವಾರು ನಾಗರಿಕರ ಹತ್ಯೆಯಲ್ಲಿ ಭಾಗಿಯಾಗಿದ್ದು, ಈತನನ್ನ ಪೊಲೀಸರು ನಿನ್ನೆ ಸಂಜೆ ಕಸ್ಟಡಿಗೆ ತೆಗೆದುಕೊಂಡಿದ್ದರು. ವಿಚಾರಣೆಯಲ್ಲಿ ಅಬ್ರಾರ್ ತನ್ನ ಮನೆಯಲ್ಲಿ ಎಕೆ47 ರೈಫಲ್ ನನ್ನು ಮನೆಯಲ್ಲಿ ಇಟ್ಟುಕೊಂಡಿರುವ ವಿಚಾರ ಬಹಿರಂಗ ಪಡಿಸಿದ್ದಾನೆ.

ಇದರ ಮಾಹಿತಿ ಮೇರೆಗೆ ಪೊಲೀಸರು ಅಬ್ರಾರ್ ಮನೆಗೆ ಹೋದಾಗ ಮನೆಯಲ್ಲಿ ಅಡವಿಕೊಂಡಿದ್ದ ಆರೋಪಿಯ ಸಹಚರರಿಬ್ಬರು ಗುಂಡು ಹಾರಿಸಿದ್ದಾರೆ. ಈ ವೇಳೆ ಗುಂಡಿನ ಚಕಮಕಿ ನಡೆದಿದ್ದು, ಮನೆಯಲ್ಲಿದ್ದ ಭಯೋತ್ಪಾದಕರು ಮತ್ತು ಅಬ್ರಾರ್ ರನ್ನು ಗುಂಡು ಹಾರಿಸಿ ಕೊಲ್ಲಲಾಗಿದೆ ಎಂದು ಕಾಶ್ಮೀರದ ಐಜಿಪಿ ವಿಜಯ್ ಕುಮಾರ್ ಹೇಳಿದ್ದಾರೆ.
ಇನ್ನು ಈ ಗುಂಡಿನ ಚಕಮಕಿಯಲ್ಲಿ ಮೂವರು ಸಿಆರ್‍ಎಫ್ ಸಿಬ್ಬಂದಿ- ಸಹಾಯಕ ಕಮಾಂಡೆಂಟ್ ಮತ್ತು ಸಬ್‍ಇನ್ಸ್‍ಪೆಕ್ಟರ್ ಮತ್ತು ಕಾನ್ಸ್ ಟೇಬಲ್ ಕೂಡ ಗಾಯಗೊಂಡಿದ್ದಾರೆ. ಅವರಿಗೆ ಚಿಕಿತ್ಸೆ ಮುಂದುವರೆದಿದೆ.








