ಬಿಎಸ್ ವೈ & ಹೈಕಮಾಂಡ್ ನಡುವೆ ಅಗ್ರಿಮೆಂಟ್ ಆಗಿತ್ತು : ಬಿಜೆಪಿ ಸಂಸದ
ಚಾಮರಾಜನಗರ : ಹೈಕಮಾಂಡ್ ಮತ್ತು ಯಡಿಯೂರಪ್ಪ ನಡುವೆ ಎರಡು ವರ್ಷಗಳ ಅಗ್ರಿಮೆಂಟ್ ಆಗಿತ್ತು ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ರಾಜೀನಾಮೆ ವಿಚಾರದ ಕುರಿತು ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಸ್ಫೋಟಕ ಮಾಹಿತಿ ಬಿಚ್ಚಿಟ್ಟಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಮೇಲಿನ ವಿಚಾರವನ್ನು ಬಹಿರಂಗ ಪಡಿಸಿದರು. ಮೈತ್ರಿ ಸರ್ಕಾರ ಪತನಗೊಂಡು ಬಿಜೆಪಿ ಅಧಿಕಾರಕ್ಕೆ ಬಂದಾಗ ಬಿಎಸ್ ಯಡಿಯೂರಪ್ಪ ಮತ್ತು ಬಿಜೆಪಿ ಹೈಕಮಾಂಡ್ ಮಧ್ಯೆ ಒಂದು ಒಪ್ಪಂದ ಆಗಿತ್ತು.
ನಿಮಗೆ ವಯಸ್ಸಾಗಿದ್ದರೂ ಅವಕಾಶ ಕೊಡುತ್ತೇವೆ. ಎರಡು ವರ್ಷ ಸಿಎಂ ಆಗಿ ಅಂತಾ ಹೈ ಕಮಾಂಡ್ ಹೇಳಿತ್ತು. ಸಿಎಂ ಬಿಎಸ್ ವೈ ಹಾಗೂ ಹೈಕಮಾಂಡ್ ನಡುವೆ ನಡೆದಿದ್ದ ಮಾತುಕತೆ ಪ್ರಕಾರ ಈಗ ಅವರು ರಾಜೀನಾಮೆಗೆ ಮುಂದಾಗಿದ್ದಾರೆ ಎಂದು ತಿಳಿಸಿದರು.
ಇದೇ ವೇಳೆ ವಲಸಿಗರಿಗೆ ಮಂತ್ರಿ ಸ್ಥಾನ ಕೊಡಬಾರದು ಎಂಬ ವಿಶ್ವನಾಥ್ ಹೇಳಿಕೆಗೆ ಆಕ್ರೋಶ ಹೊರಹಾಕಿದ ಶ್ರೀನಿವಾಸ್ ಪ್ರಸಾದ್, ವಿಶ್ವನಾಥ್ ಹೇಳಿಕೆಗೆ ಚಿಕ್ಕಾಸಿನ ಬೆಲೆ ಇಲ್ಲ.
ವಿಶ್ವನಾಥ್ ಹತಾಶವಾದ ಹೇಳಿಕೆ ಕೊಡುತ್ತಿದ್ದಾರೆ. ವಿಶ್ವನಾಥ್ ಏನ್ ಬಿಜೆಪಿ ಹೈಕಮಾಂಡಾ.. ಎಂದು ಪ್ರಶ್ನಿಸಿ ನಮ್ಮ ತೇವಲಿಗೆ ಈ ರೀತಿಯ ಹೇಳಿಕೆ ಕೊಡಬಾರದು ಎಂದು ಗರಂ ಆದರು.









